ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಕಾಂಗ್ರೆಸ್ ಪಡೆದ ಅಪೂರ್ವ ಗೆಲುವಿನಿಂದ ಸಂತುಷ್ಟವಾಗಿರುವ ಕಾಂಗ್ರೆಸ್ ಹೈಕಮಾಂಡ್ ಈಗ ಲೋಕಸಭಾ ಚುನಾವಣೆಯಲ್ಲೂ (Parliament Election) ರಾಜ್ಯವನ್ನೇ ಪ್ರಮುಖ ಟಾರ್ಗೆಟ್ ಆಗಿ ಇಟ್ಟುಕೊಳ್ಳಲು ಮುಂದಾಗಿದೆ. ಇದರ ಜತೆಗೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು ರಾಜ್ಯದಿಂದಲೇ ಕಣಕ್ಕಿಳಿಸಿ ಗೆಲ್ಲಿಸಲು ಪ್ಲ್ಯಾನ್ ನಡೆದಿದೆ ಎಂದು ತಿಳಿದುಬಂದಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ರಾಜ್ಯದಲ್ಲಿ ಪಡೆದ ಈ ದೊಡ್ಡ ಮಟ್ಟದ ಗೆಲುವನ್ನು ರಾಷ್ಟ್ರೀಯ ವಿಚಾರವಾಗಿಸಿದ್ದು ಮಾತ್ರವಲ್ಲದೆ, ರಾಜ್ಯದಲ್ಲಿ ಗೆಲುವಿಗೆ ಅನುಸರಿಸಿದ ಗ್ಯಾರಂಟಿ ಸೂತ್ರಗಳನ್ನೇ ದೇಶದ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಇದರ ನಡುವೆ, ಲೋಕಸಭಾ ಚುನಾವಣೆಯಲ್ಲೂ ಇಂಥಹುದೇ ಹೊಸ ಸೂತ್ರಗಳೊಂದಿಗೆ ಎದ್ದು ಬರಲು ಕಾಂಗ್ರೆಸ್ ಯೋಚನೆ ಮಾಡುತ್ತಿದೆ.
ರಾಜ್ಯದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಕಳುಹಿಸಬೇಕು ಎಂಬ ಕಾಂಗ್ರೆಸ್ ಹೈಕಮಾಂಡ್‌ನ ಮನವಿ ಮತ್ತು ಟಾಸ್ಕ್‌ಗೆ ಇಬ್ಬರೂ ನಾಯಕರು ಸ್ಪಂದಿಸುತ್ತಿದ್ದಾರೆ. ಇದಕ್ಕಾಗಿ ಹೊಸ ಸೂತ್ರದ ರಚನೆಯೂ ಆಗುತ್ತಿದೆ.
ಹಲವು ಸೂತ್ರಗಳ ಒಂದು ಭಾಗವಾಗಿ ಹೈಕಮಾಂಡ್ ನಾಯಕರನ್ನು ಕರ್ನಾಟಕದಿಂದಲೇ ಸ್ಪರ್ಧೆ ಮಾಡಿಸುವ ಬಗ್ಗೆ ಚರ್ಚೆ ನಡೆದಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಇಲ್ಲಿಂದಲೇ ಗೆಲ್ಲಿಸಿ ಕಳುಹಿಸುವ ಚಿಂತನೆ ನಡೆದಿದೆ.
ಕಾಂಗ್ರೆಸ್‌ನ ಉನ್ನತ ನಾಯಕರನ್ನು ರಾಜ್ಯದಿಂದ ಗೆಲ್ಲಿಸಿ ಕಳುಹಿಸಿದ ಉದಾಹರಣೆ ಹಿಂದೆಯೂ ನಡೆದಿತ್ತು. ಚಿಕ್ಕಮಗಳೂರಿಂದ ಇಂದಿರಾ ಗಾಂಧಿ ಮತ್ತು ಬಳ್ಳಾರಿಯಿಂದ ಸೋನಿಯಾ ಗಾಂಧಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಇದೇ ಮಾದರಿಯಲ್ಲಿ ಈ ಬಾರಿಯೂ ನಾಯಕರನ್ನು ಗೆಲ್ಲಿಸಿ ಪಕ್ಷಕ್ಕೆ ಶಕ್ತಿ ತುಂಬುವ ಚಿಂತನೆ ನಡೆದಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೂ ಉತ್ತರ ಭಾರತದಲ್ಲಿ ಗೆಲುವು ಸಾಧಿಸುವ ವಿಚಾರದಲ್ಲಿ ಆತಂಕವಿದೆ. ಉತ್ತರ ಭಾರತದಲ್ಲಿ ನಾಯಕತ್ವದ ಕೊರತೆ ಇರುವುದರಿಂದ ಸಂಕಷ್ಟ ಎದುರಾಗಿದೆ. ಕಳೆದ ಬಾರಿ ರಾಹುಲ್ ಗಾಂಧಿ ಸೋತ ನಂತರವಂತೂ ಇದು ಇನ್ನೂ ಹೆಚ್ಚಾಗಿದೆ.
ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಗಟ್ಟಿ ನಾಯಕತ್ವದ ಮೇಲೆ ನಂಬಿಕೆ ಹೈಕಮಾಂಡ್‌ಗೆ ನಂಬಿಕೆ ಇದೆ. ಅದೇ ಕಾರಣಕ್ಕೆ ಹಿರಿಯ ನಾಯಕರು ಕೂಡಾ ಸ್ಪರ್ಧೆಗೆ ಒಪ್ಪುವ ಸಾಧ್ಯತೆ ಇದೆ.
ಎಲ್ಲಿಂದ ಸ್ಪರ್ಧೆ ಸಾಧ್ಯತೆ?
ಒಂದು ವೇಳೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ರಾಜ್ಯದಿಂದ ಸ್ಪರ್ಧಿಸಲು ಬಯಸಿದರೆ ಎಲ್ಲಿಂದ ಕಣಕ್ಕಿಳಿಸಬೇಕು ಎನ್ನುವ ಚರ್ಚೆಯೂ ಶುರುವಾಗಿದೆ.
ಪ್ರಿಯಾಂಕಾ ಗಾಂಧಿ ಅವರನ್ನು ಹಳೆ ಮೈಸೂರು ಭಾಗದಿಂದಲೇ ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯವಿದೆ. ಮುಸ್ಲಿಂ, ಕುರುಬ, ದಲಿತ ಸಮುದಾಯಗಳ ಮತ ಲೆಕ್ಕಾಚಾರ ಹಾಕಿ ಹಳೆ ಮೈಸೂರು ಭಾಗದಿಂದ ಸ್ಪರ್ಧೆಗೆ ಹೆಚ್ಚಿನ ಒಲವಿದೆ. ಪ್ರಿಯಾಂಕಾ ಒಪ್ಪಿದ್ರೆ ಮೈಸೂರಿಂದಲೇ ಕಣಕ್ಕೆ ಇಳಿಸುವುದು ಬಹುತೇಕ ನಿಶ್ಚಿತ.
ರಾಹುಲ್ ಗಾಂಧಿಯವರನ್ನು ಕಲ್ಯಾಣ ಕರ್ನಾಟಕ ಇಲ್ಲವೇ ಮಧ್ಯ ಕರ್ನಾಟಕದಿಂದ ಸ್ಪರ್ಧೆ ಮಾಡಿಸುವ ಬಗ್ಗೆ ಚರ್ಚೆ ನಡೆದಿದೆ. ಕಲ್ಯಾಣ ಕರ್ನಾಟಕವಾದರೆ ಕೊಪ್ಪಳ, ಮಧ್ಯ ಕರ್ನಾಟಕವಾದರೆ ದಾವಣಗೆರೆಯಿಂದ ಸ್ಪರ್ಧೆ ಮಾಡಿಸುವ ಚಿಂತನೆ ಇದೆ. ದಾವಣಗೆರೆಯಲ್ಲಿ ಕುರುಬ, ಮುಸ್ಲಿಂ, ದಲಿತ ಮತಗಳು ದೊಡ್ಡ ಪ್ರಮಾಣದಲ್ಲಿದೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ರಾಜ್ಯದಿಂದ ಸ್ಪರ್ಧೆ ಮಾಡಿದರೆ 20 ಸ್ಥಾನ ಗೆಲ್ಲೋದಕ್ಕೆ ಅನುಕೂಲವಾಗುತ್ತದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ನಂಬಿಕೆ. ಹಿರಿಯ ನಾಯಕರ ಸ್ಪರ್ಧೆಯಿಂದ ಅಕ್ಕಪಕ್ಕದ ಕ್ಷೇತ್ರಗಳ ಅಭ್ಯರ್ಥಿ ಗೆಲ್ಲುವುದಕ್ಕೆ ಅನುಕೂಲ ಆಗುತ್ತದೆ ಎನ್ನುವುದು ನಂಬಿಕೆ.
ಯುಪಿಎ ಸಭೆಗೆ ಬಂದಾಗ ಈ ಆಫರ್ ಹೈಕಮಾಂಡ್ ಮುಂದೆ ಇಡುವ ಬಗ್ಗೆ ಡಿಕೆಶಿ ಆಪ್ತ ಬಣದಲ್ಲಿ ಚರ್ಚೆ ನಡೆದಿದೆ. ಇದರ ನಡುವೆ ಹಿರಿಯ ನಾಯಕರನ್ನು ರಾಜ್ಯದಿಂದ ಗೆಲ್ಲಿಸಿ ಕಳುಹಿಸಿ ಹೈಕಮಾಂಡ್‌ಗೆ ಇನ್ನಷ್ಟು ಹತ್ತಿರವಾಗಲೂ ಡಿ.ಕೆ. ಶಿವಕುಮಾರ್ ಪ್ಲ್ಯಾನ್ ಆಗಿದೆ.
ಇದನ್ನೂ ಓದಿ: Congress Protest: ರಾಹುಲ್ ಪರವಾಗಿ ಕಾಂಗ್ರೆಸ್ ಪ್ರತಿಭಟನೆ: 3 ಗಂಟೆ ಮೊದಲೇ ಜಾಗ ಖಾಲಿ ಮಾಡಿ ಹೊರಟ ನಾಯಕರು