ರಾಯಚೂರು: ಡಾಬಾ, ಬಾರ್ & ರೆಸ್ಟೋರೆಂಟ್‌ಗಳಲ್ಲಿ ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಗಾಗಿ ಜಗಳ ಆಗುತ್ತವೆ. ವಾದ-ವಾಗ್ವಾದ ನಡೆಯುತ್ತಲೇ ಜನ ಬಂದು ಬಿಡಿಸಿಕೊಳ್ಳುತ್ತಾರೆ. ಎರಡೂ ಕಡೆಯ ಗುಂಪುಗಳು ಪರಸ್ಪರ ಬೈದುಕೊಂಡು ಕಡೆಗೆ ಸುಮ್ಮನಾಗುತ್ತಾರೆ. ಆದರೆ, ರಾಯಚೂರು ಜಿಲ್ಲೆಯ (Raichur District) ಡಾಬಾವೊಂದರಲ್ಲಿ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರಿಗೆ ಚಾಕು ಇರಿದಿದ್ದಾನೆ.
ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿರುವ ಅಪ್ಪು ಡಾಬಾ ಎದುರು ಯುವಕನೊಬ್ಬ ಇಬ್ಬರಿಗೆ ಚೂರಿ ಇರಿದಿದ್ದಾನೆ. ವೀರೇಶ್ ಎಂಬಾತ ಇಬ್ಬರಿಗೆ ಅಟ್ಟಾಡಿಸಿ ಚೂರಿ ಇರಿದಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಚೂರಿ ಇರಿತಕ್ಕೆ ಒಳಗಾದವರನ್ನು ರಮೇಶ್ ಹಾಗೂ ಸತ್ತರ್ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಇಬ್ಬರಿಗೂ ಮಾನ್ವಿ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟಿಶ್ಯು ಪೇಪರ್ ಕೊಡು ಎಂದಿದ್ದಕ್ಕೇ ಜಗಳ
ರಮೇಶ್ ಹಾಗೂ ಸತ್ತರ್ ಅವರು ಗೆಳೆಯರ ಜತೆ ರಾತ್ರಿ ಊಟ ಮಾಡಲು ಡಾಬಾಗೆ ಬಂದಿದ್ದಾರೆ. ಇದೇ ವೇಳೆ ಪಾನ್‌ಶಾಪ್ ಮಾಲೀಕ ವಿರೇಶ್ ಡಾಬಾದೊಳಗೆ ಬಂದಿದ್ದಾನೆ. ವೀರೇಶ್‌ನನ್ನು ವೇಯ್ಟರ್ ಎಂದು ಭಾವಿಸಿದ ಸತ್ತರ್, “ಹೇ ವೇಯ್ಟರ್, ಟಿಶ್ಯು ಪೇಪರ್ ಕೊಡು” ಎಂದಿದ್ದಾನೆ. ಇದರಿಂದ ಕೋಪಗೊಂಡ ವೀರೇಶ್, ಸತ್ತರ್‌ಗೆ ಬೈದಿದ್ದಾನೆ. ಇದೇ ವೇಳೆ ರಮೇಶ್, ಸತ್ತರ್ ಹಾಗೂ ವೀರೇಶ್ ಮಧ್ಯೆ ವಾಗ್ವಾದ ನಡೆದಿದೆ.
ಇದನ್ನೂ ಓದಿ: Bengaluru News : ಹಿಡಿಯಲು ಬಂದ ಹೆಡ್ ಕಾನ್ಸ್‌ಟೇಬಲ್‌ಗೆ ಚಾಕು ಹಾಕಿದ ಕಿರಾತಕ
ವಾಗ್ವಾದ ಗಲಾಟೆಗೆ ತಿರುಗಿದ್ದು, ಈರುಳ್ಳಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ರಮೇಶ್ ಹಾಗೂ ಸತ್ತರ್ ಮೇಲೆ ವೀರೇಶ್ ದಾಳಿ ನಡೆಸಿದ್ದಾನೆ. ರಮೇಶ್ ಹಾಗೂ ಸತ್ತರ್ ಡಾಬಾ ಹೊರಗೆ ಬಂದಿದ್ದು, ಅವರನ್ನು ಹಿಂಬಾಲಿಸಿದ ವೀರೇಶ್, ಇಬ್ಬರಿಗೂ ಚಾಕು ಇರಿದಿದ್ದಾನೆ. ಪ್ರಕರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.