ಬೆಂಗಳೂರು: ಇನ್ನು ಮುಂದೆ ಪರಪ್ಪನ ಅಗ್ರಹಾರ ಜೈಲಿಗೆ ಯಾರೂ ಪಾರ್ಸೆಲ್‌ಗಳನ್ನು ಕಳುಹಿಸುವಂತಿಲ್ಲ. ಇದು ಸೆಂಟ್ರಲ್ ಜೈಲಿನಲ್ಲಿ ಜಾರಿಗೆ ಬಂದಿರುವ ಹೊಸ ನಿಯಮ.
ಇಲ್ಲಿರುವ ಕೈದಿಗಳಿಗೆ ಮನೆಯವರು ಬಟ್ಟೆ, ಇತರ ವಸ್ತುಗಳನ್ನು ಪಾರ್ಸೆಲ್ ಮಾಡಲು ಇದುವರೆಗೆ ಅವಕಾಶವಿತ್ತು. ಆದರೆ, ಕೆಲವು ಕೈದಿಗಳು ಇದನ್ನು ದುರುಪಯೋಗ ಮಾಡಿಕೊಂಡು ಪಾರ್ಸೆಲ್ ಹೆಸರಲ್ಲಿ ಬೀಡಿ, ಸಿಗರೇಟು, ಗಾಂಜಾ ಮತ್ತಿತರ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು ಎಂಬ ಆಪಾದನೆ ಇತ್ತು. ಇದರ ಜತೆಗೇ ಕೆಲವೊಂದು ಕೈದಿಗಳ ಮೇಲೆ ಸೇಡು ತೀರಿಸಿಕೊಳ್ಳುವ, ಅವರನ್ನು ಸಿಕ್ಕಿಸಿ ಹಾಕುವ ಉದ್ದೇಶದಿಂದಲೂ ನಿಷೇಧಿತ ವಸ್ತುಗಳನ್ನು ಪಾರ್ಸೆಲ್ ಮೂಲಕ ಕಳುಹಿಸಲಾಗುತ್ತಿತ್ತು ಎನ್ನಲಾಗಿದೆ. ಹೀಗಾಗಿ ಎರಡೂ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಪಾರ್ಸೆಲ್ ಪದ್ಧತಿಯನ್ನು ನಿಲ್ಲಿಸಲಾಗಿದೆ.
ಹೀಗಾಗಿ ಇನ್ನು ಮುಂದೆ ಜೈಲಿಗೆ ಯಾವುದೇ ತರಹ ಪಾರ್ಸಲ್ ತರಿಸಿಕೊಳ್ಳುವಂತಿಲ್ಲ. ಬಟ್ಟೆ, ನಿತ್ಯೋಪಯೋಗಿ ವಸ್ತುಗಳಿಗೆ ಇದುವರೆಗೆ ಇದ್ದ ಅವಕಾಶವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಾರದ ಮೊದಲೇ ಅನುಮತಿ ಕಡ್ಡಾಯ
ಒಂದು ವೇಳೆ ಪಾರ್ಸೆಲ್ ಕಳುಹಿಸಲೇಬೇಕು ಎಂದಾದರೆ ಒಂದು ವಾರ ಮೊದಲೇ ಜೈಲಧಿಕಾರಿಯ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಯಾವ ಪೋಸ್ಟ್, ಕಳುಹಿಸಿದ್ದು ಯಾರು, ಯಾವ ವಸ್ತು ಎಂಬುದನ್ನು ಮೊದಲೇ ನಮೂದಿಸಬೇಕು ಎಂದು ತಿಳಿಸಲಾಗಿದೆ. ಒಂದೊಮ್ಮೆ ಅವುಗಳನ್ನು ಬಿಟ್ಟು ಬೇರೆ ವಸ್ತು ಬಂದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಯಾಕೆ ಈ ನಿಯಮ?
ಜೈಲಿಗೆ ಅಪರಿಚಿತರ ಹೆಸರಿನಲ್ಲಿ ಕೈದಿಗಳಿಗೆ ಪಾರ್ಸೆಲ್ ಬರುತ್ತಿತ್ತು. ಗಾಂಜಾ, ಬೀಡಿ ಮಾದಕವಸ್ತುಗಳನ್ನು ಅಪರಿಚಿತರ ಹೆಸರಿನಲ್ಲಿ ಪಾರ್ಸೆಲ್ ಕಳುಹಿಸಲಾಗುತ್ತಿತ್ತು. ಈಗ ಇದಕ್ಕೆ ಅವಕಾಶವಿಲ್ಲ. ಕೊರಿಯರ್/ ಪಾರ್ಸೆಲ್ ಮೂಲಕ ಬಂದಿಗಳಿಗೆ ನಿಷೇಧಿತ ವಸ್ತುಗಳು ಬರುತ್ತಿರುವುದರ ಬಗ್ಗೆ ಜುಲೈ ೬ರಂದು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕೇಸು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಕೆಲವು ಸಂದರ್ಭದಲ್ಲಿ ಜೈಲಿನಲ್ಲಿರುವ ಕೈದಿಗಳನ್ನು ಸಿಲುಕಿಸಲು ನಿಷೇಧಿತ ವಸ್ತುಗಳನ್ನು ಕಳುಹಿಸುವ ಘಟನೆಗಳೂ ನಡೆದಿದ್ದವು. ಈ ಮಾಹಿತಿಯನ್ನು ಸ್ವತಃ ಕೈದಿಗಳೇ ನೀಡಿದ್ದರು. ಸಿಬ್ಬಂದಿಗೂ ಇದು ಗಮನಕ್ಕೆ ಬಂದಿತ್ತು. ಈ ರೀತಿ ನಿಷೇಧಿತ ವಸ್ತುಗಳು ಬಂದಿವೆ ಎನ್ನುವುದನ್ನೇ ದಾಳವಾಗಿಟ್ಟುಕೊಂಡು ಕೆಲವು ಕೈದಿಗಳ ಮೇಲೆ ಕ್ರಮ ಕೈಗೊಳ್ಳುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಹೀಗಾಗಿ ಇದನ್ನು ತಡೆಯುವ ಉದ್ದೇಶದಿಂದಲೇ ನೂತನ ಸೂಪರಿಂಟೆಂಡೆಂಟ್ ರಮೇಶ್ ಹೊಸ ಮಾರ್ಗಸೂಚಿ ಜಾರಿಗೆ ತಂದಿದ್ದಾರೆ ಎಂದು ಹೇಳಲಾಗಿದೆ.
ಮನೆಯವರ ಭೇಟಿಗೆ ಅವಕಾಶವಿದೆ
ಕೈದಿಗಳ ಮನೆಯವರು ನೇರವಾಗಿ ಬಂದು ಭೇಟಿಯಾಗುವ ಅವಕಾಶವನ್ನು ನಿಯಮಬದ್ಧವಾಗಿ ನೀಡಲಾಗಿದೆ. ಅದನ್ನು ಹೊರತುಪಡಿಸಿ ಪಾರ್ಸೆಲ್ ಕಳುಹಿಸಲು ಅವಕಾಶವಿಲ್ಲ. ಈ ವಿಷಯವನ್ನು ಮನೆಯವರಿಗೂ ಮನದಟ್ಟು ಮಾಡುವಂತೆ ವಕೀಲರಿಗೂ ತಿಳಿಸಲಾಗಿದೆ.
ಇದನ್ನೂ ಓದಿ| ಕೈದಿ ನೋಡಲು ₹1,600 ಲಂಚ: ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಗೆ ಗೃಹಸಚಿವರ ತರಾಟೆ