Site icon Vistara News

ಕ್ಲಬ್‌ಹೌಸ್‌ನಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ದಿನ ಆಚರಣೆ, ಬಳ್ಳಾರಿ ಮೂಲದ ಇಬ್ಬರು ಟೆಕ್ಕಿಗಳು ವಶಕ್ಕೆ

pakistani flag

ಬೆಂಗಳೂರು: ಆಗಸ್ಟ್ 14ರಂದು‌ ಕ್ಲಬ್‌ ಹೌಸ್‌ನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ಆಚರಣೆ ನಡೆಸಿದ ವಿದ್ಯಮಾನಕ್ಕೆ ಸಂಬಂಧಿಸಿ ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮುನ್ನಾ ದಿನವಾದ ಆಗಸ್ಟ್‌ ೧೪ರಂದು ರಾತ್ರಿ ಕೆಲವೊಂದು ಟೆಕ್ಕಿಗಳು ಸೇರಿಕೊಂಡು ಕ್ಲಬ್‌ ಹೌಸ್‌ನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ನಡೆಸಿದ್ದರು. ಎಲ್ಲರೂ ಡಿಪಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾಕಿಕೊಂಡು, ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಕಿ ಕುಣಿದಾಡಿದ್ದರು. ಮಾತ್ರವಲ್ಲ, ಯಾರೆಲ್ಲ ಪಾಕಿಸ್ತಾನ ಧ್ವಜವನ್ನು ಹಾಕಿಕೊಂಡಿರುತ್ತಾರೋ ಅವರಿಗೆ ಮಾತ್ರ ಮಾತನಾಡಲು ಅವಕಾಶ ಎಂಬ ಷರತ್ತನ್ನೂ ವಿಧಿಸಲಾಗಿತ್ತು. ಇವರೆಲ್ಲರೂ ಸೇರಿ ಪಾಕಿಸ್ತಾನಕ್ಕೆ ಜಿಂದಾಬಾದ್‌ ಎಂದಿದ್ದರು. ಭಾರತದ ವಿರುದ್ಧವಾದ ನಡವಳಿಕೆಯನ್ನು ತೋರಿಸಿದ್ದರು.

ಈ ಬಗ್ಗೆ ಸಾರ್ವಜನಿಕ ಜಾಲ ತಾಣಗಳಲ್ಲಿ ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದ್ದರು. ಈ ಘಟನೆ ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್‌ ಪ್ರದೇಶದಲ್ಲಿ ನಡೆದಿದೆ ಎನ್ನುವುದು ಅರಿವಿಗೆ ಬಂದಿತ್ತು. ಆದರೆ, ಆರೋಪಿಗಳು ಇನಿಷಿಯೆಲ್‌ಗಳನ್ನು ಬಳಸಿ ಲಾಗ್‌ ಇನ್‌ ಆಗಿದ್ದರಿಂದ ಅವರನ್ನು ಪತ್ತೆ ಹಚ್ಚುವುದು ಸುಲಭವಾಗಿರಲಿಲ್ಲ.

ಆದರೂ ತಾಂತ್ರಿಕ ಸಹಾಯ ಪಡೆದು ಅದರ ಮೂಲವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ನಡುವೆ, ರಾಹುಲ್‌ ಮತ್ತು ಸೌರಭ್‌ ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ತಾವು ತಮಾಷೆ ಮಾಡಲು ಹೋಗಿ ಈ ಘಟನೆ ನಡೆದಿದೆ ಎಂದು ಇವರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ರಾಹುಲ್‌ ಮತ್ತು ಸೌರಭ್‌ ಇಬ್ಬರೂ ಬಳ್ಳಾರಿ ಮೂಲದವರು. ಮಾನ್ಯತಾ ಟೆಕ್ ಪಾರ್ಕ್‌ನ ಕರ್ಲೆ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡಿಕೊಂಡಿದ್ದರು. ಕ್ಲಬ್ ಹೌಸ್ ಗ್ರೂಪ್ ನಲ್ಲಿ ಮಾತನಾಡುವ ವೇಳೆ ʻನಿಮಗೆ ತಾಖತ್ ಇದ್ರೆ ಪಾಕ್ ಪರವಾಗಿ ಘೋಷಣೆ ಕೂಗಿʼ ಎಂದು ಕೆಲವರು ಸವಾಲು ಹಾಕಿದ್ದರು. ಹೀಗಾಗಿ ತಾವು ಘೋಷಣೆ ಕೂಗಿದ್ದಾಗಿ ರಾಹುಲ್‌ ಮತ್ತು ಸೌರಭ್‌ ಪೊಲೀಸ್‌ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾರೆ.

ಆದರೆ ಈ ಆಟ ಅವರಿಗೆ ತುಂಬ ದುಬಾರಿಯಾಗುವುದು ಖಚಿತವಾಗಲಿದೆ. ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಉಳಿದ ಯುವಕರಿಗಾಗಿ ಬಲೆ ಬೀಸಿದ್ದಾರೆ. ಸೌರಭ್ ಹಾಗು ರಾಹುಲ್ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಉಳಿದ ಆರೋಪಿಗಳು ಸಿಕ್ಕಿದ ಬಳಿಕ ಮತ್ತೆ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ. ಈ ಪ್ರಕರಣ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಐಪಿಸಿ ಸೆಕ್ಷನ್‌ ೧೫೩ಎ (ಧರ್ಮ, ಬಣ್ಣ, ಹುಟ್ಟಿದ ಸ್ಥಳ, ನಿವಾಸ, ಭಾಷೆ ಮತ್ತಿತರ ಆಧಾರದ ಮೇಲೆ ಬೇರೆ ಬೇರೆ ಧರ್ಮಗಳ ನಡುವೆ ದ್ವೇಷಕ್ಕೆ ಪ್ರಚೋದನೆ) ಅನ್ವಯ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ| ಕ್ಲಬ್‌ ಹೌಸ್‌ನಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ: ಭಾಗವಹಿಸಿದವರ ಪತ್ತೆಗೆ ಪೊಲೀಸರಿಂದ ತೀವ್ರ ಪ್ರಯತ್ನ

Exit mobile version