ಬೆಂಗಳೂರು: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ (Parashurama Theme Park) ನಿರ್ಮಾಣ ಕಾಮಗಾರಿಯಲ್ಲಿ ಆಗಿದೆ ಎನ್ನಲಾದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರದ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಿಐಡಿಗೆ ಒಪ್ಪಿಸಿದ್ದಾರೆ. ಈ ಕ್ರಮವನ್ನು ಕಾರ್ಕಳ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿ. ಸುನಿಲ್ ಕುಮಾರ್, ಪರಶುರಾಮ ಥೀಮ್ ಪಾರ್ಕ್ ವಿಚಾರದ ಬಗ್ಗೆ ಅನಗತ್ಯವಾಗಿ ಎಬ್ಬಿಸುತ್ತಿದ್ದ ಊಹಾಪೋಹ ಹಾಗೂ ಸುಳ್ಳು ಆರೋಪಗಳಿಗೆ ಒಂದು ಪೂರ್ಣ ವಿರಾಮ ಬೇಕಿತ್ತು. ಈ ಸುಳ್ಳು ಆರೋಪಗಳ ತನಿಖೆಗಾಗಿ ರಾಜ್ಯ ಸರ್ಕಾರ ಕೊನೆಗೂ ಸಿಐಡಿ ತನಿಖೆ ನಡೆಸಲು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಯಬೇಕೆಂದು ಆರು ತಿಂಗಳು ಹಿಂದೆಯೇ ನಾನು ಆಗ್ರಹಿಸಿದ್ದೆ. ಸರ್ಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವ ಜತೆಗೆ ಥೀಮ್ ಪಾರ್ಕ್ ಅಭಿವೃದ್ಧಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಆದಷ್ಟು ಬೇಗ ಥೀಮ್ ಪಾರ್ಕ್ ಪ್ರವಾಸಿಗಳ ವೀಕ್ಷಣೆಗೆ ಮುಕ್ತಗೊಳ್ಳುವಂತಾಗಬೇಕೆಂದು ಒತ್ತಾಯಿಸುತ್ತೇನೆ. ಸಿಐಡಿ ತನಿಖೆಗೆ ಒತ್ತಾಯ ಹಾಗೂ ಮುತುವರ್ಜಿ ತೋರಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಆದೇಶದಲ್ಲೇನಿದೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಫೆ. 2ರಂದು ಬರೆದ ಪತ್ರದಲ್ಲಿ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ನಡೆದ ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಕುರಿತು ದೃಶ್ಯ ಮಾಧ್ಯಮ ಮತ್ತು ದಿನ ಪತ್ರಿಕೆಗಳು ವರದಿ ಮಾಡಿರುವುದು ತಿಳಿದುಬಂದಿದೆ. ಈ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಸಿಒಡಿ ಅಥವಾ ಉನ್ನತ ಮಟ್ಟದ ತನಿಖೆ ನಡೆದಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಒಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.
ಬಿಜೆಪಿ ಅವಧಿಯಲ್ಲಿ ನಿರ್ಮಾಣವಾಗಿದ್ದ ಥೀಮ್ ಪಾರ್ಕ್
ಸಮುದ್ರ ಮಟ್ಟದಿಂದ 500 ಮೀಟರ್ ಎತ್ತರದಲ್ಲಿ ಇರುವ ಈ ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿ ಈ ಥೀಮ್ ಪಾರ್ಕ್ ನಿರ್ಮಾಣವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗ ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆಗಿದ್ದ ಕಾರ್ಕಳದ ಶಾಸಕ ವಿ. ಸುನೀಲ್ ಕುಮಾರ್ ಮುಂದಾಳತ್ವ ವಹಿಸಿ ನಿರ್ಮಾಣ ಮಾಡಿಸಿದ್ದರು.
ಏನುಂಟು ಪರಶುರಾಮ ಥೀಮ್ ಪಾರ್ಕ್‌ನಲ್ಲಿ?
ಆ ಗುಡ್ಡದ ಮೇಲೆ 33 ಅಡಿ ಎತ್ತರದ ಪರಶುರಾಮರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾಗಿ ಹೇಳಲಾಗಿತ್ತು. ಆದರೆ, ಆ ಪ್ರತಿಮೆಯ ಕೆಲವು ಭಾಗವನ್ನು ಫೈಬರ್‌ನಲ್ಲಿ ಮಾಡಿರುವುದು ಬಳಿಕ ಬೆಳಕಿಗೆ ಬಂದಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಗಳೂ ಕೇಳಿ ಬಂದಿದ್ದವು.
ಇದನ್ನೂ ಓದಿ: CM Janaspandana: ವಿಶೇಷ ಚೇತನರಿದ್ದ ಜಾಗಕ್ಕೇ ತಿಂಡಿ ತಂದು ಕೊಟ್ಟ ಅಧಿಕಾರಿಗಳು!
ಇನ್ನು ಈ ಥೀಮ್ ಪಾರ್ಕ್‌ನಲ್ಲಿ ಮುನ್ನೆಲೆಗೆ ಒಂದು ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಒಂದು ಬಯಲು ರಂಗಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಭಜನಾ ಮಂದಿರವಿದ್ದು, ಅದರ ಪಕ್ಕದಲ್ಲಿ ಪರಶುರಾಮರ ಜೀವನದ ದೃಶ್ಯಗಳು ಇರುವ ಮ್ಯೂಸಿಯಂ ಇದೆ. ಕಲಾಪ್ರದರ್ಶನದ ಗ್ಯಾಲರಿ ಕೂಡ ಗಮನ ಸೆಳೆಯುತ್ತದೆ. ಈ ಥೀಮ್ ಪಾರ್ಕ್‌ಗೆ ಸರ್ಕಾರದ ವಿವಿಧ ಅನುದಾನಗಳಿಂದ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.