ಪುತ್ತೂರು: ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ(Tulu Sahitya academy)ಯ ಮಾಜಿ ಅಧ್ಯಕ್ಷರೂ ಆಗಿದ್ದ ನಿವೃತ್ತ ಉಪನ್ಯಾಸಕ ಡಾ|ಪಾಲ್ತಾಡಿ ರಾಮಕೃಷ್ಣ ಆಚಾರ್(Palthady Ramakrishna Achar) ಅವರು ವಿಧಿವಶರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಪೆರುವಾಜೆಯಲ್ಲಿರುವ ತಮ್ಮ ಮಗಳ ಮನೆಯಲ್ಲಿದ್ದ ಆಚಾರ್ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರು ಉಂಟಾಗಿತ್ತು. ತಕ್ಷಣ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಮೃತದೇಹವನ್ನು ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇಂದು ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆಲತ್ತಾಜೆಯಲ್ಲಿ ಹುಟ್ಟಿ ಹೆಚ್ಚಿನ ಕಾಲವನ್ನು ಪಾಲ್ತಾಡಿಯಲ್ಲಿ ಕಳೆದು ನಿವೃತ್ತಿಯ ಬಳಿಕ ಪುತ್ತೂರಿನ ಬೆದ್ರಾಳದಲ್ಲಿ ನೆಲೆಸಿದ್ದರು.ಬೆಟ್ಟಂಪಾಡಿ, ಪಾಣಾಜೆ ಹಿ.ಪ್ರಾ. ಶಾಲೆ, ಬೆಳ್ಳಾರೆ ಬೋರ್ಡ್ ಹೈಸ್ಕೂಲ್ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಅನಂತರ ಉಜಿರೆಯ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಡಿಪ್ಲೊಮಾ ಮಾಡಿದರು. 1963ರಲ್ಲಿ ಕುಂತೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿದರು. ಕೆಯ್ಯೂರು, ಕಾವು ಮಾಟ್ನೂರು, ಸಾಮೆತ್ತಡ್ಕ ಮೊದಲಾದ ಕಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಈ ಮಧ್ಯೆ ಪದವಿ ಶಿಕ್ಷಣ ಪಡೆದು ಬಿ.ಎಡ್ ಪದವಿ ಪಡೆದರು. ಅನಂತರ ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಸ್ನಾತಕೋತ್ತರ ಪದವಿ ಪಡೆದರು. ಹಿಂದಿಯಲ್ಲಿ ರಾಷ್ಟ್ರ ಭಾಷಾವಿಶಾರದಾ ಪದವಿಯನ್ನು ಪೂರ್ಣಗೊಳಿಸಿದ್ದರು. ನಿವೃತ್ತಿ ಆದ ಬಳಿಕ ಸವಣೂರಿನ ವಿದ್ಯಾರಶ್ಮಿ ಶಿಕ್ಷಕ ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಗೌರವ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಮಕ್ಕಳ ಕವನ ಸಂಕಲನ, ಕಥಾ ಸಂಕಲನ, ಸಂವಹನ ಮಾಧ್ಯಮವಾಗಿ ಜಾನಪದ, ಜಾನಪದ ಪರಿಸರ, ಜಾನಪದ ವೈದ್ಯ, ಜಾನಪದ ಕುಣಿತ, ದೈವಾರಾಧನೆ, ತುಳುನಾಡಿನ ಸಮಗ್ರ ಪ್ರದರ್ಶನ ಕಲೆ ಮತ್ತು ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಪಾಲ್ತಾಡಿ ತುಳು ಭಾಷೆಯ ಬೆಳವಣಿಗೆಯಲ್ಲಿ ವಿಶೇಷ ಪಾತ್ರವಹಿಸಿದರು. ತುಳು ಜಾನಪದ ಕೂಡುಕಟ್ಟು ಅಧ್ಯಕ್ಷರಾಗಿ, ತುಳು ಅಕಾಡಮಿ ರಿಜಿಸ್ಟ್ರಾರ್ ಆಗಿ, ಬಾಲವನ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಸಾರ್ವಜನಿಕ ಆಟಿ ಉತ್ಸವ, ಕೆಡ್ಡಸ ಕೂಟವನ್ನು ಪರಿಚಯಿಸಿದ ಹಿರಿಮೆ ಇವರದ್ದು. ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ತುಳು ಡಿಪ್ಲೊಮಾ ಕೋರ್ಸ್‌ಗಳಿಗೆ ಪಠ್ಯ ರಚನೆಕಾರರಾಗಿ, ತುಳು ಭಾಷೆಯನ್ನು ಎಂಟನೇ ಪರಿಚ್ಛೇದ ಸೇರಿಸಬೇಕು ಎಂಬ ಆಗ್ರಹದಲ್ಲಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದವರು.
ಇದನ್ನೂ ಓದಿ: Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಕ್ಯಾನ್ಸಲ್
1979ರಲ್ಲಿ “ಬಾಂಗ್ಲಾ ವಿಜಯ’ ಎಂಬ ಯಕ್ಷಗಾನ ಪ್ರಸಂಗ ಕೃತಿ ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರದ ಸೇವೆಯಲ್ಲಿ ತೊಡಗಿದ್ದರು. ವಿವಿಧ ಪತ್ರಿಕೆ-ನಿಯತ ಕಾಲಿಕೆಗಳಲ್ಲಿ ಕತೆ ಕವಿತೆಗಳು ಪ್ರಕಟವಾಗಿವೆ. ಕನ್ನಡ ಸಂಘ, ತುಳು ಸಂಘ, ಯಕ್ಷಗಾನ ಸಂಘ, ಸಮುದಾಯ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗಾಗಿ ಶ್ರಮಿಸಿ ದರು.