ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿ ನ್ಯಾಯ ಒದಗಿಸಬೇಕೆಂಬ ಬೇಡಿಕೆಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮಧ್ಯಪ್ರವೇಶದಿಂದ ಈಡೇರಿದ್ದು, ನ್ಯಾಯ ಸಿಕ್ಕಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಮೀಸಲಾತಿ ವರ್ಗೀಕರಣದ ಆದೇಶದ ಪ್ರತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಎಲ್ಲಾ ಲಿಂಗಾಯತ ಸಮುದಾಯ ಓಬಿಸಿ ಪಟ್ಟಿಗೆ ಸೇರಿಸಬೇಕು ಅಂತ ಹೋರಾಟ ಮಾಡಿದ್ದೆವು. ಐತಿಹಾಸಿಕ ಪಾದಯಾತ್ರೆ ಮಾಡಿದ್ದೆವು. ನಿರಂತರ ಹೋರಾಟ ಮಾಡಿದ ಪರಿಣಾಮ ಪ್ರಧಾನಮಂತ್ರಿಗಳು ನಮಗೆ ನ್ಯಾಯ ಕೊಡಿಸುವ ನಿರ್ದೇಶನ ನೀಡಿದ್ರು. ನಾವು 2ಎ ಮೀಸಲಾತಿ ಕೇಳಿದ್ದೆವು. ಆದ್ರೆ ಇತರೆ ಸಮುದಾಯಗಳಿಗೆ ಅನ್ಯಾಯ ಆಗಬಾರದು ಅಂತ 2ಡಿ ಮಾಡಿ ಲಿಂಗಾಯತ ಎಲ್ಲಾ ಸಮುದಾಯ ಜೊತೆ ಮರಾಠ ಎಲ್ಲಾ ಸಮುದಾಯ ಸೇರಿಸಿದೆ.
ಮೀಸಲಾತಿ ಕ್ರಾಂತಿ ಮಾಡಿದ್ದು ಲಿಂಗಾಯತ ಸಮುದಾಯ. ಸಚಿವ ಸಂಪುಟ ಸಭೆಯ ಬಳಿಕ ರಾಜ್ಯ ಪತ್ರಕ್ಕೆ ಕಾಯುತ್ತಿದ್ದೆವು. ರಾಜ್ಯಪತ್ರ ಕೊಡುವುದರ ಮೂಲಕ ಆದೇಶ ಪ್ರತಿ ನಮಗೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ದುಡಿಯುವ ವರ್ಗಕ್ಕೆ ಸಹಾಯ ಮಾಡಿದ್ರು. ಈಗ ಪ್ರಧನಾಮಂತ್ರಿಗಳು, ಅಮಿತ್ ಶಾ ಮಧ್ಯಪ್ರದೇಶದಿಂದ ಸಮಸ್ಯೆ ಬಗೆಹರಿದಿದೆ. ಕೇಂದ್ರ ಮತ್ತು ನಮ್ಮ ನಡುವೆ ಸೇತುವೆ ಆದ ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಇದನ್ನೂ ಓದಿ: SC ST Reservation: ಮುಂದುವರಿದ ಬಂಜಾರರ ಆಕ್ರೋಶ; ಗದಗದಲ್ಲಿ ಕೇಶ ಮುಂಡನ ಮಾಡಿಸಿ ಆಕ್ರೋಶ, ಶಿವಮೊಗ್ಗದಲ್ಲಿ ಹೆದ್ದಾರಿ ತಡೆ
ಬಸನಗೌಡ ಪಾಟೀಲ್ ಯತ್ನಾಳ್, ಈರಣ್ಣ ಕಡಾಡಿ, ಅರವಿಂದ ಬೆಲ್ಲದ್, ಸಿದ್ದು ಸವದಿ ಎಲ್ಲರ ಸಹಕಾರ ಸಿಕ್ಕಿದ್ದಕ್ಕೆ ಅಭಿನಂದನೆ. ಆದೇಶ ಪತ್ರ ಬರುವವರೆಗೂ ಸಂಭ್ರಮ ಬೇಡ ಅಂತ ಹೇಳಿದ್ದೆವು. ಈಗ ಆದೇಶ ಪತ್ರ ಬಂದಿದೆ, ಕೈಗೆ ಸಿಕ್ಕಿದೆ. ಎಲ್ಲಾ ಸಮುದಾಯದ ಜನರು ತಮ್ಮ ಗ್ರಾಮಗಳಲ್ಲಿ ಸೇರಿ ವಿಜಯೋತ್ಸವ ಮಾಡಬೇಕು. ಎಲ್ಲರಿಗೂ ಇದರ ಶ್ರೇಯಸ್ಸು ಸಿಗಬೇಕು. ಅಂಬೇಡ್ಕರ್, ಬಸವಣ್ಣಗೆ ಮಾಲಾರ್ಪಣೆ ಮಾಡಿ ತೆರಳ್ತೀನಿ. ಇದು ಮೊದಲ ಜಯ. ನಮನ್ನ 2ಡಿಗೆ ಸೇರಿಸಿದ್ದಾರೆ. ಚುನಾವಣೆ ಮುಗಿದ ಬಳಿಕ OBC ಮೀಸಲಾತಿಗೆ ಹೋರಾಟ ಆರಂಭವಾಗಲಿದೆ ಎಂದರು.
ಅಧಿಕಾರಕ್ಕೆ ಬಂದ್ರೆ ಮೀಸಲಾತಿ ತೆಗೆಯುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಹೆಳಿದ್ದು ತಪ್ಪು. ಅವರು ಈ ರೀತಿ ಹೇಳಬಾರದಿತ್ತು. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ಈ ರೀತಿ ಹೇಳಿಕೆ ಸರಿಯಲ್ಲ.
ಐತಿಹಾಸಿಕ ನಿರ್ಧಾರವನ್ನು ಬೊಮ್ಮಾಯಿ ಅವರು ಮಾಡಿದ್ದಾರೆ. ಮೋದಿ, ಅಮಿತ್ ಶಾ ಅವರಿಗೆ, ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. 2ಎ ಹೋಗಿದ್ರೆ ಉಳಿದ ಸಮುದಾಯಕ್ಕೆ ಅನ್ಯಾಯ ಆಗ್ತಿತ್ತು. 2ಡಿ ಇಂದ ನಮಗೆ ನ್ಯಾಯ ಸಿಕ್ಕಿದೆ. ಯಾರಿಂದಲೂ ಕಿತ್ತುಕೊಂಡಿಲ್ಲ. 2ಬಿಯಲ್ಲಿ ಇದ್ದದ್ದನ್ನ ನಮಗೆ ಹಂಚಿದ್ದಾರೆ. ಅವರಿಗೆ EWS ಅಡಿಯಲ್ಲಿ ನೀಡಿದ್ದಾರೆ. ಇಂದು ರಾಮಜನ್ಮ ದಿನ. ಇಂದು ನಮಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, 75 ವರ್ಷ ಆದವರಿಗೆ, ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ, ಒಂದೇ ಕುಟುಂಬಕ್ಕೆ ಟಿಕೆಟ್ ಇಲ್ಲ. ಮೋದಿ, ಅಮಿತ್ ಶಾ ಒಳ್ಳೆಯ ನಿರ್ಣಯ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ನಾವು ಮತ್ತೆ ಅಧಿಕಾರಕ್ಕೆ ಬರ್ತೀವಿ. ಈ ಬಾರಿ ಯಾವುದೇ ಆಪರೇಷನ್ ಕಮಲ ಮಾಡಲ್ಲ. ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ. ಆಪರೇಷನ್ ಕಮಲ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ.
ಧಮ್ ಇದ್ರೆ, ತಾಕತ್ ಇದ್ರೆ ಮೀಸಲಾತಿ ನೋಡೋಣ. ಒಕ್ಕಲಿಗರು, ಲಿಂಗಾಯತರು ಕಾಂಗ್ರೆಸ್ಸನ್ನ ಮೂಲೆಗೆ ತಳ್ತಾರೆ. ಡಿಕೆಶಿಗೆ ಧಮ್ ಇದ್ರೆ ಇನ್ನೂಮ್ಮೆ ಹೇಳಲಿ. ಜನರೇ ಅವರನ್ನ ಸೋಲಿಸ್ತಾರೆ. ಬ್ರದರ್ಸ್‌ಗಾಗಿ ಹೇಳಿಕೆ ನೀಡಿದ್ದಾರೆ. ಮೀಸಲಾತಿ ತೆಗೀತೀನಿ ಅಂತ ಮಾಡಿದ್ರೆ ಬ್ರದರ್ಸ್ ಜೊತೆ ಮೆಕ್ಕ, ಮದೀನಾಗೆ ಹೋಗಬೇಕಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಅವರ ಕುರಿತು ಹೇಳಿದರು.