ಕೋಲಾರ: ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ (JDS Pancharatna Yatre) ಜೆಡಿಎಸ್ ಸಜ್ಜಗೊಂಡಿದ್ದು, ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಮಹಾಗಣಪತಿ ದೇವಸ್ಥಾನದಲ್ಲಿ ನ.1ರಂದು ಬೆಳಗ್ಗೆ 9 ಗಂಟೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚರತ್ನ ಯಾತ್ರೆಗೆ ಚಾಲನೆ ಸಿಗಲಿದೆ.
ಕುರುಡುಮಲೆ ವಿನಾಯಕ ದೇಗುಲದಲ್ಲಿ ಪೂಜೆ ಬಳಿಕ ದರ್ಗಾದಲ್ಲಿ ಜೆಡಿಎಸ್ ನಾಯಕರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಗೆ ಮುಳಬಾಗಿಲಿನ ತಿರುಪತಿ ರಸ್ತೆಯ ಬಾಲಾಜಿ ಭವನ ಪಕ್ಕದ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ | Corruption Politics | ಸಿಎಂ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ʼದಮ್ʼ ಪಾಲಿಟಿಕ್ಸ್; ಈಗ ಡಿಕೆಶಿ ಚಾಲೆಂಜ್!
ಸಮಾವೇಶದಲ್ಲಿ 2023ರ ವಿಧಾನ ಸಭೆ ಚುನಾವಣೆಯ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸಮಾವೇಶಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ರಾಜ್ಯದ ವಿವಿಧೆಡೆಯಿಂದ 2 ಲಕ್ಷ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಭದ್ರತೆಗಾಗಿ ಪೊಲೀಸರು ಪೂರ್ವಭಾವಿ ಸಿದ್ಧತೆ ನಡೆದಿದ್ದು, ಸ್ಥಳಪರಿಶೀಲನೆ ನಡೆಸಿದ್ದಾರೆ.
ನಾಡಿನ ಅಭಿವೃದ್ಧಿಗೆ ಪೂರಕವಾಗಿ ಜೆಡಿಎಸ್ ನವ ಕರ್ನಾಟಕಕ್ಕಾಗಿ ಮಹಾಯಾತ್ರೆ ಘೋಷವಾಕ್ಯದೊಂದಿಗೆ ʼಪಂಚರತ್ನ ರಥಯಾತ್ರೆʼ ಹಮ್ಮಿಕೊಂಡಿದ್ದು, 1.”ಶಿಕ್ಷಣವೇ ಆಧುನಿಕ ಶಕ್ತಿ”, 2.”ಆರೋಗ್ಯವೇ ಸಂಪತ್ತು”, 3.”ರೈತ ಚೈತನ್ಯ”, 4.”ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ”, 5.”ವಸತಿಯ ಆಸರೆ” ಎಂಬ ಐದು ಕನಸಿನ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ. ಈ ಯಾತ್ರೆಗೆ ಅ.27ರಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಧ್ಯುಕ್ತ ಚಾಲನೆ ನೀಡಲಾಗಿತ್ತು. ಇದೀಗ ನ.1ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಅಧಿಕೃತವಾಗಿ ಮುಳಬಾಗಿಲಿನಲ್ಲಿ ಯಾತ್ರೆ ಆರಂಭವಾಗಲಿದೆ.
ಚುನಾವಣಾ ತಂತ್ರಕ್ಕೆ ಕಾರ್ಪೊರೇಟ್
ಶಿಕ್ಷಣ, ಆರೋಗ್ಯ, ಕೃಷಿ, ವಸತಿ, ಉದ್ಯೋಗದ ಕುರಿತು ಯೋಜನೆ ರೂಪಿಸಿರುವ ಎಚ್.ಡಿ.ಕುಮಾರಸ್ವಾಮಿ ಅವರು, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಈ ಐದು ಪಂಚಸೂತ್ರ ಜಾರಿಗೊಳಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. 2023ರ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದುಕೊಂಡಿರುವ ಪಂಚರತ್ನ ರಥಯಾತ್ರೆ ಯಶಸ್ವಿಗೊಳಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಚುನಾವಣಾ ತಂತ್ರಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡಲು ಪಕ್ಷ ಮುಂದಾಗಿದೆ. ಪಂಚರತ್ನ ರಥಯಾತ್ರೆ ಮೂಲಕ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ, ಬಿಜೆಪಿಯ ಜನಸಂಕಲ್ಪ ಯಾತ್ರೆ ಮಾದರಿಯಲ್ಲಿ ಜನರನ್ನು ತಲುಪಲು ಜೆಡಿಎಸ್ ಯೋಜನೆ ರೂಪಿಸಿದೆ.
ಈ ನಿಟ್ಟಿನಲ್ಲಿ ಯಾತ್ರೆ ನಿರ್ವಹಣೆ ಜವಾಬ್ದಾರಿಯನ್ನು ಪಿಆರ್ ಏಜೆನ್ಸಿಯೊಂದಕ್ಕೆ ವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಜತೆ ಕುಮಾರಸ್ವಾಮಿ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಅವರನ್ನು ಪಕ್ಷದ ಚುನಾವಣಾ ಪ್ರಚಾರ ಸಲಹೆಗಾರರಾಗಿ ಇನ್ನೂ ಅಂತಿಮ ಮಾಡಿಲ್ಲ. ಆದರೂ ಪಂಚರತ್ನ ರಥಯಾತ್ರೆಯನ್ನು ಪಿಆರ್ ಏಜೆನ್ಸಿ ಮೂಲಕ ಯಶಸ್ವಿಗೊಳಿಸಲು ದಳಪತಿಗಳು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್: ಸಿದ್ದರಾಮಯ್ಯ