Site icon Vistara News

Parliament Flashback: ಸೋನಿಯಾ ಗಾಂಧಿ-ಸುಷ್ಮಾ ಸ್ವರಾಜ್‌ ಕದನಕ್ಕೆ ಅಖಾಡವಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರ

Parliament Flashback

ಬೆಂಗಳೂರು: ಕಾಂಗ್ರೆಸ್‌ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಮತ್ತು ಬಿಜೆಪಿಯ ಅಗ್ರಪಂಕ್ತಿಯ ನಾಯಕಿ ಸುಷ್ಮಾ ಸ್ವರಾಜ್‌ ನಡುವಿನ ಹಣಾಹಣಿಗೆ ಬಳ್ಳಾರಿ ಲೋಕಸಭೆ ಕ್ಷೇತ್ರ (Parliament Flashback) ಸಾಕ್ಷಿಯಾಗಿತ್ತು. ಇವರಿಬ್ಬರ ಸ್ಪರ್ಧೆ ರಾಷ್ಟ್ರದ ಗಮನ ಸೆಳೆದಿತ್ತು. ಇದಕ್ಕೆ ಕಾರಣ 1999ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 1999) ಕಾಂಗ್ರೆಸ್‌ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಮತ್ತು ಬಿಜೆಪಿಯ ಫೈರ್‌ ಬ್ರಾಂಡ್‌ ನಾಯಕಿ, ದಿಲ್ಲಿಯ ಮುಖ್ಯಮಂತ್ರಿಯೂ ಆಗಿದ್ದ ಸುಷ್ಮಾ ಸ್ವರಾಜ್‌ ನಡುವಿನ ಮುಖಾಮುಖಿ.

ಆಗಷ್ಟೇ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಪಟ್ಟಕ್ಕೆ ಏರಿಸಲಾಗಿತ್ತು. ಅವರನ್ನು ಲೋಕಸಭೆಗೆ ಕಳುಹಿಸುವ ತೀರ್ಮಾನವಾಗಿತ್ತು. ತಮ್ಮ ಪತಿ ರಾಜೀವ್‌ ಗಾಂಧಿ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಅಮೇಠಿ ಲೋಕಸಭೆ ಕ್ಷೇತ್ರ ಸೋನಿಯಾ ಅವರ ಮೊದಲ ಆಯ್ಕೆಯಾಗಿತ್ತು. ಅಲ್ಲಿ ಅವರು ನಾಮಪತ್ರ ಸಲ್ಲಿಸಿದರು. ಆದರೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಮೇಠಿಯಲ್ಲಿ 1998ರ ಲೋಕಸಭೆ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿ ಕಾಂಗ್ರೆಸ್‌ಗೆ ಸೋಲಾಗಿತ್ತು. ರಾಜೀವ್‌ ಗಾಂಧಿ ಅವರ ಪರಮಾಪ್ತರಾಗಿದ್ದ ಕ್ಯಾಪ್ಟನ್‌ ಸತೀಶ್‌ ಶರ್ಮಾ ಅವರನ್ನು ಬಿಜೆಪಿ ಅಭ್ಯರ್ಥಿ ಡಾ. ಸಂಜಯ್‌ ಸಿಂಗ್‌ ಸೋಲಿಸಿದ್ದರು. ಹಾಗಾಗಿ ಅಲ್ಲಿ ಸುಲಭವಾಗಿ ಗೆಲ್ಲುವ ವಿಶ್ವಾಸ ಸೋನಿಯಾಗಿರಲಿಲ್ಲ. ಹಾಗಾಗಿ ಸೋನಿಯಾ ಗಾಂಧಿ ಹಿತೈಷಿಗಳೆಲ್ಲ ಸೇರಿ ಲೆಕ್ಕಾಚಾರ ಹಾಕಿ ಆರಿಸಿದ ಮತ್ತೊಂದು ಕ್ಷೇತ್ರವೇ ಬಳ್ಳಾರಿ.

ಬಳ್ಳಾರಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು

ಏಕೆಂದರೆ 1952ರಿಂದ 1999ರವರೆಗೆ ನಡೆದ 12 ಚುನಾವಣೆಗಳಲ್ಲೂ ಕಾಂಗ್ರೆಸ್‌ ಬಳ್ಳಾರಿಯಲ್ಲಿ ಜಯ ಸಾಧಿಸಿತ್ತು. ಹೈದರಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಬಳ್ಳಾರಿಗೆ ಬಂದ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದರು. ಸೋನಿಯಾ ನಾಮಪತ್ರದ ಬೆನ್ನಿಗೇ ಸುಷ್ಮಾ ಸ್ವರಾಜ್‌ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಬಿಜೆಪಿ ನಡುಕ ಹುಟ್ಟಿಸಿತು.
ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್‌ ಅವರ ಚುನಾವಣಾ ಪ್ರಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ವಿದೇಶಿ ಸೊಸೆ ಮತ್ತು ಸ್ವದೇಶಿ ಮಗಳ ನಡುವಿನ ಸ್ಪರ್ಧೆ ಎಂದೇ ಮಾಧ್ಯಮಗಳು ಬಣ್ಣಿಸಿದವು. ಸುಷ್ಮಾ ಸ್ವರಾಜ್‌ ಅವರು ಕನ್ನಡದಲ್ಲೇ ಭಾಷಣ ಮಾಡಿ ಅಚ್ಚರಿ ಮೂಡಿಸಿದರು. ಕಾಂಗ್ರೆಸ್‌ ಮತ್ತು ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರು ಇಲ್ಲಿಗೆ ಬಂದು ಪ್ರಚಾರ ಮಾಡಿದರು. ಆದರೆ ಅಂತಿಮವಾಗಿ ಸೋನಿಯಾ ಗಾಂಧಿ ಅವರು 56,100 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅತ್ತ ಅಮೇಠಿಯಲ್ಲಿ ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆದ್ದ ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರ ತೊರೆದರು.

In 1985 the Janata Party won a landslide majority on its own Ramakrishna Hegde became the Chief Minister again Ramakrishna Hegde Birth Day

ಇದನ್ನೂ ಓದಿ | Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

ಸೋತರೂ ಸುಷ್ಮಾ ಸ್ವರಾಜ್‌ ಬಳ್ಳಾರಿಯನ್ನು ಮರೆಯಲಿಲ್ಲ

ಸುಷ್ಮಾ ಸ್ವರಾಜ್‌ ಇಲ್ಲಿ ಸೋತರು. ಆದರೆ ಪ್ರತಿವರ್ಷ ವರ ಮಹಾಲಕ್ಷ್ಮಿ ದಿನ ಬಳ್ಳಾರಿಗೆ ಬಂದು ಪೂಜೆಯಲ್ಲಿ ಭಾಗಿಯಾಗುತ್ತಿದ್ದರು. ಅವರ ಸ್ಪರ್ಧೆ ಬಳ್ಳಾರಿಯಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸಿತು. ಮುಂದೆ 2004, 2009, 20014 ಮತ್ತು 20019ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಜಯ ದಾಖಲಿಸಿದ್ದೇ ಇದಕ್ಕೆ ಸಾಕ್ಷಿ.

ಮೂವರು ಸಿನಿ ತಾರೆಯರು ಪ್ರತಿನಿಧಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರ!

In 1985 the Janata Party won a landslide majority on its own Ramakrishna Hegde became the Chief Minister again Ramakrishna Hegde Birth Day

ಮಂಡ್ಯ ಲೋಕಸಭೆ ಕ್ಷೇತ್ರ (Parliament Flashback) ರಾಜ್ಯದ ವಿಶಿಷ್ಟ ಲೋಕಸಭೆ ಕ್ಷೇತ್ರವಾಗಿ ಗಮನ ಸೆಳೆದಿದೆ. ಖ್ಯಾತ ಚಲನಚಿತ್ರ ಕಲಾವಿದರಾದ ಅಂಬರೀಶ್‌, ರಮ್ಯಾ ಮತ್ತು ಸುಮಲತಾ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದು ವಿಶೇಷ.
1998ರಲ್ಲಿ ಹಿರಿಯ ನಟ ಅಂಬರೀಶ್‌ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ, ಕಾಂಗ್ರೆಸ್ ಹಿರಿಯ ಮುಖಂಡ ಜಿ. ಮಾದೇಗೌಡ ಅವರನ್ನು 1,80,523 ಮತಗಳ ಭರ್ಜರಿ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದರು. ಆದರೆ 1999ರಲ್ಲಿ ಅಂಬರೀಶ್ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ, ಜೆಡಿಎಸ್‌ನ ಕೃಷ್ಣ ಅವರನ್ನು 1,52,180 ಮತಗಳ ಅಂತರದಿಂದ ಸೋಲಿಸಿದರು. 2004ರಲ್ಲಿ ಅಂಬರೀಷ್‌ ಜೆಡಿಎಸ್‌ನ ಡಾ. ಎಸ್‌. ರಾಮೇಗೌಡ ಅವರನ್ನು 1,24,438 ಮತಗಳ ಅಂತರದಿಂದ ಪರಾಭವಗೊಳಿಸಿ ಮೂರನೇ ಬಾರಿ ಗೆದ್ದರು. ಆದರೆ 2009ರ ಚುನಾವಣೆಯಲ್ಲಿ ಜೆಡಿಎಸ್‌ನ ಚಲುವರಾಯಸ್ವಾಮಿ ಅವರ ವಿರುದ್ಧ ಅಂಬರೀಶ್ 23,500 ಮತಗಳ ಅಂತರದಿಂದ ಸೋತು ಹೋದರು.

ನಟಿ ರಮ್ಯಾ ಎಂಟ್ರಿ

ಈ ಮಧ್ಯೆ 2013ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಗೆದ್ದ ಚಲುವರಾಯಸ್ವಾಮಿ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗಾಗಿ 2013ರಲ್ಲಿ ನಡೆದ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ ನಟಿ ರಮ್ಯಾ, ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌. ಪುಟ್ಟರಾಜು ಅವರನ್ನು 33,000 ಮತಗಳ ಅಂತರದಿಂದ ಸೋಲಿಸಿ ಪಾರ್ಲಿಮೆಂಟ್‌ಗೆ ಎಂಟ್ರಿ ಪಡೆದರು. ಆಗ ಅವರ ಲೋಕಸಭೆ ಅವಧಿ ಇದ್ದದ್ದು 8 ತಿಂಗಳು ಮಾತ್ರ! 2014ರಲ್ಲಿ ರಮ್ಯಾ ಮತ್ತೆ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದರು. ಆದರೆ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌. ಪುಟ್ಟರಾಜು ಎದುರು ಕೇವಲ 5,518 ಮತಗಳಿಂದ ಸೋಲು ಕಂಡರು.

ಸುಮಲತಾ-ನಿಖಿಲ್‌ ಕುಮಾರಸ್ವಾಮಿ ಬಿಗ್‌ ಫೈಟ್

In 1985 the Janata Party won a landslide majority on its own Ramakrishna Hegde became the Chief Minister again Ramakrishna Hegde Birth Day

2019ರ ಎಲೆಕ್ಷನ್‌ನಲ್ಲಿ ಅಂಬರೀಶ್‌ ಅವರ ಪತ್ನಿ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿದ್ದರು. ಆದರೆ ಕಾಂಗ್ರೆಸ್‌ ಮಂಡ್ಯ ಕ್ಷೇತ್ರವನ್ನು ಆಗಿನ ತನ್ನ ಮಿತ್ರ ಪಕ್ಷವಾದ ಜೆಡಿಎಸ್‌ಗೆ ಒಪ್ಪಿಸಿತು. ದೇಶದ ಗಮನ ಸೆಳೆದಿದ್ದ ಅಂದಿನ ಬಿರುಸಿನ ಸ್ಪರ್ಧೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಜೆಡಿಎಸ್‌ ಅಭ್ಯರ್ಥಿ, ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು 1,25,876 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು. ಹೀಗೆ ಈವರೆಗೆ ಮೂವರು ತಾರೆಯರು ಮಂಡ್ಯ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ; ಆದರೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಜಯಭೇರಿ!

ತುರ್ತು ಪರಿಸ್ಥಿತಿ ಹೇರಿದ್ದ (Parliament Flashback) ಇಂದಿರಾ ಗಾಂಧಿ ವಿರುದ್ಧ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ ಕಾಂಗ್ರೆಸ್‌ಗೆ ಭಾರಿ ಸೋಲಾಯಿತು. ಆದರೆ ಕರ್ನಾಟಕದಲ್ಲಿ ಮಾತ್ರ ತದ್ವಿರುದ್ಧ ಫಲಿತಾಂಶ ಕಂಡು ಬಂತು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ 1977ರ ಮಾ.21ರಂದು ಅಂತ್ಯವಾಯಿತು. ತುರ್ತು ಪರಿಸ್ಥಿತಿಯ ಭಯದ ವಾತಾವರಣದ ನಡುವೆಯೇ ಮಾ.16ರಿಂದ 20ರವರೆಗೆ 6ನೇ ಲೋಕಸಭೆ ಚುನಾವಣೆ ನಡೆಯಿತು.

ಇಡೀ ದೇಶ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಕೊತಕೊತನೆ ಕುದಿಯುತ್ತಿತ್ತು. ಜನರ ಆಕ್ರೋಶ ಭುಗಿಲೆದ್ದಿತ್ತು. ಎಲ್ಲ ಪ್ರತಿಪಕ್ಷಗಳು ಜನತಾ ಪರಿವಾರದ ಅಡಿಯಲ್ಲಿ ಒಂದಾಗಿ ಕಾಂಗ್ರೆಸ್‌ ವಿರುದ್ಧ ಸಮರ ಸಾರಿದ್ದರು.

ಜನತಾ ಪರಿವಾರ 295 ಸೀಟುಗಳೊಂದಿಗೆ ಬಹುಮತ ಪಡೆಯಿತು. ಇಂದಿರಾ ಗಾಂಧಿ ಅವರ ಕಾಂಗ್ರೆಸ್‌ ಪಕ್ಷ ಕೇವಲ 154 ಸ್ಥಾನಗಳನ್ನು ಗಳಿಸಿತು. ಜನತಾ ಪರಿವಾರ ಹಿಂದಿನ ಚುನಾವಣೆಗಿಂತ 260 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದರೆ, ಕಾಂಗ್ರೆಸ್‌‌ ತನ್ನ ಹಿಡಿತದಲ್ಲಿದ್ದ 198 ಕ್ಷೇತ್ರಗಳನ್ನು ಕಳೆದುಕೊಂಡಿತು.

ರಾಜ್ಯದಲ್ಲೂ ಇಂದಿರಾ ಅಲೆ ಇತ್ತು, ಆದರೆ…

ಕರ್ನಾಟಕದಲ್ಲೂ ಇಂದಿರಾ ವಿರೋಧಿ ಅಲೆ ಜೋರಾಗಿತ್ತು. ಆದರೆ ಒಟ್ಟು 28 ಕ್ಷೇತ್ರಗಳಲ್ಲಿ ಜನತಾ ಪಕ್ಷವು ಭಾರತೀಯ ಲೋಕ ದಳದ ಹೆಸರಿನಲ್ಲಿ ಗೆದ್ದಿದ್ದು ಕೇವಲ ಎರಡು ಕ್ಷೇತ್ರಗಳಲ್ಲಿ. ಕಾಂಗ್ರೆಸ್‌ 26 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತು.

ಜನತಾ ಪರಿವಾರದ ಅಭ್ಯರ್ಥಿಗಳಲ್ಲಿ ಗೆದ್ದವರೆಂದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನ್ಯಾ. ಕೆ ಎಸ್‌ ಹೆಗ್ಡೆ ಮತ್ತು ಹಾಸನದಿಂದ ಎಸ್‌ ನಂಜೇಗೌಡರು ಮಾತ್ರ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೆ ಎಸ್‌ ಹೆಗ್ಡೆ ಅವರು ಕಾಂಗ್ರೆಸ್‌ನ ಕೆ ಹನುಮಂತಯ್ಯ ಅವರನ್ನು 41,165 ಮತಗಳ ಅಂತರದಿಂದ ಸೋಲಿಸಿದರು. ಹಾಸನದಲ್ಲಿ ಎಸ್‌ ನಂಜೇಗೌಡ ಅವರು ಕಾಂಗ್ರೆಸ್‌ನ ಜಿ ಎಲ್‌ ನಲ್ಲೂರೆಗೌಡ ಅವರ ವಿರುದ್ಧ ಕೇವಲ 1081 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಸೋತ ಘಟಾನುಘಟಿಗಳು ಯಾರು?

ರಾಜ್ಯದಲ್ಲಿ ಅಂದಿನ ಚುನಾವಣೆಯಲ್ಲಿ ಸೋತು ಹೋದ ಜನತಾ ಪರಿವಾರದ ಘಟಾನುಘಟಿ ರಾಜಕಾರಣಿಗಳು ಯಾರ್ಯಾರು ನೋಡಿ:


ಕೆನರಾ (ಈಗಿನ ಉತ್ತರ ಕನ್ನಡ ಕ್ಷೇತ್ರ) ಲೋಕಸಭೆ ಕ್ಷೇತ್ರದಿಂದ ರಾಮಕೃಷ್ಣ ಹೆಗಡೆ, ಧಾರವಾಡ ಉತ್ತರದಿಂದ ಜಗನ್ನಾಥ್‌ ರಾವ್‌ ಜೋಶಿ, ಮಂಗಳೂರಿನಿಂದ ಎ.ಕೆ. ಸುಬ್ಬಯ್ಯ, ಮೈಸೂರಿನಿಂದ ಎಂ.ಎಸ್‌. ಗುರುಪಾದಸ್ವಾಮಿ, ಶಿವಮೊಗ್ಗದಿಂದ ಜೆ.ಎಚ್‌. ಪಟೇಲ್‌, ಉಡುಪಿಯಿಂದ ವಿ.ಎಸ್‌. ಆಚಾರ್ಯ, ಧಾರವಾಡ ದಕ್ಷಿಣದಿಂದ ಸಿ.ಎಂ. ಇಬ್ರಾಹಿಂ, ತುಮಕೂರಿನಿಂದ ಎಸ್‌. ಮಲ್ಲಿಕಾರ್ಜುನಯ್ಯ.

ಇದನ್ನೂ ಓದಿ | Parliament Flashback: ಧಾರವಾಡದಲ್ಲಿ ಸತತ 4 ಬಾರಿ ಗೆಲುವು ಸಾಧಿಸಿರುವ ಪ್ರಲ್ಹಾದ್ ಜೋಶಿ!

1977ರ ಮಾ.25ರಂದು ಮಧ್ಯಾಹ್ನ 3.30ಕ್ಕೆ 81 ವರ್ಷದ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಇಂದಿರಾ ಆಳ್ವಿಕೆ ಅಂತ್ಯ ಆಯಿತು. ಆದರೆ ಕರ್ನಾಟಕ ಮಾತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿಯೇ ಉಳಿಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version