ಬೆಂಗಳೂರು: ಮುಂದಿನ 2024ರ ಲೋಕಸಭಾ ಚುನಾವಣೆಗೆ (Parliament Election 2024) ರಾಜ್ಯದಲ್ಲಿ ಬಿಜೆಪಿಯನ್ನು ಸಜ್ಜುಗೊಳಿಸುವ ಕೆಲಸವನ್ನು ಆರಂಭಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP National General Secretary) ಹಾಗೂ ರಾಜ್ಯದ ಲೋಕಸಭಾ ಚುನಾವಣೆಯ ಉಸ್ತುವಾರಿಯಾಗಿರುವ ವಿನೋದ್ ತಾವ್ಡೆ (Vinod Thawde) ಅವರು ಶನಿವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳ ನಾಯಕರ ಜತೆಗೆ ಚುನಾವಣಾ ಸಿದ್ಧತೆಗಳ (Preparation for Election) ಬಗ್ಗೆ ಚರ್ಚೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಅವರು, ʻʻಲೋಕಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರದ ನಾಯಕರು ರಾಜ್ಯದ ನಾಯಕರು ಪಂಚಾಯತ್ ಮಟ್ಟದಿಂದ ಪಕ್ಷ ಕಟ್ಟುತ್ತಿದ್ದೇವೆ. ಮೂರು ಕ್ಷೇತ್ರದ ಬಿಜೆಪಿ ಮುಖಂಡರಿಗೆ ಈಗಾಗಲೇ ಸಿದ್ಧತೆ ಬಗ್ಗೆ ಸಲಹೆ ಸೂಚನೆಯನ್ನು ನೀಡಲಾಗಿದೆʼʼ ಎಂದು ಹೇಳಿದರು. ಈ ವೇಳೆ ಮಣಿಪುರ ಗಲಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
ಗ್ಯಾರಂಟಿ ಠುಸ್ ಮಾಡಿ – ಮೋದಿ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿ
ಗ್ಯಾರಂಟಿ ಠುಸ್ ಮಾಡಿ – ಮೋದಿ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿ: ಇದು ವಿನೋದ್ ತಾವ್ಡೆ ಅವರು ಪಕ್ಷದ ನಾಯಕರಿಗೆ ನೀಡಿದ ಮೊದಲ ಸ್ಪಷ್ಟ ಸಂದೇಶ ಎಂದು ತಿಳಿದುಬಂದಿದೆ. ಮೋದಿ ಅವರು ತುಂಬ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಕೇವಲ ಕೆಲಸ ಸಾಲದು, ಮೋದಿ ಯಶಸ್ವಿ ಆಡಳಿತದ ಬಗ್ಗೆ ಜನರಿಗೆ ತಿಳಿಸುವುದೂ ಮುಖ್ಯ. ಕರ್ನಾಟಕದ ಕಾಂಗ್ರೆಸ್ ಸರ್ಕಾದ ಗ್ಯಾರಂಟಿ ಯೋಜನೆಗಳಿಗೆ ಜನರಿಗೆ ಖುಷಿ ತಂದಿಲ್ಲ, ಮೋದಿ ಕೆಲಸಗಳು ಜನರಿಗೆ ಖುಷಿ ತಂದಿವೆ. ಹೀಗಾಗಿ ಗ್ಯಾರಂಟಿಗಳನ್ನು ಠುಸ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇತರ 10 ಪ್ರಮುಖ ಸಲಹೆಗಳು ಇಂತಿವೆ
- ರೈತರಿಗೆ ಸಬ್ಸಿಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, 371- ಜೆ ಅನುಷ್ಠಾನ, ಜಮ್ಮು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು, ಚೀನಾಗೆ ಸಡ್ಡು ಹೊಡೆದ ವಿಚಾರಗಳನ್ನು ಜನರ ಗಮನಕ್ಕೆ ತನ್ನಿ.
- ಗೆಲುವು – ಸೋಲು ಸಹಜ. ಕರ್ನಾಟಕ ವಿಧಾನಸಭಾ ಸೋಲಿನಿಂದ ಧೃತಿಗೆಡಬೇಡಿ, ಟು – ಥರ್ಡ್ ಮೆಜಾರಿಟಿ ಬರುವ ರೀತಿ ನೋಡಿಕೊಳ್ಳಿ.
- ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ನಿರೀಕ್ಷೆ ಇತ್ತು. ಆದರೆ ಪಕ್ಷ ಸೋತಿದೆ, ಹಾಗಂತ ಧೃತಿಗೆಡಬೇಡಿ. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು.
- ಈಗಿನಿಂದಲೇ ಜನರಿಗೆ ಹತ್ತಿರವಾಗುವ ಕೆಲಸ ಮಾಡಿ. ಜನಪರವಾಗಿ ನಿಲ್ಲಿ. ಹೀಗೆ ಮಾಡಿದರೆ ಚುನಾವಣೆ ಗೆಲ್ಲುವುದು ಸುಲಭ.
- ಈಗಿನ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಗ್ಯಾರಂಟಿಗಳ ಮೋಸದ ಬಗ್ಗೆ ಜನರಿಗೆ ತಿಳಿಸಿ ಹೇಳಿ. ಅಂತಿಮವಾಗಿ ಬಿಜೆಪಿ ಪಕ್ಷದ ಪರವಾಗಿ ಜನರ ಒಲವು ಮೂಡುವಂತೆ ಮಾಡಿ.
- 5-6 ತಿಂಗಳು ಅನ್ನುವ ಬದಲು 2024ರ ಚುನಾವಣೆಗೆ ಈಗದಿಂದಲೇ ಕೆಲಸ ಶುರು ಮಾಡಿ.
- ಪಕ್ಷದಲ್ಲಿರುವ ಕೆಲವು ಅಸಮಾಧಾನಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪಕ್ಷದಲ್ಲಿ ಅವರಿಗೆ ಏನೂ ಸಿಕ್ಕಿಲ್ಲ ಎಂದು ಬೇಸರಗೊಂಡು ತಟಸ್ಥರಾಗಿರುತ್ತಾರೆ. ಇಂಥ ತಟಸ್ಥ ನಿಲುವಿನಿಂದ ಪಕ್ಷಕ್ಕೆ ಹಿನ್ನಡೆ ಆಗಬಹುದು. ಹೀಗಾಗಿ ಇವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕೆಲಸ ಮಾಡಿ.
- ಸಮುದಾಯವಾರು ಮತಗಳ ಕ್ರೋಡೀಕರಣಕ್ಕೆ ಪ್ಲಾನ್ ಮಾಡಿ.
- ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಮಾಡಿ. ಪಕ್ಷ ಬಲವರ್ಧನೆಗೆ ಸೋಷಿಯಲ್ ಮೀಡಿಯಾ ಪ್ರಮುಖವಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ವಿಪಕ್ಷ ಗಳಿಗೆ ತಕ್ಕ ಪ್ರತ್ಯುತ್ತರ ಕೊಡುವಲ್ಲಿ ಪಕ್ಷ ಎಡವಿದೆ. ಹೀಗಾಗಿ ವಿಪಕ್ಷಗಳ ಆರೋಪಕ್ಕೆ ತಕ್ಷಣವೇ ಪ್ರತ್ಯುತ್ತರ ನೀಡುವ ಕೆಲಸ ಮಾಡಿ.
- ವಿಧಾನಸಭಾವಾರು ಟೀಮ್ ಮೂಲಕ ಪ್ರವಾಸ ಮಾಡಿ.
ಇದನ್ನೂ ಓದಿ: BJP Office Bearers: ಬಿಜೆಪಿ ಪದಾಧಿಕಾರಿಗಳ ಪಟ್ಟಿ; ದಕ್ಷಿಣ ಭಾರತ, ಮುಸ್ಲಿಮರಿಗೆ ಆದ್ಯತೆ; ಕರ್ನಾಟಕಕ್ಕಿಲ್ಲ ಮಣೆ