ಚಾಮರಾಜನಗರ: 2ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದವರು (Panchamasali Reservation) ನಡೆಸುತ್ತಿರುವ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿರುವ ನಟ ಚೇತನ್ ಅಹಿಂಸಾ, ಪಂಚಮಸಾಲಿಗಳ ಬೇಡಿಕೆ ಸ್ವಾರ್ಥದ್ದಾಗಿದೆ. ನನ್ನ ಬೆಂಬಲ ಏನಿದ್ದರೂ ಒಕ್ಕಲಿಗರಿಗೆ ಎಂದು ಹೇಳಿದ್ದು, ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಚಾಮರಾಜನಗರದಲ್ಲಿ ಏರ್ಪಡಿಸಲಾಗಿದ್ದ “ಮೀಸಲಾತಿ ಪ್ರಾತಿನಿಧ್ಯವೋ, ಆರ್ಥಿಕ ಸಬಲೀಕರಣವೋ” ಎಂಬ ವಿಚಾರ ಸಂಕಿರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚೇತನ್, ಮೀಸಲಾತಿ ಹೋರಾಟ ವಿಚಾರವಾಗಿ ತಮ್ಮದು ಕೆಲವು ವಿರೋಧವಿದೆ. 2ಎ ಮೀಸಲಾತಿಗೆ ಒತ್ತಾಯ ಮಾಡಿ ಪಂಚಮಸಾಲಿಗಳು ಈಗ ಏನು ಹೋರಾಟ ಮಾಡುತ್ತಿದ್ದಾರೋ ಅದು ನ್ಯಾಯಯುತವಾಗಿಲ್ಲ. ಅವರದ್ದು ಸ್ವಾರ್ಥದ ಹೋರಾಟವಾಗಿದೆ ಎಂದು ಹೇಳಿದ್ದಾರೆ.
ಪಂಚಮಸಾಲಿಯವರು 3ಬಿಯಿಂದ 2ಎಗೆ ಸೇರಿಸಿ ಎಂದು ಹೇಳಿ ಹೋರಾಟವನ್ನು ನಡೆಸುತ್ತಿರುವುದು ಸ್ವಾರ್ಥವಾಗಿದೆ. ಅವರನ್ನು ಇನ್ನೂ ಹಿಂದುಳಿದ ವರ್ಗಕ್ಕೆ ಸೇರಿಸಿ ಎಂದು ಹೇಳುವುದು ಎಷ್ಟು ಸರಿ? ಶೇ. 4ರಿಂದ ಶೇಕಡಾ 12ಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಬೇಕು ಎಂದು ಹೇಳುವ ಒಕ್ಕಲಿಗರ ಹೋರಾಟವನ್ನು ನಾವು ಒಪ್ಪಬಹುದು. ಅವರು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೇಳುತ್ತಿದ್ದಾರೆ. ಯಾವುದೇ ಸಮಾಜವಿರಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೇಳೋದರಲ್ಲಿ ತಪ್ಪಿಲ್ಲ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.
ಇದನ್ನೂ ಓದಿ | Medical Negligence | ಕೊಡಿಗೇನಹಳ್ಳಿಯ ಪಿಎಚ್‌ಸಿ ಪ್ರಕರಣ; ಇಬ್ಬರ ಅಮಾನತು ಬೆನ್ನಲ್ಲೇ ಡಿಎಚ್‌ಒ-ಟಿಎಚ್‌ಒಗೆ ನೋಟಿಸ್