Site icon Vistara News

Davanagere News: ದಾವಣಗೆರೆ ಸಮೀಪದ ಕೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ; ವಿಷಪ್ರಾಶನ ಶಂಕೆ

Davanagere News

ದಾವಣಗೆರೆ: ಕೆರೆಯಲ್ಲಿ 1 ಲಕ್ಷಕ್ಕೂ ಅಧಿಕ ಮೀನುಗಳ ಮಾರಣ ಹೋಮವಾಗಿರುವ ಘಟನೆ ದಾವಣಗೆರೆ (Davanagere News) ಸಮೀಪದ ಎಲೆಬೇತೂರಿನ ಕೆರೆಯಲ್ಲಿ ನಡೆದಿದೆ. ಅಧಿಕ ಬಿಸಿಲಿನ ತಾಪಕ್ಕೆ ಮೀನುಗಳು ಮೃತಪಟ್ಟಿರಬಹುದಾ ಅಥವಾ ಹಳೇ ವೈಷಮ್ಯದಿಂದ ಯಾರಾದರೂ ಕೆರೆಗೆ ವಿಷ ಬೆರೆಸಿದ್ದರಿಂದ ಮೀನುಗಳು ಸಾವಿಗೀಡಾಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.

ಕೆರೆಯಲ್ಲಿ 1.50 ಲಕ್ಷ ಮೀನುಗಳನ್ನು ಸಾಕಲಾಗಿತ್ತು. ಅದರಲ್ಲಿ 40 ಸಾವಿರ ಮೀನು ಹಿಡಿದು ಮಾರಲಾಗಿತ್ತು. ಇನ್ನುಳಿದ ಸುಮಾರು ಲಕ್ಷಕ್ಕೂ ಅಧಿಕ ಮೀನುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬರೋಬ್ಬರಿ 5ರಿಂದ 10 ಕೆಜಿ ಇರುವ ಮೀನುಗಳು ಮೃತಪಟ್ಟು, ಕೆರೆಯಲ್ಲಿ ತೇಲುತ್ತಿವೆ. ಸತ್ತ ಮೀನುಗಳನ್ನು ನೋಡಿ ಮೀನು ಸಾಕಾಣಿಕೆದಾರರು ಕಂಗಾಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Murder Case: ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಕಿಯ ಕೊಲೆ ಮಾಡಿದ ಯುವತಿ ಸೆರೆ

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ದಾವಣಗೆರೆ: ಕುರಿಗೆ ಮೇವು ತರಲು ಹೋಗಿದ್ದ ಯುವಕ‌ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಬಿ.ಚಿತ್ತಾನಹಳ್ಳಿಯಲ್ಲಿ ನಡೆದಿದೆ. ಬಸವರಾಜ್ (18) ಮೃತ ದುರ್ದೈವಿ. ದಿವಂಗತ ಮಂಜುನಾಥ್, ಸೀತಮ್ಮ ದಂಪತಿಗಳ ದ್ವಿತೀಯ ಪುತ್ರ ಬಸವರಾಜ್ ಮುಂಜಾನೆ ಕುರಿಗಳಿಗೆ ಮೇವು ತರಲು ತೆರಳಿದ್ದ ವೇಳೆ ಅವಘಡ ನಡೆದಿದೆ.

ಮರ ಹತ್ತಿ ಸೊಪ್ಪು ಕತ್ತರಿಸುವ ವೇಳೆ ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version