ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿಂದು ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ ಸಂಬಂಧ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿ ಕುಮಟಾದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಚಾಲನೆ ಸಿಕ್ಕಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ಇದೊಂದು ರಾಜಕೀಯ ಪಿತೂರಿಗಾಗಿ ನಡೆಯುತ್ತಿರುವ ಸಂಚು ಎಂದು ಆರೋಪ ಮಾಡಿದೆ.
ಕುಮಟಾದ ಮಣಕಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಬಿಜೆಪಿ ಯಾವ ರೀತಿಯಾಗಿ ರಾಜಕೀಯವಾಗಿ ಬಳಸಿಕೊಂಡಿದೆ ಎಂಬುದನ್ನು ಜಿಲ್ಲೆಯ ಜನತೆಗೆ ತಿಳಿಸಲು ಕಾಂಗ್ರೆಸ್ ಮುಂದಾಗಿದೆ. ಈಗಾಗಲೇ ಸಾವಿರಾರು ಜನರು ಸಮಾರಂಭದಲ್ಲಿ ಸೇರಿದ್ದಾರೆ.
ಸಿದ್ದರಾಮಯ್ಯ ಪ್ರವಾಸ ರದ್ದು
ಪರೇಶ್ ಮೇಸ್ತಾ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾಗಿದ್ದ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಸಮಾವೇಶಕ್ಕೆ ಬರಲಾಗುತ್ತಿಲ್ಲ. ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಕುಮಟಾ ಪ್ರವಾಸ ರದ್ದಾಗಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ವಿನಯಕುಮಾರ ಸೊರಕೆ, ಯು.ಟಿ.ಖಾದರ್, ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಸೇರಿದಂತೆ ಹಿರಿಯ ಮುಖಂಡರು ಭಾಗಿಯಾಗಿದ್ದಾರೆ.
ಇದನ್ನೂ ಓದಿ | Border dispute | ಅತ್ತ ಸುಪ್ರೀಂ ಕೋರ್ಟ್‌ನಲ್ಲಿ ದಾವೆ, ಇತ್ತ ಮಾತುಕತೆಯ ವರಸೆ; ಮುಗಿಯದ ʼಮಹಾʼ ಗೋಳು
ಕಾರ್ಯಕರ್ತರಿಗಾಗಿ 20 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭದ್ರಿನಾಥ್ ನೇತೃತ್ವದಲ್ಲಿ 3 ಡಿವೈಎಸ್ಪಿ, 6 ಸಿಪಿಐ, 25 ಪಿಎಸ್ಐ ಸೇರಿ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಕಾಂಗ್ರೆಸ್ ಆರೋಪ ಏನು?
ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಅಧಿಕಾರವನ್ನು ಅನುಭವಿಸುತ್ತಿದೆ. ಅದು ಆಕಸ್ಮಿಕ ಸಾವಾಗಿದ್ದರೂ ಕೊಲೆ ಎಂದು ಬಿಂಬಿಸಿದೆ. ಅಲ್ಲದೆ, ಕೋವು ಗಲಭೆಗೆ ಕಾರಣವಾಗಿದೆ. ಜತೆಗೆ ಅನೇಕ ಯುವಕರ ಕುಟುಂಬವು ಬೀದಿಗೆ ಬರಲು ಕಾರಣವಾಗಿದೆ ಎಂದು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.
ಪರೇಶ ಮೇಸ್ತಾ ಸಾವಿನ ನಂತರ ಜಿಲ್ಲೆಯಾದ್ಯಂತ 67 ವಿವಿಧ ಸೆಕ್ಷನ್‌ಗಳಲ್ಲಿ 2988 ಜನರ ವಿರುದ್ಧ ಪ್ರಕರಣ ದಾಖಲಾಗಿ, 361 ಜನರನ್ನು ಪೊಲೀಸರು ಬಂಧಿಸಿದ್ದರು. 272 ಜನರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲಾಗಿತ್ತು. 1699 ಜನರ ವಿರುದ್ಧ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದರಿಂದ ಅನೇಕ ಯುವಕರ ಕುಟುಂಬಗಳು ಬೀದಿ ಪಾಲಾಗಿದ್ದವು ಎಂಬ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದು, ಪಕ್ಷದ ಕಾರ್ಯಕರ್ತರು ಈ ವಿಷಯವನ್ನು ಜಿಲ್ಲೆಯ ಪ್ರತಿ ಮನೆಗೂ ತಲುಪಿಸಬೇಕೆಂದು ಕರೆ ಕೊಟ್ಟರು.
ಇದನ್ನೂ ಓದಿ | Rain In Karnataka | ಜಿಟಿಜಿಟಿ ಮಳೆಗೆ, ಮೈ ಕೊರೆಯುವ ಚಳಿ ಸಾಥ್; ರಾಜ್ಯದ ಹಲವೆಡೆ ತತ್ತರಿಸಿದ ಜನ
ಏನಿದು ಪ್ರಕರಣ?
2017ರ ಡಿಸೆಂಬರ್ 6ರಂದು ನಾಪತ್ತೆಯಾಗಿದ್ದ ಯುವಕ ಪರೇಶ್ ಮೇಸ್ತಾ, ಡಿಸೆಂಬರ್ 8ರಂದು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆದರೆ, ಆತನ ಮೃತ ದೇಹವು ಗಾಯಗೊಂಡ ಸ್ಥಿತಿಯಲ್ಲಿದ್ದರಿಂದ ಇದನ್ನು ಕೊಲೆ ಎಂದು ಭಾವಿಸಲಾಗಿತ್ತು. ಅನ್ಯ ಕೋಮಿನ ಯುವಕರು ಕೊಲೆ ಮಾಡಿ ಹಾಕಿದ್ದಾರೆಂದು ಶಂಕೆ ವ್ಯಕ್ತವಾಗಿ ಸಾಕಷ್ಟು ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. 4 ವರ್ಷಗಳ ಸುದೀರ್ಘ ತನಿಖೆ ನಡೆಸಿದ್ದ ಸಿಬಿಐ, ೨೦೨೨ರ ಅಕ್ಟೋಬರ್ 6ರಂದು ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಈಗ ಇದರ ವಿರುದ್ಧ ಪರೇಶ್ ಮೇಸ್ತಾ ಕುಟುಂಬ ಆಕ್ಷೇಪಣೆಯನ್ನು ಸಲ್ಲಿಕೆ ಮಾಡಿದೆ. ಬಿಜೆಪಿ ಸಹ ಸಿಬಿಐ ಮರು ತನಿಖೆಗೆ ಆದೇಶವನ್ನು ನೀಡಿತ್ತು. ಇನ್ನು ಕೆಲವೇ ತಿಂಗಳಿನಲ್ಲಿ ಚುನಾವಣೆ ಎದುರಾಗಿರುವುದರಿಂದ ಪುನಃ ಈ ವಿಷಯವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂಬುದು ಕಾಂಗ್ರೆಸ್ ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಬೃಹತ್ ಜನಜಾಗೃತಿ ಸಮಾವೇಶವನ್ನು ಕುಮಟಾದಲ್ಲಿ ಕಾಂಗ್ರೆಸ್ ಆಯೋಜನೆ ಮಾಡಿದೆ.
ಸಿಬಿಐ ವರದಿಯಲ್ಲಿ ಏನಿತ್ತು?
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಯುವಕ ಪರೇಶ್ ಮೇಸ್ತಾ ಸಾಯುವುದಕ್ಕಿಂತ ಕೆಲವೇ ಗಂಟೆಗಳ ಮೊದಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ. ಆ ಬಳಿಕ ನಡೆದ ಗಲಾಟೆ ಸಂದರ್ಭದಲ್ಲಿ ಆತ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿತ್ತು. ಅಲ್ಲದೆ, ಸಾಯುವ ೨ ದಿನ ಮೊದಲು ಆತ ತನ್ನ ಮುಂಗೈ ಮೇಲೆ ಶಿವಾಜಿ ಟ್ಯಾಟೂವನ್ನು ಹಾಕಿಸಿಕೊಂಡಿದ್ದ ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ. ಅಲ್ಲದೆ, ಪರೇಶ್ ಮೇಸ್ತಾ ಯಾವುದೇ ಯುವತಿಯನ್ನು ಪ್ರೀತಿಸುತ್ತಿರಲಿಲ್ಲ ಎಂಬುದನ್ನೂ ಸಹ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹಾಜರು
2017ರ ಡಿಸೆಂಬರ್ 6ರಂದು ಕುಮಟಾದಲ್ಲಿ ಕಾಂಗ್ರೆಸ್ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಇದರಲ್ಲಿ ಪರೇಶ್ ಮೇಸ್ತಾ ಭಾಗಿಯಾಗಿದ್ದ. ಮಧ್ಯಾಹ್ನ ೧೨.೩೦ರ ಸುಮಾರಿಗೆ ನಡೆದಿದ್ದ ಈ ಕಾರ್ಯಕ್ರಮವನ್ನು ಮುಗಿಸಿದ್ದ ಪರೇಶ್ ಮೇಸ್ತ ಪುನಃ ಸಂಜೆ ೫.೪೫ಕ್ಕೆ ತನ್ನ ಮನೆಗೆ ವಾಪಸ್ ಆಗಿದ್ದ. ಹೊನ್ನಾವರದಿಂದ ಕುಮಟಾ ಸುಮಾರು ೨೫ ಕಿ.ಮೀ.ನಷ್ಟು ದೂರವಿದೆ. ಅಲ್ಲಿವರೆಗೆ ತೆರಳಿ ವಾಪಸ್ ಆಗಿದ್ದರ ಬಗ್ಗೆ ಸಿಬಿಐ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.
ಇದನ್ನೂ ಓದಿ | BJP Social Media | ಜಾಲತಾಣ ಕಾರ್ಯಕ್ಕೆ ಹೊಸ ಜೀವ ನೀಡಲು ಮುಂದಾದ ಬಿಜೆಪಿ: ರಾಜ್ಯ ಸಂಚಾಲಕರ ಬದಲಾವಣೆ
ಅಲ್ಲಿಂದ ಸುಮಾರು ೬.೪೫ರಿಂದ ೭ ಗಂಟೆ ಹೊತ್ತಿಗೆ ತಾನು ಶನೇಶ್ವರ ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೇಳಿ ಹೊನ್ನಾವರದ ತುಳಸಿ ನಗರಕ್ಕೆ ಹೋಗಿದ್ದ. ತನ್ನ ಸ್ನೇಹಿತ ಅತುಲ್ ಮೇಸ್ತಾನನ್ನೂ ಜತೆಯಲ್ಲಿ ಕರೆದೊಯ್ದಿದ್ದ. ಅಲ್ಲಿ ತಾನು ಅಯ್ಯಪ್ಪ ಮಾಲೆ ಧರಿಸಲು ಶಬರಿ ಮಲೆಗೆ ಹೋಗುತ್ತಿದ್ದೇನೆ. ಅಪ್ಪ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಸ್ನೇಹಿತನ ಬಳಿ ಹೇಳಿದ್ದಲ್ಲದೆ, ಹಾಡು ಕೇಳಲು ಸ್ನೇಹಿತನ ಮೊಬೈಲ್ ಅನ್ನು ಪಡೆದುಕೊಂಡಿದ್ದ. ಅಲ್ಲಿಂದ ಇನ್ನೊಬ್ಬ ಸ್ನೇಹಿತ ದೀಪಕ್ ಮೆಹ್ತಾ ಮನೆಗೆ ತೆರಳಿ ಆತನ ಸ್ಕೂಟರ್ ಪಡೆದು ಸುಮಾರು ೮.೧೫ರ ಸುಮಾರಿಗೆ ವೈನ್ ಶಾಪ್‌ಗೆ ತೆರಳಿ ಬಿಯರ್ ಖರೀದಿಸಿದ್ದ. ಆದರೆ, ಅಲ್ಲಿ ಸ್ಕೂಟರ್ ಸ್ಟಾರ್ಟ್ ಆಗಿರಲಿಲ್ಲ. ಕಳೆದ ೧೫ ದಿನಗಳ ಹಿಂದೆ ಬೈಕ್‌ನಿಂದ ಬಿದ್ದು ಕಾಲಿಗೆ ಪೆಟ್ಟಾಗಿದ್ದರಿಂದ ಕಿಕ್ ಮಾಡಲು ಪರೇಶ್ ಮೇಸ್ತಾಗೆ ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈನ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಇನ್ನೊಬ್ಬ ಸ್ನೇಹಿತ ಶರತ್ ಮೇಸ್ತಾನನ್ನು ಕರೆದು ಸ್ಟಾರ್ಟ್ ಮಾಡಿಕೊಡಲು ಕೋರಿದ್ದ. ಆತ ಸ್ಟಾರ್ಟ್ ಮಾಡಿಕೊಟ್ಟಿದ್ದಲ್ಲದೆ, ಬ್ಯಾಟರಿ ಸಮಸ್ಯೆ ಇದೆ ಎಂದೂ ತಿಳಿಸಿದ್ದ. ಅದಾಗಲೇ ಅಲ್ಲಿನ ಗುಡ್‌ಲಕ್ ಸರ್ಕಲ್ ಬಳಿ ಕೋಮು ಗಲಭೆ ಆಗುತ್ತಿದ್ದ ಬಗ್ಗೆ ಪರೇಶ್ ಮೇಸ್ತಾನಿಗೆ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಬೈಕ್ ಹತ್ತಿದ ಪರೇಶ್ ಅಲ್ಲಿಂದ ಸೀದಾ ಸೇಂಟ್ ಥಾಮಸ್ ಶಾಲೆಯ ಮೈದಾನಕ್ಕೆ ತೆರಳಿ ಅಲ್ಲಿದ್ದ ಸ್ನೇಹಿತ ಅಶೋಕ್ ಮೇಸ್ತಾನಿಗೆ ಸ್ಕೂಟರ್ ಕೀ ಕೊಟ್ಟು, “ಗುಡ್‌ಲಕ್ ಸರ್ಕಲ್‌ನಲ್ಲಿ ಹಿಂದು-ಮುಸ್ಲಿಂ ಸಮುದಾಯದ ಕೋಮುಗಲಭೆ ಆಗುತ್ತಿದೆ” ಎಂಬ ವಿಷಯವನ್ನು ತಿಳಿಸಿ ತೆರಳಿದ್ದ. ಅದಾದ ಬಳಿಕ ಆತ ಎಲ್ಲೂ ಕಾಣಿಸಿಕೊಂಡಿರಲಿಲ್ಲ ಎಂಬ ಅಂಶವನ್ನೂ ಸಿಬಿಐ ಉಲ್ಲೇಖಿಸಿತ್ತು.
ಆದರೆ, ಡಿಸೆಂಬರ್ ೭ರಂದು ತನ್ನ ಮಗ ಕಾಣೆಯಾಗಿದ್ದಾನೆ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣ ತನಿಖೆ ಕೈಗೊಂಡ ಪೊಲೀಸರಿಗೆ ಡಿ.೮ರಂದು ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾನ ಶವ ಪತ್ತೆಯಾಗಿತ್ತು.
ಅಯ್ಯಪ್ಪ ಮಾಲೆ ಧರಿಸುವುದಾಗಿ ಹೇಳಿದ್ದ
ಈ ಮಧ್ಯೆ ಸ್ನೇಹಿತರ ಒಡನಾಟವನ್ನು ಹೆಚ್ಚಿಸಿಕೊಂಡಿದ್ದ ಪರೇಶ್ ಮೇಸ್ತಾ ಅಯ್ಯಪ್ಪ ದೇವರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸುವುದಾಗಿ ಮನೆಯಲ್ಲಿ ಹೇಳಿದ್ದಲ್ಲದೆ, ಮಾಲೆ ಧಾರಣೆಗೆ ಶಬರಿಮಲೆಗೆ ಹೋಗಿಬುರುವುದಾಗಿ ತಂದೆ ಬಳಿ ಒಪ್ಪಿಗೆಯನ್ನೂ ಪಡೆದುಕೊಂಡಿದ್ದ ಎಂಬ ಅಂಶವು ತನಿಖೆ ವೇಳೆ ತಿಳಿದು ಬಂದಿದ್ದಾಗಿ ಸಿಬಿಐ ತನ್ನ ವಿಸ್ತೃತ ವರದಿಯಲ್ಲಿ ಉಲ್ಲೇಖ ಮಾಡಿತ್ತು.
ಇದನ್ನೂ ಓದಿ | ಒಂದೆಡೆ ʼಚಿಲುಮೆʼ ದೂರು, ಮತ್ತೊಂದು ಕಡೆ ಆಯೋಗವನ್ನೇ ದೂರು: ಚುನಾವಣಾ ಆಯೋಗ ಕುರಿತು ಗುಂಡೂರಾವ್ ಆಕ್ಷೇಪ
ಮೀನು ವ್ಯಾಪಾರ ಮಾಡಿಕೊಂಡಿದ್ದ
೯ನೇ ತರಗತಿ ನಪಾಸಾಗಿದ್ದ ಪರೇಶ್ ಮೇಸ್ತಾ ಶಾಲೆ ಬಿಟ್ಟಿದ್ದ. ಬಳಿಕ ಬೆಂಗಳೂರಿಗೆ ತೆರಳಿ ಸ್ನೇಹಿತ ಆಕಾಶ್ ಮೇಸ್ತಾನಿಗೆ ಬೇಕರಿಯೊಂದರಲ್ಲಿ ಸಹಾಯಕನಾಗಿ ೭-೮ ತಿಂಗಳು ಕೆಲಸ ಮಾಡಿದ್ದ. ಆದರೆ, ಸಂಬಳ ತೀರಾ ಕಡಿಮೆ ಎಂದು ಹೇಳಿ ಅಲ್ಲಿಂದ ವಾಪಸ್ ಹೊನ್ನಾವರಕ್ಕೆ ತೆರಳಿದ್ದ. ಹೊನ್ನಾವರದಲ್ಲಿ ಕಾಸರಗೋಡಿನ ಬೋಟ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಮೀನಿನ ವ್ಯಾಪಾರದ ಲೆಕ್ಕಾಚಾರ ಮಾಡಿಕೊಂಡಿದ್ದ. ಹಲವು ವರ್ಷಗಳ ನಂತರ ತಾನೇ ಮೀನು ವ್ಯಾಪಾರವನ್ನೂ ಶುರು ಮಾಡಿದ್ದ. ಹೀಗಾಗಿ ತಾನೇ ದುಡಿಮೆಗಿಳಿದ ಬಳಿಕ ಕೆಲವು ಸಮಯ ಮನೆಗೆ ಬರುತ್ತಿರಲಿಲ್ಲ. ಅಲ್ಲದೆ, ಆಗಾಗ ಮದ್ಯ ಸೇವಿಸಿಯೂ ಬರುತ್ತಿದ್ದ. ಹೆಚ್ಚಾಗಿ ಸ್ನೇಹಿತರ ಸಂಗಡ ಇರುತ್ತಿದ್ದ ಎಂದು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಎಲ್ಲ ವಿಚಾರಗಳನ್ನು ಪರೇಶ್ ಮೇಸ್ತಾನ ಸ್ನೇಹಿತರು, ಒಡನಾಡಿಗಳು ಸೇರಿದಂತೆ ಇನ್ನಿತರ ಸಂಗತಿಗಳನ್ನೊಳಗೊಂಡು ವಿಚಾರಣೆ ನಡೆಸಿದ್ದ ಸಿಬಿಐ ತಂಡವು ಮಾಹಿತಿಯನ್ನು ಕಲೆಹಾಕಿತ್ತು. ಈ ಎಲ್ಲ ಅಂಶವನ್ನೂ ಉಲ್ಲೇಖಿಸಿ ಪರೇಶ್ ಮೇಸ್ತಾನ ಸಾವು ಕೊಲೆಯಲ್ಲಿ, ಆಕಸ್ಮಿಕ ಎಂದು ವರದಿ ಮಾಡಿತ್ತು.
ಸಿಬಿಐ ಮರು ತನಿಖೆಗೆ ಸ್ಪೀಕರ್ ಕಾಗೇರಿ ಒತ್ತಾಯ
ಪರೇಶ್ ಮೇಸ್ತಾ ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿದ್ದ ಬೆನ್ನಲ್ಲೇ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಪ್ರಕರಣ ಬೇರೆಯೇ ಇದ್ದು, ಸಿಬಿಐ ಮರು ತನಿಖೆ ನಡೆಸಬೇಕು. ಈ ಬಗ್ಗೆ ತಾವು ಈಗಾಗಲೇ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಅನೇಕ ಬಿಜೆಪಿ ಮುಖಂಡರು ಸಿಬಿಐ ವರದಿಯನ್ನು ಅಲ್ಲಗಳೆದಿದ್ದರು. ಆದರೆ, ಕಾಂಗ್ರೆಸ್ ಈ ವರದಿಯನ್ನು ಸ್ವಾಗತ ಮಾಡಿತ್ತು. ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ ಎಂಬ ಆರೋಪವನ್ನೂ ಮಾಡಿತ್ತು.
ಇದನ್ನೂ ಓದಿ | Demand for hospital | ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಡಿಕೆಗೆ ಮರುಜೀವ, ತಮಟೆ ಬಾರಿಸಿ ಪ್ರತಿಭಟನೆ