ಬೆಂಗಳೂರು: ಹಿರಿಯೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿ 750ಕ್ಕೂ ಹೆಚ್ಚು ಮುಂಖಂಡರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ (Operation Hasta) ಸೇರ್ಪಡೆಯಾದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪೂರ್ಣಿಮಾ ಮತ್ತು ಶ್ರೀನಿವಾಸ್ ಸಾಮಾಜಿಕ ನ್ಯಾಯದ ಪರವಾಗಿರುವವರು. ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿದ್ದರು. ಈಗ ಕಾಂಗ್ರೆಸ್‌ಗೆ ಬಂದಿದ್ದಾರೆ. ಇವರಿಗೆ ರಾಜಕೀಯವಾಗಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಅಭಯ ನೀಡಿದರು.
ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಪರವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ ನಮ್ಮ ಕಾಂಗ್ರೆಸ್ . ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿ ಎ.ಕೃಷ್ಣಪ್ಪ, ಪೂರ್ಣಿಮಾ ಮತ್ತು ಶ್ರೀನಿವಾಸ್ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಬಿಜೆಪಿ ಜಾತಿ ತಾರತಮ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಎಲ್ಲಾ ಜಾತಿಯ ಬಡವರು ಮತ್ತು ಶೂದ್ರ ಸಮುದಾಯದವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ರಾಜಕೀಯ ನಿಲುವು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | Satish Jarakiholi : ಡಿಕೆಶಿ ಹಸ್ತಕ್ಷೇಪ ನಿಜ, ಆದರೂ ಕಾಂಪ್ರೊಮೈಸ್ ಆಗಿದ್ದೇನೆ ಎಂದ ಸತೀಶ್ ಜಾರಕಿಹೊಳಿ
ಪೂರ್ಣಿಮಾ, ಶ್ರೀನಿವಾಸ್ ಮತ್ತು ಇವರ ಬೆಂಬಲಿಗರಿಗೆ ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಇಲ್ಲ ಎನ್ನುವುದು ಸ್ಪಷ್ಟವಾಗಿ ಮನದಟ್ಟಾಗಿದೆ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ನಿಲುವು ಇಟ್ಟುಕೊಂಡಿರುವವರಿಗೆ ಬಹಳ ಕಷ್ಟ ಎನ್ನುವುದು ಇವರನ್ನು ನೋಡಿದಾಗ ಸ್ಪಷ್ಟವಾಗಿದೆ. ಅದಕ್ಕೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಿಂದುಳಿದ ಸಮುದಾಯದವರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವ ಡಿ.ಸುಧಾಕರ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೇರಿ ಗೊಲ್ಲ ಸಮುದಾಯದ ರಾಜ್ಯ ಮುಖಂಡರು, ವಿಧಾನ ಪರಿಷತ್ ಸದಸ್ಯರೂ ಆದ ನಾಗರಾಜ ಯಾದವ್ ಸೇರಿ ಹಲವು ಮಂದಿ ಉಪಸ್ಥಿತರಿದ್ದರು.
ಸುಳ್ಳೇ ಬಿಜೆಪಿಯ ಮನೆ ದೇವರು
ಸುಳ್ಳು ಬಿಜೆಪಿಯ ಮನೆ ದೇವರು. ಸುಳ್ಳುಗಳ ಮೂಲಕ ಜನರನ್ನು ಯಾಮಾರಿಸಿ, ದಿಕ್ಕು ತಪ್ಪಿಸಿ, ಹಾದಿ ತಪ್ಪಿಸಿ ಕೆಟ್ಟ ರಾಜಕಾರಣ ಮಾಡುತ್ತದೆ. ಅಧಿಕಾರಿ ಇದ್ದಾಗಲೂ ಸುಳ್ಳು, ಅಧಿಕಾರ ಇಲ್ಲದಿದ್ದಾಗಲೂ ಸುಳ್ಳುಗಳ ಮೇಲೆ ಅವಲಂಬನೆಯಾಗಿರುತ್ತದೆ. ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನಿಮ್ಮನ್ನೇ ಯಾಮಾರಿಸುವವರನ್ನು ಈ ಕ್ಷಣದಿಂದಲೇ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಇದನ್ನೂ ಓದಿ | DK Shivakumar : ಬಿಎಸ್‌ವೈ ರಾಜಕೀಯ ಕಾರಣಕ್ಕೆ ಸಿಬಿಐ ತನಿಖೆಗೆ ಆದೇಶ ಕೊಟ್ಟಿದ್ದರು; ಡಿ.ಕೆ.ಶಿವಕುಮಾರ್
ಗೊಲ್ಲ ಸಮುದಾಯದ ಪ್ರಮುಖ ನಾಯಕಿ
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಹಿಂದುಳಿದ ವರ್ಗ ಗೊಲ್ಲ ಸಮುದಾಯದ ಪ್ರಮುಖ ನಾಯಕಿ ಆಗಿದ್ದಾರೆ. ಅವರು ಹಿರಿಯ ಕಾಂಗ್ರೆಸ್ ಮುಖಂಡರಾದ ದಿವಂಗತ ಎ.ಕೃಷ್ಣಪ್ಪ ಅವರ ಪುತ್ರಿಯಾಗಿದ್ದು, ಅವರ ಪತಿ ಶ್ರೀನಿವಾಸ್, ಕೆ.ನರಸಿಂಹನಾಯಕ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಆಪರೇಷನ್ ಹಸ್ತ ವೇಗ ಪಡೆದಿದ್ದು, ವಿವಿಧ ಪಕ್ಷಗಳ ಹಲವು ನಾಯಕರನ್ನು ಪಕ್ಷಕ್ಕೆ ಸೆಳೆಯಲಾಗುತ್ತಿದೆ. ಇತ್ತೀಚೆಗೆ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಮಾಜಿ ಶಾಸಕರಾದ ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ ಮತ್ತು ಶಿರಹಟ್ಟಿಯ ರಾಮಪ್ಪ ಲಮಾಣಿ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ಘೋಷಿಸಿದ್ದರು.