Site icon Vistara News

Panchamasali Reservation | ಬೆಳಗಾವಿಯಲ್ಲಿ ಇಂದು ಬೃಹತ್‌ ಪಂಚಶಕ್ತಿ ಸಮಾವೇಶ, ಮೀಸಲಾತಿಗೆ ಆಗ್ರಹ

panchamasali protest

ಬೆಳಗಾವಿ: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮುದಾಯದ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಇಂದು ಸಮಾಜದಿಂದ ಪಂಚಶಕ್ತಿ ವಿರಾಟ್ ಬೃಹತ್ ಸಮಾವೇಶ ನಡೆಯಲಿದೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭವನ್ನು ಪಂಚಮಸಾಲಿ ಸಮುದಾಯ ಹಕ್ಕೊತ್ತಾಯಕ್ಕಾಗಿ ಬಳಸಿಕೊಂಡಿದ್ದು, ʻಮೀಸಲಾತಿ ಕೊಟ್ಟರೆ ತುಲಾಭಾರ, ಇಲ್ಲವೇ ಸೌಧಕ್ಕೆ ಮುತ್ತಿಗೆʼ ಎಂಬ ಎಚ್ಚರಿಕೆಯನ್ನು ನೀಡಿದೆ. ಡಿಸೆಂಬರ್ 19ರ ಒಳಗಾಗಿ ಮೀಸಲಾತಿ ಕೊಡಬೇಕು ಎಂದು ಸರ್ಕಾರಕ್ಕೆ ಕೂಡಲಸಂಗಮ ಜಯಮೃತ್ಯುಂಜಯ ಸ್ವಾಮೀಜಿ ಗಡುವು ನೀಡಿದ್ದರು. ಈ ಗಡುವು ಮುಕ್ತಾಯಗೊಂಡಿದ್ದು, ಇಂದು ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಧ್ಯಾಹ್ನ ಒಂದು ಗಂಟೆಗೆ ಸಚಿವ ಸಂಪುಟ ಸಭೆಯಿದ್ದು, ಅದರಲ್ಲಿ ಪಂಚಮಸಾಲಿ ಮೀಸಲಾತಿಯ ಬಗ್ಗೆ ಸಿಎಂ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಶ್ರೀಗಳು ಡಿಸೆಂಬರ್ 19ರಿಂದ ಸವದತ್ತಿಯಿಂದ ಪಾದಯಾತ್ರೆ ಆರಂಭ ಮಾಡಿದ್ದಾರೆ. ಪಾದಯಾತ್ರೆ ಹಿರೇಬಾಗೇವಾಡಿ ತಲುಪಿದ್ದು, ಅಲ್ಲಿಂದಲೇ ಇಂದು ಪಾದಯಾತ್ರೆ ಆರಂಭವಾಗಲಿದೆ. ಬಳಿಕ ಸುವರ್ಣ ಸೌಧ ಬಳಿ ಇರುವ ರಾಘವೇಂದ್ರ ಲೇಔಟ್‌ನಲ್ಲಿ ಬೃಹತ್ ಪಂಚಲಕ್ಷ ವಿರಾಟ ಸಮಾವೇಶ ನಡೆಯಲಿದೆ.

ಸಮಾವೇಶ ನಡೆಯುವ ಸ್ಥಳವನ್ನು ಶ್ರೀಗಳು ಹಾಗೂ ವಿಜಯಾನಂದ ಕಾಶಪ್ಪನವರ್ ಬುಧವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಕಳೆದ ಎರಡು ವರ್ಷದಿಂದ ಶ್ರೀಪೀಠ ಬಿಟ್ಟು ಎಲ್ಲರೂ ಹೋರಾಟ ಮಾಡಿದ್ದರಿಂದ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಮೀಸಲಾತಿ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿದ್ದಾರೆ. ನ.24ರಂದು ಸಿಎಂ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿಗೆ ಬರುವ ತೊಂದರೆ ತೆಗೆದುಕೊಳ್ಳಬೇಡಿ ಅಂದಿದ್ದರು. ಡಿ.19ರೊಳಗೆ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ನಾಳೆ 25 ಲಕ್ಷ ಜನಸ್ತೋಮ ಸೇರಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಲಿದ್ದೇವೆ. ನಾಳೆ ಸಮಾವೇಶದ ಒಳಗಾಗಿ ಮೀಸಲಾತಿ ಕೊಟ್ಟರೆ ಇದೇ ವೇದಿಕೆಯಲ್ಲಿ ಸಿಎಂ ಅವರಿಗೆ ಡೈಮಂಡ್ ಕಲ್ಲು ಸಕ್ಕರೆ ತುಲಾಭಾರ, ಹಸಿರು ಶಾಲು ಹಾಕಿ, ಹಳದಿ ರುಮಾಲು ಸುತ್ತಿ ಸನ್ಮಾನ ಮಾಡುತ್ತೇವೆ. ಇಲ್ಲದಿದ್ದರೆ ಸುವರ್ಣ ಸೌಧದ ಮುಂದೆ ಹೋರಾಟ ನಡೆಸಲಿದ್ದೇವೆ ಎಂದರು.

ಶ್ರೀಗಳು ನಿನ್ನೆ ಬೆಳಿಗ್ಗೆ ಬೈಲಹೊಂಗಲದಿಂದ ಪಾದಯಾತ್ರೆ ಆರಂಭಿಸಿದ್ದು ಸಂಜೆಯ ವೇಳೆಗೆ ಹಿರೇಬಾಗೇವಾಡಿ ತಲುಪಿತು. ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಬಳಿ ಪಾದಯಾತ್ರೆ ವೇಳೆಯಲ್ಲಿ ಶ್ರೀಗಳನ್ನು ಎಡಿಜಿಪಿ ಅಲೋಕ್ ಕುಮಾರ್, ಬೆಳಗಾವಿ ವಲಯ ಐಜಿ ಸತೀಶ ಕುಮಾರ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ಭೇಟಿಯಾದರು. ಶ್ರೀಗಳ ಪಾದಯಾತ್ರೆಗೆ ಸಾಥ್ ನೀಡಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಮಗೆ ಮೀಸಲಾತಿ ಸಿಗುವ ವಿಶ್ವಾಸವಿದೆ. ಸಿಎಂ ಬೊಮ್ಮಾಯಿ ಅವರೇ ಡಿ.19ರ ಗಡುವು ಕೊಟ್ಟಿದ್ದರು. 19ರ ಒಳಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ತರಿಸಿಕೊಳ್ಳುತ್ತೇನೆ ಅಂದಿದ್ದರು. ಅವರೇ ಕೊಟ್ಟ ಮಾತನ್ನ ತಪ್ಪಿದ್ದಾರೆ. ಮೀಸಲಾತಿ ಕೊಡದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದು ಖಚಿತ. ಅಡ್ಡಿ ಪಡಿಸಿದರೆ ಜನ ಸಹನೆ ಕಳೆದುಕೊಂಡು ಉಗ್ರರೂಪ ಪಡೆಯುತ್ತಾರೆ. ಹಿಂದೆ ಡಿಸಿಎಂ ಆಗಿದ್ದವರು ಈಗ ಮೀಸಲಾತಿಗೆ ಅಡ್ಡಿ ಪಡಿಸುತ್ತಿದ್ದಾರೆ. ಸಮಯ ಬಂದಾಗ ಅವರು ಯಾರು ಅಂತ ಹೇಳ್ತೀನಿ ಎಂದು ಕಾಶಪ್ಪನವರ್ ಹೇಳಿದರು.

ಇದನ್ನೂ ಓದಿ | Panchamasali Reservation | ಸವದತ್ತಿಯಲ್ಲಿ ಬೃಹತ್‌ ಪಂಚಮಸಾಲಿ ಪಾದಯಾತ್ರೆಗೆ ಚಾಲನೆ; ಸುವರ್ಣಸೌಧ ಮುತ್ತಿಗೆಗೆ ನಿರ್ಧಾರ

ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಲಕ್ಷ್ಮೀ ಹೆಬ್ಬಾಳ್ಕರ್, ಮಹಾಂತೇಶ ದೊಡ್ಡಗೌಡರ, ಮಹೇಶ್ ಕುಮಟಳ್ಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ, ಎ.ಬಿ.ಪಾಟೀಲ್, ಹೆಚ್.ಎಸ್.ಶಿವಶಂಕರ ಸೇರಿ ಪಂಚಮಸಾಲಿ ಸಮುದಾಯದ ಹಲವು ನಾಯಕರು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಾದಯಾತ್ರೆ ಸಮಾವೇಶ ಸ್ಥಳ ತಲುಪುವ ಸಾಧ್ಯತೆಯಿದೆ.

ಮಾರ್ಗ ಬದಲಾವಣೆ

ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಪ್ರತಿಭಟನೆ ಬಿಸಿ ತಟ್ಟಲಿದೆ. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಕೇಶ್ವರ- ಎಂ.ಕೆ.ಹುಬ್ಬಳ್ಳಿ ಮಧ್ಯದವರೆಗೂ ಮಾರ್ಗ ಬದಲಾವಣೆ ಮಾಡಲಾಗಿದೆ.

ಕೊಲ್ಲಾಪುರದಿಂದ ಆಗಮಿಸುವ ವಾಹನಗಳು ಸಂಕೇಶ್ವರದಿಂದ- ಹುಕ್ಕೇರಿ- ಗೋಕಾಕ- ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ, ಹುಬ್ಬಳ್ಳಿ ಧಾರವಾಡದಿಂದ ಬರುವ ವಾಹನಗಳು ಎಂ.ಕೆ.ಹುಬ್ಬಳ್ಳಿ- ಬೈಲಹೊಂಗಲ- ನೇಸರಗಿ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಿಸಿದ್ದಾರೆ.

ಇದನ್ನೂ ಓದಿ | Panchamasali Reservation | ನಾಳೆ ಪಂಚಮಸಾಲಿ ಮೀಸಲು ಘೋಷಿಸಿದರೆ ಸಿಎಂಗೆ ಸನ್ಮಾನ, ಇಲ್ಲದಿದ್ದರೆ ಅಪಮಾನ: ಶ್ರೀ ಎಚ್ಚರಿಕೆ

Exit mobile version