ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ (Panchamasali Reservation) ನೀಡುವ ಸಂಬಂಧ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಸಿಹಿ ಸುದ್ದಿ ಸಿಗುವ ಸ್ಪಷ್ಟ ಭರವಸೆ ಸಿಕ್ಕಿದೆ. ಮಾ. 24ರಂದು ಕರೆದಿರುವ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಸಿಗುವ ಭರವಸೆಯನ್ನು ಇಟ್ಟುಕೊಂಡಿದ್ದೇವೆ. ಪ್ರಧಾನಮಂತ್ರಿ ಅವರಿಗೆ ಶೋಷಿತ ಸಮಾಜದ ಬಗ್ಗೆ ಅರಿವಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jayamrityunjaya Sri) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸ್ಪಷ್ಟತೆ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಮಾರ್ಚ್ 15ರವರೆಗೆ ಗಡುವು ಕೊಡಲಾಗಿತ್ತು. ಆದರೂ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಮೀಸಲಾತಿ ಕೊಡದೇ ಹೋದಲ್ಲಿ ಸ್ಪಷ್ಟ ಬಹುಮತ ಕಷ್ಟ ಎಂಬುದು ಅವರಿಗೆ ಗೊತ್ತಾಗಿದೆ ಎಂದು ಹೇಳಿದರು.
ಕೇಂದ್ರದಿಂದ ನಿರ್ದೇಶನ ಮಾಡಿದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಡೇರಿಸಿರಲಿಲ್ಲ. ನಾವು ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕ ಮಾಡುತ್ತಲೇ ಇದ್ದೆವು. ಬುಧವಾರ (ಮಾ. 22) ಬೆಳಗ್ಗೆ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಬಂದಿದ್ದು, ಸಿಹಿ ಸುದ್ದಿ ಸಿಗುವ ಸ್ಪಷ್ಟ ಭರವಸೆ ಸಿಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ: Dhruva Sarja: 17 ವರ್ಷಗಳ ನಂತರ ಚಂದನವನಕ್ಕೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ; ಸತ್ಯವತಿಯಾಗಿ ಕಾಣಿಸಿಕೊಂಡಿದ್ದು ಹೀಗೆ!
ಮಾ. 24ರಂದು ಕರೆದಿರುವ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಸಿಗುವ ಭರವಸೆಯನ್ನು ಇಟ್ಟುಕೊಂಡಿದ್ದೇವೆ. ಸಿಎಂ ಯಾವುದೇ ವಿಳಂಬ ಮಾಡದೆ ಮೀಸಲಾತಿಯನ್ನು ಕಲ್ಪಿಸಬೇಕು. ಅನ್ಯಾಯದ ಬೇವನ್ನು ನಾವು ಮರೆತ್ತಿದ್ದೇವೆ. ಯುಗಾದಿಯಂದು ನಮಗೆ ಬೆಲ್ಲ ಸಿಕ್ಕಿದೆ. ಪ್ರಧಾನಿಯವರ ಮೇಲೆ ನಮಗೆ ಭರವಸೆ ಇದೆ. ಮಾ. 24ಕ್ಕೆ ಮೀಸಲಾತಿ ಸಿಗುವ ಭರವಸೆ ಇದೆ. ಅಂದು ಮುಖ್ಯಮಂತ್ರಿಗಳು 2A ಮೀಸಲಾತಿಯ ಘೋಷಣೆ ಮಾಡಲಿದ್ದಾರೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಪ್ರಧಾನಿ ಮೋದಿ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.
ಮಾ. 24ರಂದು GOOD NEWS ಕೊಡ್ತಾರಂತೆ ಸಿಎಂ ಬೊಮ್ಮಾಯಿ
ಬಾಗಲಕೋಟೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿ ಮಾರ್ಚ್ 24ರಂದು ಮಹತ್ವದ ಮಾಹಿತಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಮುಧೋಳದಲ್ಲಿ ಮಾ. 21ರಂದು ತಿಳಿಸಿದ್ದರು.
ಪಂಚಮಸಾಲಿ ಸಮಾಜವು 2ಎ ಮೀಸಲಾತಿಗಾಗಿ ಒತ್ತಾಯಿಸಿ ದೊಡ್ಡ ಮಟ್ಟದ ಹೋರಾಟವನ್ನೇ ನಡೆಸುತ್ತಿದೆ. ಈಗ ಸಮುದಾಯಕ್ಕೆ ಕೇಂದ್ರ ಸರ್ಕಾರ ಮೇಲ್ವರ್ಗದ ಮೀಸಲಾತಿಯಲ್ಲಿ ಒಂದು ಪಾಲನ್ನು ಪಂಚಮಸಾಲಿಗಳಿಗೆ ನೀಡಲಾಗುವುದು ಎಂದು ಈ ಹಿಂದೆ ಪ್ರಕಟಿಸಲಾಗಿತ್ತು. ಆದರೆ, ಇದನ್ನು ಪಂಚಮಸಾಲಿ ಮೀಸಲು ಹೋರಾಟಗಾರರು ತಿರಸ್ಕರಿಸಿದ್ದಾರೆ. ತಮಗೆ 2ಎ ಮೀಸಲಾತಿಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಂದೊಮ್ಮೆ ಈ ಮೀಸಲಾತಿ ಸಿಗದೆ ಹೋದರೆ ತಾವು ಬಿಜೆಪಿ ವಿರುದ್ಧವೂ ಮತ ಚಲಾಯಿಸಲು ಮತದಾರರಿಗೆ ಕರೆ ನೀಡಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಅವರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Karanataka Elections : ಮಾಡಾಳ್ ಮುಜುಗರ; ಅಮಿತ್ ಶಾ ಕಾರ್ಯಕ್ರಮ ಹೊನ್ನಾಳಿಯಿಂದ ಚಿತ್ರದುರ್ಗಕ್ಕೆ ಶಿಫ್ಟ್ ಮಾಡಿದ ಬಿಜೆಪಿ!
ಮಾರ್ಚ್ 24ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ನಂತರ ಪಂಚಮಸಾಲಿಗಳಿಗೆ 2 ಎ ಮೀಸಲಾತಿ ನೀಡುವ ಬಗ್ಗೆ ಮಾಹಿತಿ ಸಿಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಅಂದರೆ, ಅಂದು ನಡೆಯುವ ಸಭೆಯಲ್ಲಿ ಮೀಸಲಾತಿ ಬಗ್ಗೆ ಒಂದು ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದೇ ವೇಳೆ ʻ2 ಎ ಸಮುದಾಯಗಳನ್ನು 3ಬಿಗೆ ಹಾಕುವ ಬಗ್ಗೆ ಯಾವುದೇ ವರದಿ ಇಲ್ಲʼʼ ಎಂದೂ ಸಿಎಂ ಸ್ಪಷ್ಟಪಡಿಸಿದ್ದರು.