Site icon Vistara News

Parliament Election 2024 : ಲೋಕಸಮರ ಗೆಲ್ಲಲು ರಣತಂತ್ರ; ಬೆಂಗಳೂರಲ್ಲಿ UPA, ದಿಲ್ಲಿಯಲ್ಲಿ NDA!

Narenda Modi Sonia gandhi

ಬೆಂಗಳೂರು: 2024ರ ಲೋಕಸಭಾ ಚುನಾವಣೆಯ (Parliament Election 2024) ಮೈತ್ರಿ ಮತ್ತಿತರ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಎರಡೂ ಕೂಟಗಳ (political parties meet) ಅತ್ಯಂತ ಮಹತ್ವದ ಸಭೆ ನಡೆಯಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (National Democratic alliance) ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುಪಿಎ ಮೈತ್ರಿ ಕೂಟಗಳ ಸಭೆ (Opposition meet) ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಯುಪಿಎ ಮಿತ್ರಕೂಟಗಳ ಸಭೆ ಸೋಮವಾರವೇ ಅನೌಚಪಚಾರಿಕವಾಗಿ ಆರಂಭಗೊಂಡಿದ್ದು, ಮಂಗಳವಾರ ಅಧಿಕೃತವಾಗಿ ಚರ್ಚೆ ನಡೆಸಲಾಗುತ್ತದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ತನ್ನ ಗೆಳೆಯರನ್ನು ಸೇರಿಸಿಕೊಂಡು ಒಬ್ಬರನ್ನೊಬ್ಬರು ಸೋಲಿಸಲು ರಣತಂತ್ರ ಹೆಣೆಯಲು ಪ್ಲ್ಯಾನ್‌ ಮಾಡಲಾಗುತ್ತಿದೆ. ನಿಜವೆಂದರೆ, ಯುಪಿಎ ಮಿತ್ರ ಕೂಟ ನಡೆಸುತ್ತಿರುವ ಎರಡನೇ ಸಭೆ ಇದಾಗಿದೆ. ಯುಪಿಎ ಮೈತ್ರಿ ಪಕ್ಷಗಳು ಒಂದಾಗುತ್ತಿರುವುದನ್ನು ತಿಳಿದು ಬಿಜೆಪಿ ಕೂಡಾ ತನ್ನ ಮಿತ್ರರನ್ನು ತೆಕ್ಕೆಯಲ್ಲಿಟ್ಟುಕೊಳ್ಳಲು ಈ ಸಭೆಯನ್ನು ಆಯೋಜಿಸಿದೆ.

ದಿಲ್ಲಿಯಲ್ಲಿ ನಡೆಯುವ ಬಿಜೆಪಿ ಮಿತ್ರಕೂಟದ ಸಭೆಯಲ್ಲಿ 30ಕ್ಕೂ ಹೆಚ್ಚು ಪಕ್ಷಗಳ ನಾಯಕರು ಪಾಲ್ಗೊಂಡಿದ್ದಾರೆ. ನಿಜವೆಂದರೆ, ಬಿಜೆಪಿ ಮಿತ್ರಕೂಟದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ. ಎನ್‌ಡಿಎ ಲೋಕಸಭೆಯಲ್ಲಿ 331 ಸ್ಥಾನಗಳನ್ನು ಹೊಂದಿದೆ. ಅದರ ಪೈಕಿ 301 ಬಿಜೆಪಿಯದ್ದೆ. ಉಳಿದ 30 ಮಾತ್ರ ಉಳಿದ ಪಕ್ಷಗಳ ಕೊಡುಗೆ. ಈ ಬಾರಿ ಯುಪಿಎ ಪ್ರಬಲ ಸ್ಪರ್ಧೆಯನ್ನು ನೀಡಬಹುದು ಎಂಬ ಸಂಶಯದ ನೆಲೆಯಲ್ಲಿ ಬಿಜೆಪಿ ಬಲುಬೇಗನೆ ಈ ರೀತಿಯ ಸಭೆಗಳನ್ನು ನಡೆಸಲು ಮುಂದಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಮಿತ್ರ ಕೂಟದ ಸಭೆಗೆ ಸೆಡ್ಡು ಹೊಡೆಯುತ್ತಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿಯೇತರ ಮಿತ್ರಕೂಟಗಳ ಸಭೆಯಲ್ಲಿ 26 ಪಕ್ಷಗಳು ಜತೆಗೂಡಿವೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷ, ಜೆಡಿಯು, ಡಿಎಂಕೆ, ಸಿಪಿಎಂಎಂ, ಸಿಪಿಐ ಸೇರಿದಂತೆ ಪ್ರಮುಖ ಪಕ್ಷಗಳು ಭಾಗವಹಿಸುತ್ತಿವೆ. ಸೋನಿಯಾ ಗಾಂಧಿ, ಲಾಲೂ ಪ್ರಸಾದ್‌ ಯಾದವ್‌, ಅಖಿಲೇಶ್‌ ಯಾದವ್‌, ನಿತೀಶ್‌ ಕುಮಾರ್‌, ಫಾರೂಕ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಘಟಾನುಘಟಿ ರಾಜಕಾರಣಿಗಳು ಬೆಂಗಳೂರಿನಲ್ಲಿದ್ದಾರೆ.

ಅಡಕತ್ತರಿಯಲ್ಲಿರುವ ನಾಯಕರು

ಈ ನಡುವೆ, ಎರಡು ಪಕ್ಷಗಳು ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿವೆ. ಮಹಾರಾಷ್ಟ್ರದಲ್ಲಿ ಈ ಹಿಂದೆ ಕಾಂಗ್ರೆಸ್‌ ಜತೆ ಮೈತ್ರಿಯಲ್ಲಿದ್ದ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಎನ್‌ಡಿಎ ಸೇರಬೇಕು, ಯುಪಿಎ ಜತೆ ಹೋಗಬೇಕೋ ಎನ್ನುವ ಗೊಂದಲದಲ್ಲಿದೆ. ಅಜಿತ್‌ ಪವಾರ್‌ ಅವರು ಶರದ್‌ ಪವಾರ್‌ ಅವರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅಚ್ಚರಿಯ ಅಂಶವೆಂದರೆ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿಪಕ್ಷಗಳ ಮೈತ್ರಿಕೂಟವನ್ನು ರೂಪಿಸಲು ಪ್ರಯತ್ನಪಟ್ಟವರಲ್ಲಿ ಶರದ್‌ ಪವಾರ್‌ ಅವರೇ ಮುಂಚೂಣಿಯಲ್ಲಿದ್ದರು!

ಇತ್ತ ಕರ್ನಾಟಕದಲ್ಲಿ ಜೆಡಿಎಸ್‌ಗೂ ಅದೇ ಗೊಂದಲ ಕಾಡುತ್ತಿದೆ. ಜೆಡಿಎಸ್‌ ನಾಯಕ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಪುತ್ರ ಕುಮಾರಸ್ವಾಮಿ ಮೋದಿ ಕರೆದರೆ ಎನ್‌ಡಿಎಗೆ ಹೋಗುವ ಯೋಚನೆಯಲ್ಲಿದ್ದಾರೆ. ಆದರೆ, ಮೋದಿ ಇನ್ನೂ ಆಹ್ವಾನ ನೀಡಿಲ್ಲ. ಈ ನಾಯಕರ ಬಿಜೆಪಿ ಪ್ರೀತಿ ನೋಡಿದ ಯುಪಿಎ ನಾಯಕರು ಕೂಡಾ ಇವರನ್ನು ಆಹ್ವಾನಿಸಿಲ್ಲ.

Exit mobile version