Site icon Vistara News

ಮೂಲ ಸೌಕರ್ಯ ಸರಿಪಡಿಸದೆ ಇದ್ದರೆ ಬೆಂಗಳೂರಿನಿಂದ ವಲಸೆ: ಐಟಿ ಕಂಪನಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ

outer ring road

ಬೆಂಗಳೂರು: ರಾಜಧಾನಿಯ ಮೂಲ ಸೌಕರ್ಯಗಳಿಗೆ ಸಂಬಂಧಿಸಿ ಹಿರಿಯ ಉದ್ಯಮಿ ಮೋಹನ್‌ ದಾಸ್‌ ಪೈ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೇ ದೂರು ನೀಡಿದ ಬೆನ್ನಿಗೇ ಇದೀಗ ಸರಕಾರಕ್ಕೆ ಇನ್ನೊಂದು ಶಾಕ್‌ ಎದುರಾಗಿದೆ. ಸಂಚಾರ ಸಮಸ್ಯೆ, ಮಳೆ ಹಾನಿಗಳಿಂದ ನೂರಾರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿನ ಕಂಪನಿಗಳ ಸಂಘ (ಒರ್ಕಾ-ORRCA) ಮುಖ್ಯಮಂತ್ರಿಗಳಿಗೆ ಸುದೀರ್ಘ ಪತ್ರ ಬರೆದಿದೆ. ಇಲ್ಲಿನ ಅವ್ಯವಸ್ಥೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಮನವಿ ಮಾಡಿರುವ ಧ್ವನಿಯಲ್ಲಿಯೇ, ಇಲ್ಲಿನ ಸಮಸ್ಯೆಗಳಿಂದ ನೊಂದು ಇಲ್ಲಿನ ಐಟಿ ಮತ್ತು ಬ್ಯಾಂಕಿಂಗ್‌ ಕಂಪನಿಗಳು ಹೊರ ರಾಜ್ಯಕ್ಕೆ ವಲಸೆ ಹೋಗುವ ಬಗ್ಗೆಯೂ ಯೋಚಿಸುತ್ತಿವೆ ಎಂದು ತಣ್ಣಗೆ ಎಚ್ಚರಿಕೆ ನೀಡಿದೆ.

ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌. ಪುರಂವರೆಗಿನ ಸುಮಾರು ೧೭ ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯಲ್ಲಿ ನೂರಾರು ಐಟಿ ಮತ್ತು ಬ್ಯಾಂಕಿಂಗ್‌ ಕಂಪನಿಗಳಿವೆ. ಇವು ಐದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗವನ್ನು ನೀಡಿವೆ. ವರ್ಷಕ್ಕೆ ೨೨ ಬಿಲಿಯನ್‌ ಡಾಲರ್‌ ಆದಾಯವನ್ನು ನೀಡುತ್ತಿವೆ. ಅಂದರೆ ಬೆಂಗಳೂರಿನ ಒಟ್ಟಾರೆ ಆದಾಯದ ಶೇಕಡಾ ೩೨ರಷ್ಟು ಭಾಗ ಇದೇ ಕಾರಿಡಾರ್‌ನಿಂದ ಹುಟ್ಟುತ್ತಿದೆ. ಆದರೆ ಈ ಭಾಗದ ಮೂಲ ಸೌಕರ್ಯ ವ್ಯವಸ್ಥೆಗಳು ಅತ್ಯಂತ ಕೆಟ್ಟದಾಗಿದ್ದು, ಇದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯಾವ ಪ್ರಾಮಾಣಿಕ ಪ್ರಯತ್ನಗಳೂ ನಡೆಯುತ್ತಿಲ್ಲ ಎಂದು ಸರಕಾರಕ್ಕೆ ಬರೆದ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿವೆ.

ಕಾರಿಡಾರ್‌ನಲ್ಲಿನ ಕಳಪೆ ಮೂಲ ಸೌಕರ್ಯಗಳಿಂದಾಗಿ ಕಂಪನಿಗಳ ಸಾಮರ್ಥ್ಯ ಮತ್ತು ಉತ್ಪಾದಕತೆ ತುಂಬಾ ಕಡಿಮೆಯಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಇಲ್ಲಿನ ಉದ್ಯೋಗಿಗಳ ಸುರಕ್ಷತೆಯೂ ಅಪಾಯದಲ್ಲಿ ಸಿಲುಕಿದೆ. ಕಳೆದ ಆಗಸ್ಟ್‌ ೩೦ರಂದು ಸುರಿದ ಭಾರಿ ಮಳೆ ಮತ್ತು ಉಂಟಾದ ಪ್ರವಾಹದಿಂದಾಗಿ ಉದ್ಯೋಗಿಗಳು ಸುಮಾರು ಐದು ಗಂಟೆಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದರು. ಇದರಿಂದ ೨೨೫ ಕೋಟಿ ರೂ. ನಷ್ಟ ಉಂಟಾಗಿದೆ. ಇಲ್ಲಿನ ಅವ್ಯವಸ್ಥೆಯ ಸಂಕಷ್ಟ ಎಷ್ಟು ಗಾಢವಾಗಿದೆ ಎಂದರೆ ಒಟ್ಟು ಉದ್ಯೋಗಿಗಳಲ್ಲಿ ಶೇ. ೩೦ರಷ್ಟು ಮಂದಿ ಮತ್ತೆ ವರ್ಕ್‌ ಹೋಮ್‌ಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನ ನಿಭಾಯಿಸಲಾಗದ ಅಸಹಾಯಕತೆ ಈಗ ಜಾಗತಿಕ ಗಮನವನ್ನು ಸೆಳೆದಿದೆ. ಇಲ್ಲಿ ಹೂಡಿಕೆ ಮಾಡಿರುವ ಕಂಪನಿಗಳು ಮುಂದೇನು ಎನ್ನುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿವೆ. ಇಲ್ಲಿನ ಕಂಪನಿಗಳನ್ನು ಮುಂದುವರಿಸಬೇಕೇ ಬೇಡವೇ? ಉದ್ಯೋಗಿಗಳನ್ನು ಪೂರ್ಣ ಪ್ರಮಾಣದಲ್ಲಿ ವರ್ಕ್‌ ಫ್ರಂ ಹೋಮ್‌ ಆಗಿ ನಿಯೋಜಿಸಿದರೆ ಹೇಗೆ? ಅಥವಾ ಇಲ್ಲಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಿದರೆ ಹೇಗೆ ಎಂಬ ಮಟ್ಟಕ್ಕೆ ಯೋಚನೆ ಮಾಡುತ್ತಿವೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.

ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದೇನಿಲ್ಲ. ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಅವೆಲ್ಲವೂ ನಾನಾ ಕಾರಣಗಳಿಗಾಗಿ ನಿಂತು ಹೋಗಿವೆ. ಇದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ೨೦೧೯ರಲ್ಲಿ ನಾವು ಸರಕಾರಕ್ಕೆ ಮನವಿ ಕೊಟ್ಟಾಗ ಆಗಿನ ಮುಖ್ಯಮಂತ್ರಿಗಳು ಆಗಮಿಸಿದ್ದರು. ಇಲ್ಲಿನ ಟ್ರಾಫಿಕ್‌ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಘೋಷಿಸಿದ್ದರು. ಆದರೆ ಯಾವುದೂ ಜಾರಿಗೆ ಬಂದಿಲ್ಲ ಎಂದು ಪತ್ರದಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ.

ಸರ್ಕಾರ ಮೂಲಭೂತ ಸಮಸ್ಯೆಗಳನ್ನು ಸಣ್ಣ, ಮಧ್ಯಮ ಮತ್ತು ದೂರಗಾಮಿ ಗುರಿಗಳನ್ನು ಇಟ್ಟುಕೊಂಡು, ಒಂದರ ಹಿಂದೊಂದರಂತೆ ಸರಿಪಡಿಸುತ್ತಾ ಸಾಗಬೇಕು. ಒಂದು ವೇಳೆ ಪರಿಸ್ಥಿತಿ ಸುಧಾರಿಸದೆ ಹೋದರೆ ಕಂಪನಿಗಳು ಪರ್ಯಾಯ ದಾರಿಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂಬ ಅಭಿಪ್ರಾಯದಲ್ಲಿವೆ ಎಂಬ ಎಚ್ಚರಿಕೆಯನ್ನು ಕೊಡಲಾಗಿದೆ.

ಸಮಸ್ಯೆಗಳಿಗೆ ಕಂಪನಿಗಳೂ ಕಾರಣ ಎಂದ ಜೋಶಿ
ಐಟಿ ಮತ್ತು ಬ್ಯಾಂಕಿಂಗ್‌ ಕಂಪನಿಗಳ ಆಕ್ರೋಶದ ಪತ್ರಕ್ಕೆ ಉತ್ತರ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ʻʻಸಮಸ್ಯೆಗಳನ್ನು ಸಿಎಂಗೆ ಹೇಳುವಲ್ಲಿನ ಅವರ ಕಾಳಜಿಯನ್ನು ನಾನು ಒಪ್ಪುತ್ತೇನೆ. ಅತಿಕ್ರಮಣ ಮಾಡಿದವರಲ್ಲಿ ಐಟಿಯವರೂ ಇದ್ದಾರೆ. ಬೇರೆ ಬೇರೆ ಉದ್ಯಮದವರೂ ಇದ್ದಾರೆʼʼ ಎನ್ನುವುದನ್ನೂ ನೆನಪಿಟ್ಟುಕೊಳ್ಳಬೇಕು ಎಂದಿದ್ದಾರೆ.

ʻʻʻನೀರು ಹರಿಯದಂತೆ ಮಾಡಲಾಗಿದೆ. ಕೆರೆ, ಕಾಲುವೆಗಳನ್ನು ಅತಿಕ್ರಮಣ ಮಾಡಿದ್ದಾರೆʼʼ ಎಂದ ಜೋಶಿ ಅವರು ರಾಜ್ಯ ಸರಕಾರವೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.

ಬೆಂಗಳೂರು ತೊರೆಯುವ ಬೆದರಿಕೆ ಸರಿಯಲ್ಲ ಎಂದ ಅಶ್ವತ್ಥ ನಾರಾಯಣ
ರಾಜಧಾನಿಯಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಆಗದೆ ಇದ್ದ ಮಳೆ ಈ ಬಾರಿ ಸುರಿಯುತ್ತಿದೆ. ಹೀಗಾಗಿ ತೊಂದರೆ ಆಗಿದೆ. ಇವುಗಳನ್ನು ಪರಿಹರಿಸಲು ಸರಕಾರ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರಿನ ರಸ್ತೆ ಅವ್ಯವಸ್ಥೆ ಮತ್ತು ಗುಂಡಿಗಳ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ ಮತ್ತು ಐಟಿ ಕಂಪನಿಗಳ ಸಂಘಟನೆ ಬೇಸರ ಹೊರಹಾಕಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

ಜಗತ್ತಿನ ಎಲ್ಲ ಮಹಾನಗರಗಳಲ್ಲೂ ಇಂತಹ ಸಮಸ್ಯೆಗಳಿವೆ. ಉದ್ಯಮಿಗಳು ಇವುಗಳ ಬಗ್ಗೆ ಗಮನ ಸೆಳೆಯುವುದರಲ್ಲಿ ತಪ್ಪೇನೂ ಇಲ್ಲ. ಅವರ ಬೇಡಿಕೆಯತ್ತ ನಾವು ಗಮನ ಹರಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಐಟಿ ಕಂಪನಿಗಳು ಬೆಂಗಳೂರನ್ನು ತೊರೆಯುವ ಬೆದರಿಕೆ ಹಾಕಿರುವುದು ಸರಿಯಲ್ಲ. ತಿಂಗಳ ಹಿಂದೆ ಹೈದರಾಬಾದ್ ನಗರ ಇದೇ ರೀತಿಯ ಮಳೆಯಿಂದ ಮುಳುಗಿ ಹೋಗಿತ್ತು. ಅಲ್ಲಿನ ರಸ್ತೆಗಳ ಮೇಲೆಲ್ಲ ಕಾರುಗಳು ತೇಲುತ್ತಿದ್ದವು. ಇದು ಉದ್ಯಮಿಗಳಿಗೂ ಗೊತ್ತಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ | ರಾಜಧಾನಿ ಅವ್ಯವಸ್ಥೆ ಬಗ್ಗೆ ಮತ್ತೆ ಮೋಹನ್‌ದಾಸ್‌ ಪೈ ಗರಂ, ಬೆಂಗಳೂರು ಉಳಿಸಿ ಎಂದು ಮೋದಿಗೆ ಮನವಿ

Exit mobile version