ಬೆಂಗಳೂರು: ಪಾಕ್ ಮೂಲದ ಮಹಿಳೆ ಪತ್ತೆ ಪ್ರಕರಣದಲ್ಲಿ ಆಕೆಯ (Pakistan Girl) ಮತ್ತೊಂದು ವರಸೆ ಬೆಳಕಿಗೆ ಬಂದಿದೆ. ತವರಿಗೆ ಹೋಗಲು ಒಲ್ಲೆ ಎನ್ನುತ್ತಿರುವ ಇಕ್ರಾ ಜೀವನಿ, ನಾನು ಇಲ್ಲಿಯೇ ಇರುತ್ತೇನೆ ಎಂದು ಹೇಳುತ್ತಿದ್ದಾಳೆ. ಸದ್ಯ ಎಫ್ಆರ್‌ಆರ್‌ಒ ಅಧೀನದಲ್ಲಿರುವ ಯುವತಿ, ನಾನು ಪಾಕಿಸ್ತಾನಕ್ಕೆ ಹೋಗಲಾರೆ, ಮುಲಾಯಂ ಸಿಂಗ್ ಯಾದವ್ ಜತೆ ಮದುವೆಯಾಗಿದ್ದೇನೆ. ಆತನನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾಳೆ.
ಯುವತಿಯ ಹೊಸ ವರಸೆಯಿಂದ ಪೊಲೀಸರಿಗೆ ತಲೆಬಿಸಿ ಉಂಟಾಗಿದೆ. ಯುವತಿ ಒಲ್ಲೆ ಎಂದರೂ ಆಕೆಯನ್ನು ಡಿಪೋರ್ಟ್ (ಗಡಿಪಾರು) ಮಾಡಲು ತಯಾರಿ ನಡೆಸಿದ್ದಾರೆ. ಡಿಪೋರ್ಟ್ ಮಾಡಲು ಅಗತ್ಯ ಪ್ರಕ್ರಿಯೆಯನ್ನು ಪೊಲೀಸರು ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್‌ಆರ್‌ಓ) ಅಧಿಕಾರಿಗಳು ಕೈಗೊಂಡಿದ್ದಾರೆ.
ಭಾರತಕ್ಕೆ ಅಕ್ರಮವಾಗಿ ಬಂದಿರುವ ಹಿನ್ನೆಲೆಯಲ್ಲಿ ಯುವತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ಏಜೆನ್ಸಿಗಳನ್ನು ಎಫ್ಆರ್‌ಆರ್‌ಒ ಸಂಪರ್ಕಿಸಿದೆ. ಎರಡು ದೇಶಗಳ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಯುವತಿಯನ್ನು ವಾಪಸ್ ಕಳುಹಿಸಬೇಕು. ಇದಕ್ಕಾಗಿ ಕನಿಷ್ಠ ಎರಡು ತಿಂಗಳ ಸಮಯ ಬೇಕಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ | Road accident | ಕೊರಟಗೆರೆಯ ಜಟ್ಟಿ ಅಗ್ರಹಾರ ಬಳಿ ಕಾರುಗಳ ಡಿಕ್ಕಿ: ಮಹಿಳೆ ದಾರುಣ ಮೃತ್ಯು, ಇನ್ನೊಬ್ಬ ಗಂಭೀರ
ಸದ್ಯ ಯುವತಿಯನ್ನು ಡಿಪೋರ್ಟ್ ಮಾಡಲು ಬೇಕಾದ ಕಾನೂನು ಪ್ರಕ್ರಿಯೆ ಪರಿಶೀಲನೆ ನಡೆಸಿರುವ ಅಧಿಕಾರಿಗಳಿಗೆ, ಇನ್ನೂ ಇಕ್ರಾ ಜೀವನಿ ಮತ್ತು ಮುಲಾಯಂ ಸಿಂಗ್ ಮದುವೆ ಬಗ್ಗೆ ಅನುಮಾನವಿದೆ. ಪೊಲೀಸರ ವಿಚಾರಣೆ ವೇಳೆ ಇಬ್ಬರು ಮದುವೆಯಾಗಿದ್ದೇವೆ ಎಂದು ಇಬ್ಬರೂ ಹೇಳಿದ್ದರು. ಆದರೆ, ಮದುವೆಯಾದ ಬಗ್ಗೆ ಯಾವುದೇ ಅಧಿಕೃತ ದಾಖಲೆ, ಪೋಟೊಗಳಿಲ್ಲ. ಹಾಗೆಯೇ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಇಲ್ಲ. ಆದ್ದರಿಂದ ಈ ರೀತಿಯ ಮದುವೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ವಿದೇಶಿ ಮಹಿಳೆಯನ್ನು ಮದುವೆಯಾದಾಗ ಕಾನೂನಾತ್ಮಕ ದಾಖಲೆ ಇರಬೇಕು. ಹೀಗಾಗಿ ಮುಲಾಯಂ ಸಿಂಗ್ ಯಾದವ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸದ್ಯ ಈ ಬಗ್ಗೆ ಹಲವು ಆಯಾಮಗಳಲ್ಲಿ ಬೆಳ್ಳಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.