Site icon Vistara News

Padma Awards 2023 : ಮೋದಿ ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂತು, ಇಲ್ಲದಿದ್ದರೆ ಬರುತ್ತಿರಲಿಲ್ಲ ಅಂದ ಭೈರಪ್ಪ

SL Bhyrappa

ಮೈಸೂರು: ನರೇಂದ್ರ ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂತು. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ: ಹೀಗೆಂದು ಅಭಿಪ್ರಾಯಪಟ್ಟಿದ್ದಾರೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ (Padma Awards 2023) ಪುರಸ್ಕೃತ, ಹಿರಿಯ ಸಾಹಿತಿ ಡಾ. ಎಸ್‌. ಭೈರಪ್ಪ.

ಪದ್ಮಭೂಷಣ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಸಂತೋಷವನ್ನು ಹಂಚಿಕೊಂಡ ಅವರು, ಲೇಖಕ ಯಾರೇ ಇದ್ದರೂ ಅವನು ಸತ್ತೇ ಸಾಯುತ್ತಾನೆ. ಆದರೆ ಅವನು ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ ಎಂದರು.

ಇಲ್ಲೇ ಕುಳಿತು ಇಲ್ಲೇ ಬರೆಯುತ್ತಿರುವ ತಮಗೆ ಪದ್ಮಭೂಷಣ ಪ್ರಶಸ್ತಿ ಬರಲು ಮೋದಿ ಅವರೇ ಕಾರಣ ಎಂದು ಹೇಳಿರುವ ಅವರು, ತಮ್ಮ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿಯಾಗಿದೆ. ಈ ಸಂಸ್ಕೃತಿ ಏಕರೂಪದಲ್ಲಿ ಬೆಳೆದಿದೆ ಎಂದು ಹೇಳಿದರು.

ʻʻನಮ್ಮ ದೇಶದಲ್ಲಿ ಗಣರಾಜ್ಯ ಮೊದಲಿನಿಂದಲೂ ಇತ್ತು. ಸಂವಿಧಾನದ ಬಹು ಭಾಗವೂ ನಮ್ಮ ಹಿಂದಿನಿಂದಲೂ ಇತ್ತು. ಎಷ್ಟೋ ದೇಶಗಳು ಸ್ವಾತಂತ್ರ್ಯವನ್ನು ಪಡೆದಿವೆ. ಆದರೆ, ಅವುಗಳಿಗೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ನಮ್ಮಲ್ಲಿ ಸಂವಿಧಾನ ಇದೆ. ಅದುವೇ ಈ ದೇಶವನ್ನು ಕಾಪಾಡುತ್ತದೆ. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವ ಅತ್ಯಂತ ಮಹತ್ತರವಾದುದುʼʼ ಎಂದು ಹೇಳಿದರು ಎಸ್‌.ಎಲ್‌. ಭೈರಪ್ಪ.

ಮೋದಿ ಬಂದ ಮೇಲೆ ಪ್ರಶಸ್ತಿಗಳ ಗೌರವ ಹೆಚ್ಚಾಗಿದೆ ಎಂದ ಸಿ.ಟಿ. ರವಿ
ಈ ನಡುವೆ, ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಮೋದಿ ಬಂದ ಮೇಲೆ ಪದ್ಮ ಪ್ರಶಸ್ತಿಗಳ ಹಿರಿಮೆ-ಗರಿಮೆ ಹೆಚ್ಚಾಗಿದೆ. ಈ ಹಿಂದೆ ಪದ್ಮ ಪ್ರಶಸ್ತಿಗೆ ದೊಡ್ಡ ಲಾಬಿ ನಡೆಯುತ್ತಿತ್ತು. ಈಗ ಅದು ಪ್ರಶಸ್ತಿ ಜನರ ಪ್ರಶಸ್ತಿಯಾಗಿದೆ. ಈಗ ಜನರ ಭಾವನೆಯಿಂದ ಹೆಸರುವಾಸಿಯಾಗಿರುವವರಿಗೆ ಪ್ರಶಸ್ತಿ ಸಿಗುತ್ತಿದೆ. ಎಲೆಮರೆ ಕಾಯಿಯಾಗಿ ಕೆಲಸ ಮಾಡುತ್ತಿರುವವರಿಗೆ ಪ್ರಶಸ್ತಿ ಹುಡುಕಿಕೊಂಡು ಬರುತ್ತಿವೆʼʼ ಎಂದು ಹೇಳಿದರು.

ʻʻಕರ್ನಾಟಕದ ಎಂಟು ಗಣ್ಯರಿಗೆ ಪದ್ಮಶ್ರೀ ಲಭಿಸಿದೆ, ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಮುತ್ಸದ್ದಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ಎಸ್.ಎಂ.ಕೃಷ್ಣ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಹಂಕಾರದ ಅವಶೇಷವೂ ಇಲ್ಲದೆ, ಶ್ರೀಮಂತಿಕೆಯನ್ನು ಸೇವೆಗೆ ಉಪಯೋಗಿಸಿದ ಸುಧಾ ಮೂರ್ತಿಯವರು, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು‌ ಮೂಡಿಸಿದವರು ಎಸ್.ಎಲ್.ಭೈರಪ್ಪ. ಇಂಥವರಿಗೆ ಪ್ರಶಸ್ತಿ ಸಂದಿದ್ದು ನಮಗೆಲ್ಲ ಗೌರವʼʼ ಎಂದು ಹೇಳಿದರು.

ಇದನ್ನೂ ಓದಿ | Padma Awards 2023: ಎಸ್‌.ಎಂ.ಕೃಷ್ಣ ಪದ್ಮವಿಭೂಷಣ, ಸುಧಾಮೂರ್ತಿ, ಎಸ್ಎಲ್‌ ಭೈರಪ್ಪ ಪದ್ಮಭೂಷಣ

Exit mobile version