Site icon Vistara News

Panchamasali: ಪಂಚ ಶಾಸಕರರಿಗೆ ಸಚಿವ ಸ್ಥಾನ ನೀಡಿ: ಪಂಚಮಸಾಲಿ ಕಾರ್ಯಕಾರಿಣಿಯಲ್ಲಿ ಸರ್ಕಾರಕ್ಕೆ ಒತ್ತಾಯ

panchamasali community demands five cabinet berths for community mlas

#image_title

ಬೆಂಗಳೂರು: ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿರುವ ಪಂಚಮಸಾಲಿ ಸಮುದಾಯದ ಐವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಂಚಮಸಾಲಿ ಸಮುದಾಯ ಒತ್ತಾಯ ಮಾಡಿದೆ. ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಪಂಚಮಸಾಲಿ ರಾಜ್ಯ ಕಾರ್ಯಕಾರಣಿಯಲ್ಲಿ ಒಟ್ಟು ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಕಾರ್ಯಕಾರಿಣಿಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಹಾಗೂ ಶಾಸಕರಾದ ಡಾ. ವಿಜಯಾನಂದ ಕಾಶಪ್ಪನವರ್ ವಹಿಸಿದ್ದರು.

ನಿರ್ಣಯ 1: ಲಿಂಗಾಯತ ಪಂಚಮಸಾಲಿ ಸಮಾಜದ ಬಂಧುಗಳ ಒತ್ತಾಯದಂತೆ , ಮೀಸಲಾತಿಗಾಗಿ ಮುಂಚೂಣಿಯಲ್ಲಿ ಹೋರಾಡಿದಂತಹ ಹುನಗುಂದ ಶಾಸಕರಾದ ವಿಜಯಾನಂದ ಕಾಶಪ್ಪನವರ್ , ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ , ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಒಳಗೊಂಡಂತೆ ಒಟ್ಟು ಐದು ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಒತ್ತಾಯಿಸಲಾಯಿತು.

ನಿರ್ಣಯ 2: ರಾಜ್ಯ ಬಿಜೆಪಿ ಅಧ್ಯಕ್ಷ ಅಥವಾ ವಿರೋಧ ಪಕ್ಷದ ಸ್ಥಾನಕ್ಕೆ ಸಮರ್ಥ ಲಿಂಗಾಯತ ಪಂಚಮಸಾಲಿ ಶಾಸಕರಿಗೆ ಅವಕಾಶ ಮಾಡಿಕೊಡಬೇಕೆಂದು ರಾಷ್ಟ್ರೀಯ ಬಿಜೆಪಿ ವರಿಷ್ಠರಿಗೆ ಒತ್ತಾಯಿಸಲಾಯಿತು.

ನಿರ್ಣಯ 3: ನೂತನ ಶಾಸಕರ ಅಭಿನಂದನಾ ಸಮಾರಂಭವನ್ನು ಹಾಗೂ ಮೀಸಲಾತಿ ಹಕ್ಕೊತ್ತಾಯ ಸಮಾರಂಭವನ್ನು ಕೂಡಲಸಂಗಮದಲ್ಲಿ ಜೂನ್ ತಿಂಗಳಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು.

ಕಾರ್ಯಕಾರಿಣಿ ಸಭೆಯಲ್ಲಿ ನೂತನ ಶಾಸಕರುಗಳಾದ ವಿನಯ ಕುಲಕರ್ಣಿ , ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್‌ , ಕಾಗವಾಡದ ರಾಜುಗೌಡ ಕಾಗೆ, ದೇವರ ಹಿಪ್ಪರಗಿಯ ರಾಜುಗೌಡ ಪಾಟೀಲ್, ಸಿಂಧಗಿಯ ಅಶೋಕ ಮನಗೂಳಿ, ಕಿತ್ತೂರಿನ ಬಾಬಾ ಸಾಹೇಬ್ ಪಾಟೀಲ , ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ , ನಿಗಮದ ಮಾಜಿ ಅಧ್ಯಕ್ಷ ಎಂ.ಎಸ್. ರುದ್ರಗೌಡ , ವಿವಿಧ ಜನಪ್ರತಿನಿಧಿಗಳು, ಪಂಚಮಸಾಲಿ – ಗೌಡ – ಮಲೆಗೌಡ ದೀಕ್ಷಾ – ಲಿಂಗಾಯತ ರಾಷ್ಟ್ರೀಯ , ರಾಜ್ಯ , ಜಿಲ್ಲಾ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: Karnataka Election 2023: ಪ್ರಚಾರದ ಭರಾಟೆ ಮಧ್ಯೆಯೇ ಕಾಗಿನೆಲೆ, ಪಂಚಮಸಾಲಿ ಮಠಕ್ಕೆ ಅಮಿತ್‌ ಶಾ ಭೇಟಿ; ಕರ್ನಾಟಕ ವಿಧಾನಸಭೆ ಚುನಾವಣೆ ಕಣದ ಕ್ಷಣಕ್ಷಣದ ಸುದ್ದಿಗಳು

Exit mobile version