Site icon Vistara News

Udupi Murder : ಅವಳು ಮಾತುಬಿಟ್ಟಿದ್ದನ್ನು ಸಹಿಸಲಾಗದೆ ಕೊಂದೇಬಿಟ್ಟ; ಗಗನಸಖಿ ಹತ್ಯೆ Inside story

Udupi Murder Praveen chougule and Aynaz

ಉಡುಪಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four of Family murdered) ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ (Udupi Murder) ಮಾಡಿದ ಘಟನೆಯ ಹಿಂದಿನ ನಿಗೂಢತೆ ಈಗ ಬಯಲಾಗಿದೆ. ಗಗನಸಖಿಯಾಗಿ ಜತೆಗೆ ಕೆಲಸ ಮಾಡುತ್ತಿದ್ದ ಅಯ್ನಾಜ್‌ ಬಗ್ಗೆ ವಿಪರೀತ ಪೊಸೆಸಿವ್‌ನೆಸ್‌ (Possessiveneness) ಹೊಂದಿದ್ದ ಪ್ರವೀಣ್‌ ಅರುಣ್‌ ಚೌಗುಲೆ (Praveen Arun Chougule) ಆಕೆ ಯಾವುದೋ ಕಾರಣಕ್ಕೆ ಮಾತು ಬಿಟ್ಟಿದ್ದನ್ನು ಸಹಿಸಲಾಗದೆ ಪ್ರಾಣವನ್ನೇ ತೆಗೆದಿದ್ದಾನೆ. ಈ ವಿಚಾರವನ್ನು ಉಡುಪಿ ಜಿಲ್ಲಾ ಎಸ್‌ಪಿ ಡಾ. ಅರುಣ್‌ ಕೆ. (Udupi SP Arun K) ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ನವೆಂಬರ್‌ 12ರಂದು ಭಾನುವಾರ ಮುಂಜಾನೆ ಪ್ರವೀಣ್‌ ಅರುಣ್‌ ಚೌಗುಲೆ ನೇಜಾರಿನ ತೃಪ್ತಿ ನಗರದಲ್ಲಿರುವ ನೂರ್‌ ಮಹಮ್ಮದ್‌ ಅವರ ಮನೆಗೆ ನುಗ್ಗಿ ನೂರ್‌ ಮಹಮದ್‌ ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್‌ (23), ಅಯ್ನಾಜ್‌ (21) ಮತ್ತು ಮಗ ಅಸೀಮ್‌ (14)ನನ್ನು ಕೊಂದು ಹಾಕಿದ್ದ. ಕೊಲೆಯಾದವರ ಪೈಕಿ ಅಫ್ನಾನ್‌ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರೆ, ಅಯ್ನಾಜ್‌ ಏರ್‌ ಹೋಸ್ಟೆಸ್‌ ಆಗಿ ಕೆಲಸ ಮಾಡುತ್ತಿದ್ದಳು. ಅಸೀಂ ಏಳನೇ ತರಗತಿಯಲ್ಲಿ ಓದುತ್ತಿದ್ದ. ಹಂತಕ ಪ್ರವೀಣ್‌ ಅರುಣ ಚೌಗುಲೆಯನ್ನು ಮೂರು ದಿನಗಳ ಬಳಿಕ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಿ ಕರೆತರಲಾಗಿತ್ತು. ಕೋರ್ಟ್‌ ಚೌಗುಲೆಯನ್ನು 14 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿತ್ತು. ಆತನ ಪೊಲೀಸ್‌ ಕಸ್ಟಡಿಗೆ ನವೆಂಬರ್‌ 25ಕ್ಕೆ ಮುಕ್ತಾಯವಾಗಲಿದೆ. ಈ ನಡುವೆ, ಪೊಲೀಸ್‌ ವಿಚಾರಣೆ ಬೇಗನೆ ಸಂಪೂರ್ಣವಾದ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಎಸ್‌ಪಿ ಡಾ. ಅರುಣ್‌ ಕೆ. ಹೇಳಿದ್ದಾರೆ. ಜತೆಗೆ ವಿಚಾರಣೆ ವೇಳೆ ಪ್ರವೀಣ್‌ ಅರುಣ್‌ ಚೌಗುಲೆ ಮಾಡಿದ್ದಕ್ಕೆ ಕಾರಣವನ್ನು ಬಾಯಿ ಬಿಟ್ಟಿದ್ದಾನೆ.

ವಿಪರೀತ ಪೊಸೆಸಿವ್‌ನೆಸ್‌ ಕೊಲೆಗೆ ಕಾರಣ

ಪ್ರವೀಣ್‌ ಚೌಗುಲೆಗೆ ಕೊಲೆ ಮಾಡುವ ಉದ್ದೇಶ ಇದ್ದಿದ್ದು ಗಗನಸಖಿಯಾಗಿದ್ದ ಅಯ್ನಾಝ್‌ಳನ್ನು. ಆದರೆ, ಮನೆಗೇ ಹೋಗಿ ಕೊಲೆ ಮಾಡಿದ್ದರಿಂದ ಉಳಿದ ಮೂವರು ಕೂಡಾ ಪ್ರಾಣ ಕಳೆದುಕೊಳ್ಳುವಂತಾಯಿತು. ಅಯ್ನಾಜ್‌ ಮೇಲಿನ ವಿಪರೀತ ಪೊಸೆಸಿವ್‌ನೆಸ್‌ ಈ ಕೊಲೆಗೆ ಪ್ರಮುಖ ಕಾರಣ ಎಂದು ಎಸ್‌ಪಿ ತಿಳಿಸಿದ್ದಾರೆ.

ಕೊಲೆಗಾರ ಪ್ರವೀಣ್ ಚೌಗುಲೆ ಮತ್ತು ಅಯ್ನಾಜ್‌ ಪರಸ್ಪರ ಪರಿಚಯ ಆಗಿದ್ದು ಕೇವಲ ಎಂಟು ತಿಂಗಳ ಹಿಂದೆ ಅಷ್ಟೆ. ಪ್ರವೀಣ್ ಮತ್ತು ಅಯ್ನಾಸ್ ಒಂದೇ ಟೀಮ್‌ನಲ್ಲಿ ಇದ್ದರು. ಅಯ್ನಾಜ್‌ ಗಗನಸಖಿಯಾಗಿದ್ದರೆ ಈತ ವಿಮಾನದಲ್ಲಿ ಸಹಾಯಕನಾಗಿದ್ದ. ಸೀಟು ಬೆಲ್ಟ್‌ಗಳನ್ನು ಹಾಕಿಕೊಳ್ಳುವುದು ಮೊದಲಾದ ಸೂಚನೆ ನೀಡುವ ಕೆಲಸ ಇವನದಾಗಿತ್ತು.

ಅಯ್ನಾಜ್‌ ಕೆಲಸಕ್ಕೆ ಸೇರಿದ ದಿನದಿಂದಲೂ ಪ್ರವೀಣ್‌ ಆಕೆಗೆ ಸಹಾಯ ಮಾಡುತ್ತಿದ್ದ. ಒಂದು ಕಚೇರಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದಾಗ ಸೀನಿಯರ್ಸ್‌ ಹೇಗೆ ಸಹಾಯ ಮಾಡುತ್ತಾರೋ ಹಾಗೆ ನಡೆದುಕೊಂಡಿದ್ದ. ಆಕೆಗೆ ಮಂಗಳೂರಲ್ಲಿ ಬಾಡಿಗೆ ಮನೆ ಹುಡುಕಲು ಸಹಾಯ ಮಾಡಿದ್ದ. ಕೆಲವೊಂದು ಸಂದರ್ಭದಲ್ಲಿ ಆಕೆ ಅವನ ವಾಹನವನ್ನೂ ಬಳಸುತ್ತಿದ್ದಳು.

ಈ ನಡುವೆ ಆತ ಸ್ವಲ್ಪ ಅತಿಯಾಗಿ ಆಡುತ್ತಿದ್ದ ಎಂಬ ಕಾರಣಕ್ಕಾಗಿಯೋ ಏನೋ ಅಯ್ನಾಜ್‌ ಆತನ ಜತೆಗೆ ಮಾತು ಬಿಟ್ಟಿದ್ದಳು. ವಿಪರೀತವಾಗಿ ಹತ್ತಿರವಾದರೆ ನೋಡುವವರಿಗೆ ಚೆನ್ನಾಗಿರುವುದಿಲ್ಲ ಎನ್ನುವುದು ಅವಳ ಅಭಿಪ್ರಾಯವಾಗಿರುವ ಸಾಧ್ಯತೆ ಇದೆ. ಆತ ಅವಳು ನನ್ನವಳು ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದುದು ಕೂಡಾ ಅವಳಿಗೆ ಅಷ್ಟಾಗಿ ಹಿಡಿಸಿರಲಿಲ್ಲ.

ಹೀಗಾಗಿ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಕಳೆದ ಒಂದು ತಿಂಗಳಿನಿಂದ ಮಾತುಕತೆ ನಿಲ್ಲಿಸಿದ್ದಳು. ಆದರೆ, ಕೆಲವು ಸಮಯದಿಂದ ಅಷ್ಟು ಹತ್ತಿರವಾಗಿದ್ದಳು ಈಗ ಏಕಾಏಕಿ ದೂರವಾಗಿದ್ದು, ಮಾತು ಬಿಟ್ಟಿದ್ದು ಅವನಿಗೆ ಸಹಿಸಲು ಆಗಿರಲಿಲ್ಲ. ಹೀಗಾಗಿ ಅತಿಯಾದ ಪೊಸೆಸಿವ್‌ನೆಸ್‌ನಿಂದ ಕೊಲೆ ಮಾಡಲು ನಿರ್ಧರಿಸಿದ್ದ!

ಹೆಜಮಾಡಿಯಲ್ಲಿ ವಾಹನ ಪಾರ್ಕ್‌ ಮಾಡಿ ಬಂದಿದ್ದ

ನವೆಂಬರ್‌ 12ರಂದು ಕೊಲೆ ಮಾಡಿದ ಆತ ಅದಕ್ಕಿಂತ ಮೊದಲು ಹಲವಾರು ತಂತ್ರಗಳನ್ನು ಬಳಸಿದ್ದ. ಕೊಲೆ ಮಾಡಿದ ಬಳಿಕ ಸಿಕ್ಕಿ ಹಾಕಿಕೊಳ್ಳಬಾರದು ಎನ್ನುವ ಜಾಣ್ಮೆ ಪ್ರಯೋಗ ಮಾಡಿದ್ದ. ಅಂದರೆ ಆತ ಮಂಗಳೂರಿನಿಂದ ಹೊರಟು ಹೆಜಮಾಡಿ ಟೋಲ್ ಗೇಟ್ ವರೆಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ.

ಟೋಲ್ ಗೇಟ್‌ನ ಸಿಸಿ ಕ್ಯಾಮೆರಾಕ್ಕೆ ಗೊತ್ತಾಗದಂತೆ ದೂರದಲ್ಲಿ ಎಲ್ಲೋ ವಾಹನ ಪಾರ್ಕ್‌ ಮಾಡಿ ಬೇರೆ ದಾರಿಯಲ್ಲಿ ಗೇಟ್‌ ದಾಟಿದ್ದ. ಅಲ್ಲಿಂದ ಉಡುಪಿಗೆ ಬಂದು ತೃಪ್ತಿ ನಗರಕ್ಕೆ ಬಂದಿದ್ದ.

ತೃಪ್ತಿ ನಗರದ ಮನೆಗೆ ಬಂದವನೇ ಮೊದಲು ಅಯ್ನಾಜ್‌ಗೆ ಚಾಕುವಿನಿಂದ ಇರಿದಿದ್ದಾನೆ. ಅಯ್ನಾಜ್‌ ಕೂಗು ಕೇಳಿ ಬಂದ ತಾಯಿಗೆ ಮತ್ತು ಅಕ್ಕ, ಅಫ್ನಾನ್‌ಗೆ ಚೂರಿಯಿಂದ ಇರಿದಿದ್ದ. ಬಳಿಕ ಮನೆಗೆ ಬಂದ ಅಸೀಮ್‌ಗೆ ಚೂರಿ ಹಾಕಿದ್ದಾನೆ. ಅಲ್ಲಿಂದ ಬೇರೆ ಬೇರೆ ಮಾರ್ಗವಾಗಿ ಮರಳಿ ಮನೆಗೆ ಹೋಗಿದ್ದ.

ಕೊಲೆಯ ಸಂದರ್ಭ ಧರಿಸಿದ್ದ ಬಟ್ಟೆಯನ್ನು ದಾರಿ ಮಧ್ಯೆ ಎಲ್ಲೋ ಸುಟ್ಟು ಹಾಕಿದ್ದ ಆತ ಕೃತ್ಯಕ್ಕೆ ಬಳಸಿದ್ದ ಮನೆಯ ಕಿಚನ್ ಚೂರಿಯನ್ನು ಮರಳಿ ಅಲ್ಲಿಯೇ ತಂದು ಇಟ್ಟಿದ್ದ! ಕೊಲೆಯ ಸಂದರ್ಭದಲ್ಲಿ ಅವನಿಗೂ ಗಾಯವಾಗಿತ್ತು. ಗಾಯದ ಕುರಿತು ಪತ್ನಿ ವಿಚಾರಿಸಿದಾಗ ಬೇರೆ ಸಬೂಬು ಹೇಳಿದ್ದ. ಮನೆಯಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದ. ಪೊಲೀಸರಿಗೆ ಆರಂಭದಲ್ಲೇ ಆತನ ಮೇಲೆ ಸಂಶಯ ಬಂದಿತ್ತು. ಹೀಗಾಗಿ ಆತನ ಮೊಬೈಲ್‌ ಲೊಕೇಶನ್‌ ಬೆನ್ನು ಹತ್ತಿ ಬೆಳಗಾವಿಯಲ್ಲಿ ಬಂಧಿಸಿದರು.

ನಿಜವೆಂದರೆ ಪ್ರವೀಣ್‌ ಚೌಗುಲೆಗೆ ಕೊಲೆಗೆ ಮೊದಲು ಕ್ರಿಮಿನಲ್‌ ಹಿನ್ನೆಲೆ ಇರಲಿಲ್ಲ. ಪೂನಾ ಸಿಟಿ ಪೊಲೀಸ್ ನಲ್ಲಿ 3 ತಿಂಗಳು ಟ್ರೈನಿಂಗ್ ಪಡೆದಿದ್ದ ಅವನಿಗೆ ಅದರ ಆಧಾರದಲ್ಲಿ ವಿಮಾನದ ಕ್ರೂ ಆಗಿ ಕೆಲಸ ಸಿಕ್ಕಿದೆ ಎಂದು ಎಸ್‌ಪಿ ತಿಳಿಸಿದರು.

ಕುಡಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆಯನ್ನೂ ಮಾಡಲಾಗಿದೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯಲು ಅವಕಾಶವಿದೆ. ಗಂಭೀರ ಪ್ರಕರಣ ಆಗಿರುವ ಕಾರಣ ಎಲ್ಲಾ ಮಾಹಿತಿ ಮಾಧ್ಯಮಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಡಾ. ಅರುಣ್‌ ಹೇಳಿದರು. ಜೈಲಿನಲ್ಲಿ ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ ಎಂದರು.

ಫಾಸ್ಟ್‌ ಟ್ರ್ಯಾಕ್‌ ವಿಚಾರಣೆಗೆ ಅಯ್ನಾಜ್‌ ಕುಟುಂಬ ಮನವಿ

ಪ್ರಕರಣದ ತನಿಖೆಯಲ್ಲಿ ನೂರ್‌ ಮಹಮದ್‌ ಅವರ ಕುಟುಂಬ ಎಲ್ಲ ರೀತಿಯಲ್ಲೂ ಸಹಕರಿಸಿದೆ. ಕುಟುಂಬ ನೋವಲ್ಲಿದ್ದರೂ ಎಲ್ಲ ಮಾಹಿತಿಯನ್ನು ಕೊಟ್ಟಿದ್ದಾರೆ. ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಮೂಲಕ ತ್ವರಿತ ನ್ಯಾಯದಾನಕ್ಕೆ ಅಯ್ನಾಜ್‌ ಮನೆಯವರು ಮನವಿ ಮಾಡಿದ್ದಾರೆ. ವಿಶೇಷ ಪಿ.ಪಿ ನೇಮಕಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ಜಿಲ್ಲಾ ಎಸ್ಪಿ ಅರುಣ್‌ ಕೆ ಹೇಳಿದರು.

ಇದನ್ನೂ ಓದಿ: Udupi Murder : ಮಹಜರಿನ ವೇಳೆ ಮುತ್ತಿಗೆ; ಹಂತಕನನ್ನು 30 ಸೆಕೆಂಡ್‌ ನಮ್ಮ ಕೈಗೆ ಕೊಡಿ ಎಂದ ಜನ

11 ತಂಡ, 50ಕ್ಕೂ ಅಧಿಕ ಪೊಲೀಸರು

ಈ ಪ್ರಕರಣವನ್ನು ಬೇಧಿಸುವುದು ತುಂಬ ಸವಾಲಿನ ಕೆಲಸವಾಗಿತ್ತು. ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಎಲ್ಲರೂ ಕುತೂಹಲ ಹೊಂದಿದ್ದರು. ಹೀಗಾಗಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗಿತ್ತು ಎಂದು ಹೇಳಿದ ಎಸ್‌ಪಿ ಅರುಣ್‌, ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಸುಮಾರು 50 ಪೊಲೀಸರು ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನು ತನಿಖೆ ಮಾಡಿದ್ದೇವೆ. ನೂರ್‌ ಮಹಮದ್‌ ಅವರ ಹಸೀನಾಗೆ ಆರ್ಥಿಕ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದನ್ನೂ ಪರಿಶೀಲನೆ ಮಾಡಿದ್ದೇವೆ ಎಂದರು ಅರುಣ್‌.

ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲಾ ಸಾಕ್ಷಿಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಇಲಾಖೆಗೆ 1.50 ಲಕ್ಷ ಬಹುಮಾನ ಕೊಡುವ ಬಗ್ಗೆ ಶಿಫಾರಸು ಮಾಡಿರುವುದಾಗಿ ಉಡುಪಿ ಎಸ್ ಪಿ ಡಾ. ಅರುಣ್ ಕೆ ಮಾಹಿತಿ ನೀಡಿದರು.

Exit mobile version