ಮಂಡ್ಯ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಪಂಚರತ್ನ ಯಾತ್ರೆಯನ್ನು (Pancharatha Yatra) ಕೈಗೊಂಡಿದ್ದಾರೆ. ಯಾತ್ರೆ ವೇಳೆ ಅವಿವಾಹಿತರ ಕಷ್ಟಕ್ಕೆ ಧ್ವನಿಯಾಗಿರುವ ಎಚ್‌ಡಿಕೆ ಕೃಷಿ ಮಾಡುವ ರೈತರ ಮನೆಗೆ, ಹೆಣ್ಣು ಹೆತ್ತವರು ಹುಡುಕಿಕೊಂಡು ಬಂದು ಹೆಣ್ಣು ಕೊಡುವ ಹಾಗೆ ಮಾಡದಿದ್ದರೆ ಜೆಡಿಎಸ್ ಪಕ್ಷವನ್ನ ವಿಸರ್ಜಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ರೈತ ವರ್ಗ ಸೇರಿ ಯುವ ಮತದಾರರನ್ನು ಸೆಳೆಯಲು ಮುಂದಾಗುತ್ತಿದ್ದಾರೆ.
ಪಂಚರತ್ನ ಯಾತ್ರೆ ವೇಳೆ ಎಚ್‌ಡಿಕೆ ಭಾಷಣದ ನಡುವೆ ಕಾರ್ಯಕರ್ತನೊಬ್ಬ, ರೈತರ ಹೆಣ್ಣು ಮಕ್ಕಳನ್ನು ಆಫೀಸರ್ ಮದುವೆ ಮಾಡಿಕೊಂಡು ಹೋಗುತ್ತಾರೆ. ಆದರೆ ನಮಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಈ ವೇಳೆ ಮಾತನಾಡಿರುವ ಎಚ್‌ಡಿಕೆ ರೈತರಿಗೆ ಹೆಣ್ಣು ಕೊಡಲು ಯಾರೂ ತಯಾರಿಲ್ಲ. ರೈತರ ಪರವಾದ ಯೋಜನೆ ಇದೆ ಆದರೆ ಆ ಯೋಜನೆಯಿಂದಾಗಿ ಕೃಷಿ ಮಾಡುವವರಿಗೆ ಹುಡುಕಿಕೊಂಡು ಬಂದು ಹೆಣ್ಣು ಕೊಡುವ ಹಾಗೆ ಮಾಡುವುದಾಗಿದೆ ಹೇಳಿದ್ದರು.
ವಿಶಿಷ್ಟ ಬೇಡಿಕೆಯಿಟ್ಟಿದ್ದ ರೈತ
ಹೆಣ್ಣು ಮಕ್ಕಳು ಅದೇ ಜಿಲ್ಲೆಯ ಗಂಡನ್ನೇ ವರಿಸುವ ಹೊಸ ಕಾನೂನು ಜಾರಿಗೆ ತರುವಂತೆ ಎಚ್‌ಡಿಕೆಗೆ ಯುವ ರೈತನೊಬ್ಬ ಪತ್ರ ಬರೆದಿದ್ದ. ಪಂಚರತ್ನ ಯಾತ್ರೆ ಕೋಲಾರಕ್ಕೆ ಬಂದಾಗ ರೈತ ಯುವಕನೊಬ್ಬ ವಿಶಿಷ್ಟ ಬೇಡಿಕೆಯೊಂದನ್ನು ಇಟ್ಟಿದ್ದ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಕೂಡಲೇ ʻಆಯಾ ಜಿಲ್ಲೆಯ ವಧುವು ಅದೇ ಜಿಲ್ಲೆಯ ವರನನ್ನೇ ವರಿಸಬೇಕುʼ ಎಂಬ ನಿಯಮವನ್ನು ಜಾರಿಗೆ ತರಬೇಕು ಎಂದು ಪತ್ರ ಬರೆದು ಕೋರಿದ್ದ. ಒಕ್ಕಲುತನ ಮಾಡುವ ರೈತರ ಮಕ್ಕಳಿಗೆ ವಧುಗಳು ಸಿಗದೆ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಎಷ್ಟೋ ಜನ ಗಂಡು ಮಕ್ಕಳಿಗೆ ವಯಸ್ಸು ಮೀರುತ್ತಿದೆ. ಹಲವರಿಗೆ ೩೫, ೪೦, ೪೫ ವರ್ಷಗಳಾದರೂ ಹೆಣ್ಣುಗಳೇ ಸಿಗುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆ ಎಂದು ಯುವಕರು ಕಷ್ಟವನ್ನು ತೊಡಿಕೊಂಡಿದ್ದರು.
ಅಧಿವೇಶನಕ್ಕಿಂತ ನನಗೆ ಪಂಚರತ್ನ ಯಾತ್ರೆಯೇ ಮುಖ್ಯ
ಸಕ್ಕರೆನಾಡು ಮಂಡ್ಯದಲ್ಲಿ ಮೂರನೇ ದಿನದ ಪಂಚರತ್ನ ರಥಯಾತ್ರೆ ಪ್ರವೇಶವಾಗಿದ್ದು, ಗೆಜ್ಜಲಗೆರೆ ಬಳಿ ಎಚ್‌ಡಿಕೆಗೆ ಬೈಕ್ ರ‍್ಯಾಲಿ ಮೂಲಕ ಸ್ವಾಗತ ಕೋರಿದರು. ಈ ವೇಳೆ ವಿಧಾನ ಮಂಡಲದ ಅಧಿವೇಶನಕ್ಕಿಂತ ನನಗೆ ನನ್ನ ಪಂಚರತ್ನ ಯಾತ್ರೆಯೇ ಮುಖ್ಯ ಎಂದ ಅವರು, ಕಳೆದ ಮೂರು ದಿನಗಳ ಅಧಿವೇಶನದಲ್ಲಿ ಏನಾಗಿದೆ. ನಾಡಿನ ಸಮಸ್ಯೆಗಳ ಬಗೆಗೆ ಸಕರಾತ್ಮಕವಾಗಿ ಮಾತಾಡಿದ್ದಾರಾ. ಅರ್ಧಗಂಟೆ ಅಧಿವೇಶನದಲ್ಲಿ ಮಾತನಾಡಿದ ಕೂಡಲೇ ಈ ಸರ್ಕಾರದಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತಾ? ಸಮಸ್ಯೆಗಳ ಪರಿಹಾರಕ್ಕಾಗಿಯೇ ನಾವು ಪಂಚರತ್ನ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಕೋವಿಡ್ ಅಲೆ ತಡೆಗೆ ರಾಜ್ಯ ಸರ್ಕಾರ ಏನೇ ನಿರ್ಧಾರ ಮಾಡಿದರೂ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ. ಆದರೆ ನಮ್ಮ ಯಾತ್ರೆಗೆ ಸಿಕ್ಕಿರುವ ಜನ ಬೆಂಬಲ ನೋಡಿ, ಕೋವಿಡ್ ನೆಪದಲ್ಲಿ ನಮ್ಮ ಪಂಚರತ್ನ ಯಾತ್ರೆಗೆ ನಿರ್ಬಂಧ ಹಾಕುವ ಜತೆಗೆ ಯಾತ್ರೆ ನಿಲ್ಲಿಸುವ ಸಂಬಂಧ ಕೇಶವ ಕೃಪಾದಲ್ಲಿ ಚಿಂತನೆ ನಡೆದಿದೆ. ಪ್ರಧಾನ ಮಂತ್ರಿಗಳ ಜತೆಗೂ ಚರ್ಚೆ ನಡೆದಿದೆ ಎಂಬ ಮಾಹಿತಿ ಸಿಕ್ಕಿರುವುದಾಗಿ ಹೇಳಿದ್ದಾರೆ.
ಡಿಕೆ ಶಿವಕುಮಾರ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಎಚ್‌ಡಿಕೆ
ನನಗೆ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿದ್ದು ಪಂಚರತ್ನ ರಥಯಾತ್ರೆಯಲ್ಲಿ ದಿನಕ್ಕೆ ಹತ್ತು ಗಂಟೆ ನಿಲ್ಲಬೇಕು. ಹಲವರು ನಿಮ್ಮ ಆರೋಗ್ಯ ಮುಖ್ಯ ಎಂದು ಹೇಳುತ್ತಾರೆ. ಆದರೆ ನಾನೇನು ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿಲ್ಲ, ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ದೊಡ್ಡ ಶಾಪಿಂಗ್ ಮಾಲ್ ಕಟ್ಟಿ ಹತ್ತಾರು ಕೋಟಿ ಲಾಭ ಬರುವ ಹಾಗೆ ಮಾಡಿಕೊಂಡಿಲ್ಲ. ಆದರೂ ನನ್ನ ಬಳಿ ಬರುವ ಜನರ ನೋವಿಗೆ ಕೈಲಾದಷ್ಟು ಸ್ಪಂದಿಸಿದ್ದೇನೆ ಎಂದು ಹೆಸರು ಹೇಳದೆ ಡಿ.ಕೆ ಶಿವಕುಮಾರ್‌ಗೆ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಸಂಪೂರ್ಣ ಅಧಿಕಾರಬೇಕು
ʻʻನಾನು ವಾರಕ್ಕೆ ಅಲ್ಲೊಂದು ಇಲ್ಲೊಂದು ಭಾಷಣ ಮಾಡಿಕೊಂಡು ಬಂದರೆ ಸಾಕು 40-50 ಸೀಟು ಗೆಲ್ಲುತ್ತೇವೆ. ಆದರೆ ನನಗೆ ಸಂಪೂರ್ಣ ಅಧಿಕಾರ ಬೇಕು. ಅದಕ್ಕಾಗಿಯೇ 123 ಗುರಿಯೊಂದಿಗೆ ಪಂಚರತ್ನ ಯಾತ್ರೆ ಕೈಗೊಂಡಿದ್ದೇನೆ. ಕುತಂತ್ರದ ರಾಜಕಾರಣದಿಂದ ಲೋಕಸಭಾ ಚುನಾವಣೆ ಸೋತಿದ್ದೇನೆ. ದೇವೆಗೌಡರು ವ್ಹೀಲ್‌ಚೇರ್‌ನಲ್ಲಿ ತೆರಳಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ್ದಾರೆ. ಇದು ರೈತರು ದೇವೆಗೌಡರ ನಡುವೆ ಇರುವ ಕಮಿಟ್ಮೆಂಟ್. ಮಂಡ್ಯದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ತೀರ್ಮಾನ ಮಾಡಿ ಕೆಲಸ ಮಾಡಿ. ಶಾಸಕ ಶ್ರೀನಿವಾಸ್ ಹೆಸರನ್ನು ಮೊದಲ ಪಟ್ಟಿಯಲ್ಲೇ ಘೋಷಿಸಿದ್ದೇವೆ. ಕೆ.ಆರ್.ಪೇಟೆಯಲ್ಲಿ ಒಮ್ಮೆ ತಪ್ಪಾಗಿದೆ. ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಗೆದ್ದರು. ಮಂಡ್ಯ ಜನ ಅಂತಹ ಪಕ್ಷವನ್ನು ಬೆಂಬಲಿಸಬಾರದು. ಯಾವ ಧೈರ್ಯದ ಮೇಲೆ ಮಂಡ್ಯ ಜಿಲ್ಲೆ ಪ್ರವೇಶ ಮಾಡುತ್ತಾರೆ? ಯಾವ ನೈತಿಕತೆ ಮೇಲೆ ಬಂದು ಮಾತನಾಡುತ್ತಾರೆʼʼ ಎಂದು ಬಿಜೆಪಿ ನಾಯಕರ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು.
ವಿರೋಧಿಗಳ ಷಡ್ಯಂತ್ರಕ್ಕೆ ನಾನು ಬಲಿಯಾದೆ ನಿಖಿಲ್ ಕುಮಾರಸ್ವಾಮಿ
ಸಿಲ್ವರ್ ಜ್ಯೂಬಲಿ ಪಾರ್ಕ್‌ನಲ್ಲಿ ನಡೆದ ಪಂಚಯಾತ್ರೆ ಬಹಿರಂಗ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ, ʻʻಎಂಪಿ ಚುನಾವಣೆಯಲ್ಲಿ ಆದ ಸೋಲು ಸ್ಮರಿಸಿದರು. ನನ್ನ, ನಿಮ್ಮ ಸಂಬಂಧ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾನು ಮಂಡ್ಯ ಜಿಲ್ಲೆಯನ್ನು ಮರೆತಿಲ್ಲ, ಮರೆಯುವುದಿಲ್ಲ. ನನ್ನ ನಿಮ್ಮ ಸಂಬಂಧ ಕೇವಲ ರಾಜಕೀಯಕ್ಕೆ ಸೀಮಿತವಾದದ್ದಲ್ಲʼʼ ಎಂದರು.
ʻʻಅಂದು ಮಂಡ್ಯ ಸ್ವಾಭಿಮಾನದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದರು. ರಾಜಕೀಯ ಷಡ್ಯಂತ್ರಕ್ಕೆ ನಾನು ಸೋತೆ. ಎಲ್ಲಾ ವಿರೋಧಿಗಳ ಷಡ್ಯಂತ್ರಕ್ಕೆ ನಾನು ಬಲಿಯಾದೆ ಅಷ್ಟೇ. ಮೊದಲು 2023ಕ್ಕೆ ಎಚ್‌ಡಿಕೆಯನ್ನು ಸಿಎಂ ಮಾಡಲು ಶ್ರಮಿಸಿ, ಯಾರೂ ಉದ್ವೇಗಕ್ಕೆ ಒಳಗಾಗಬೇಡಿ ಮಂಡ್ಯ ಜಿಲ್ಲೆ ನಮ್ಮ ಜಿಲ್ಲೆ. ದೇವೇಗೌಡ, ಕುಮಾರಣ್ಣನ ಬೆಳೆಸಿದ ಜಿಲ್ಲೆʼʼ ಎಂದು ಮಾತನಾಡಿದರು.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ | ಬೀಸೋ ದೊಣ್ಣೆಯಿಂದ 7 ದಿನ ತಪ್ಪಿಸಿಕೊಂಡ ಬೊಮ್ಮಾಯಿ ಸರ್ಕಾರ; ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದ ಯತ್ನಾಳ್