Site icon Vistara News

Panchamasali Reservation : ಪಂಚಮಸಾಲಿಗಳಿಗೆ 2ಸಿ, 2ಡಿ ಮೀಸಲಾತಿ ನೀಡಲು ಇದ್ದ ತಡೆ ತೆರವು, ಸಿಎಂಗೆ ಬಿಗ್‌ ರಿಲೀಫ್‌?

reservation

#image_title

ಬೆಂಗಳೂರು: ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ (Panchamasali Reservation) ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಬಿಗ್‌ ರಿಲೀಫ್‌ ಸಿಕ್ಕಿದೆ. ಚುನಾವಣೆ ಹೊಸ್ತಿಲಲ್ಲಿ ಇದು ಸರ್ಕಾರಕ್ಕೆ ಬೂಸ್ಟ್‌ ನೀಡಿದಂತಾಗಿದೆ ಎಂದು ಹೇಳಲಾಗುತ್ತಿದೆ.

ಪಂಚಮಸಾಲಿ ಲಿಂಗಾಯತರಿಗೆ ಯಾವ ಕಾರಣಕ್ಕೂ 2ಎ ಮೀಸಲಾತಿ ಅಡಿ ಮೀಸಲಾತಿ ನೀಡಲು ಅವಕಾಶ ಕೊಡಬಾರದು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್‌ ಯಾವುದೇ ಮೀಸಲಾತಿ ಬದಲಾವಣೆಗೂ ತಡೆ ನೀಡಿತ್ತು. ಅದರಲ್ಲೂ ಮುಖ್ಯವಾಗಿ ರಾಜ್ಯ ಸರ್ಕಾರ ಲಿಂಗಾಯತ ಪಂಚಮಸಾಲಿಗಳು ಮತ್ತು ಒಕ್ಕಲಿರಿಗೆ 2ಸಿ ಮತ್ತು 2ಡಿ ಮೀಸಲಾತಿಯ ಹೊಸ ವ್ಯವಸ್ಥೆಯನ್ನು ಮಾಡಿತ್ತು. ಇದು ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗಾಗಿ ನಿಗದಿಪಡಿಸಲಾದ ಶೇ. 10 ಮೀಸಲಾತಿಯಿಂದ ನೀಡಿದ್ದಾಗಿತ್ತು. ಒಟ್ಟಾರೆ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಹೈಕೋರ್ಟ್‌ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿತ್ತು.

ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಈ ತಡೆಯಾಜ್ಞೆಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಅದರೆ, ಇದರಲ್ಲೂ ಒಂದು ಷರತ್ತನ್ನು ವಿಧಿಸಿದೆ.

ಸರ್ಕಾರ 2ಎ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ತಾಕೀತು ಮಾಡಿದೆ. ಪಂಚಮಸಾಲಿಗಳಿಗೆ 2ಎ ಅಡಿ ಮೀಸಲಾತಿ ನೀಡದಂತೆ ಸಲ್ಲಿಸಲಾದ ಪಿಐಎಲ್‌ ವಿಚಾರಣೆ ನಡೆಸುವ ವೇಳೆ 2ಎ ಮೀಸಲಾತಿಯಲ್ಲಿ ಯಾವುದೇ ಪರಿವರ್ತನೆ ಮಾಡುವುದಿಲ್ಲ ಎಂದು ಕೇಂದ್ರ ಸರಕಾರದ ಸಾಲಿಸಿಟರ್‌ ಜನರಲ್‌ ಹೈಕೋರ್ಟ್‌ಗೆ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರದ ಭರವಸೆಯ ಹಿನ್ನೆಲೆಯಲ್ಲಿ ಮಧ್ಯಂತರ ತಡೆಯಾಜ್ಞೆಯನ್ನು ಹಿಂದೆ ಪಡೆದಿದೆ.

ತಡೆಯಾಜ್ಞೆ ತೆರವಿನಿಂದ ಏನು ಲಾಭ?

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದ ಆದೇಶ ತೆರವು ಮಾಡಿದ್ದರಿಂದ ಪಂಚಮಸಾಲಿ ಸಮುದಾಯಕ್ಕೆ 2ಸಿ, 2 ಡಿ ಮೀಸಲಾತಿ ನೀಡಲು ಅಡ್ಡಿ ಇಲ್ಲ. ಆದರೆ, ಯಾವುದೇ ಕ್ರಮ ಹೈಕೋರ್ಟ್ ಅಂತಿಮ ತೀರ್ಪಿಗೆ ಬದ್ಧವಾಗಿರಬೇಕೆಂದು ಸೂಚನೆ ನೀಡಲಾಗಿದೆ.

ನಿಜವೆಂದರೆ, ಪಂಚಮಸಾಲಿ ಲಿಂಗಾಯತರಿಗೆ 2 ಸಿ ಮೀಸಲಾತಿ ನೀಡುವುದಾಗಿ ಈಗಾಗಲೆ ಸರ್ಕಾರ ಘೋಷಿಸಿದೆ. ಅದರೆ, ಇದನ್ನು ಕೂಡಲಸಂಗಮ ಮಠದ ಶ್ರೀ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಹೋರಾಟಗಾರರು ಈ ಕೊಡುಗೆಯನ್ನು ನಿರಾಕರಿಸಿದ್ದಾರೆ. ತಮಗೆ ಹೊಸ ಮೀಸಲಾತಿ ಬೇಡ, ಕೇವಲ ಶಿಕ್ಷಣ. ಉದ್ಯೋಗಕ್ಕೆ ಸೀಮಿತವಾದ ಮೀಸಲಾತಿ ಬೇಡ, ಎಲ್ಲ ವಿಚಾರಗಳನ್ನೂ ಒಳಗೊಂಡ ಮೀಸಲಾತಿ ಬೇಕು. ಹೀಗಾಗಿ 2ಎ ಅಡಿಯಲ್ಲೇ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಸರ್ಕಾರವೇ ತಮಗೆ ಸಂದೇಶ ನೀಡಿದ್ದು, ಒಳ್ಳೆ ಸುದ್ದಿ ಬರಲಿದೆ ಎಂದು ಅವರೂ ಹೇಳಿಕೊಂಡಿದ್ದಾರೆ. ಹೀಗಾಗಿ ಮಾರ್ಚ್‌ 24ರಂದು ಪ್ರಕಟವಾಗಲಿರುವ ಮಹತ್ವದ ತೀರ್ಮಾನ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದೆ.

ಇದನ್ನೂ ಓದಿ Panchamasali reservation : ನಾಳೆ ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕೊಡುಗೆ; ವಚನಾನಂದ ಸ್ವಾಮೀಜಿ ವಿಶ್ವಾಸ

Exit mobile version