Site icon Vistara News

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Parliament Flashback

ಬೆಂಗಳೂರು: ತುರ್ತು ಪರಿಸ್ಥಿತಿ ಹೇರಿದ್ದ (Parliament Flashback) ಇಂದಿರಾ ಗಾಂಧಿ ವಿರುದ್ಧ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ ಕಾಂಗ್ರೆಸ್‌ಗೆ ಭಾರಿ ಸೋಲಾಯಿತು. ಆದರೆ ಕರ್ನಾಟಕದಲ್ಲಿ ಮಾತ್ರ ತದ್ವಿರುದ್ಧ ಫಲಿತಾಂಶ ಕಂಡು ಬಂತು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ 1977ರ ಮಾ.21ರಂದು ಅಂತ್ಯವಾಯಿತು. ತುರ್ತು ಪರಿಸ್ಥಿತಿಯ ಭಯದ ವಾತಾವರಣದ ನಡುವೆಯೇ ಮಾ.16ರಿಂದ 20ರವರೆಗೆ 6ನೇ ಲೋಕಸಭೆ ಚುನಾವಣೆ ನಡೆಯಿತು. ಇಡೀ ದೇಶ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಕೊತಕೊತನೆ ಕುದಿಯುತ್ತಿತ್ತು. ಜನರ ಆಕ್ರೋಶ ಭುಗಿಲೆದ್ದಿತ್ತು. ಎಲ್ಲ ಪ್ರತಿಪಕ್ಷಗಳು ಜನತಾ ಪರಿವಾರದ ಅಡಿಯಲ್ಲಿ ಒಂದಾಗಿ ಕಾಂಗ್ರೆಸ್‌ ವಿರುದ್ಧ ಸಮರ ಸಾರಿದ್ದರು.

ಜನತಾ ಪರಿವಾರ 295 ಸೀಟುಗಳೊಂದಿಗೆ ಬಹುಮತ ಪಡೆಯಿತು. ಇಂದಿರಾ ಗಾಂಧಿ ಅವರ ಕಾಂಗ್ರೆಸ್‌ ಪಕ್ಷ ಕೇವಲ 154 ಸ್ಥಾನಗಳನ್ನು ಗಳಿಸಿತು. ಜನತಾ ಪರಿವಾರ ಹಿಂದಿನ ಚುನಾವಣೆಗಿಂತ 260 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದರೆ, ಕಾಂಗ್ರೆಸ್‌‌ ತನ್ನ ಹಿಡಿತದಲ್ಲಿದ್ದ 198 ಕ್ಷೇತ್ರಗಳನ್ನು ಕಳೆದುಕೊಂಡಿತು.

ರಾಜ್ಯದಲ್ಲೂ ಇಂದಿರಾ ಅಲೆ ಇತ್ತು, ಆದರೆ…

ಕರ್ನಾಟಕದಲ್ಲೂ ಇಂದಿರಾ ವಿರೋಧಿ ಅಲೆ ಜೋರಾಗಿತ್ತು. ಆದರೆ ಒಟ್ಟು 28 ಕ್ಷೇತ್ರಗಳಲ್ಲಿ ಜನತಾ ಪಕ್ಷವು ಭಾರತೀಯ ಲೋಕ ದಳದ ಹೆಸರಿನಲ್ಲಿ ಗೆದ್ದಿದ್ದು ಕೇವಲ ಎರಡು ಕ್ಷೇತ್ರಗಳಲ್ಲಿ. ಕಾಂಗ್ರೆಸ್‌ 26 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತು.

ಇದನ್ನೂ ಓದಿ | Parliament Flashback: ಬೆಂಗಳೂರು ದಕ್ಷಿಣ ಕ್ಷೇತ್ರ ಅಂದರೆ ಕಾಂಗ್ರೆಸ್‌ಗೆ ದುಃಸ್ವಪ್ನ! ಗೆದ್ದಿದ್ದು ಒಮ್ಮೆ ಮಾತ್ರ!

ಜನತಾ ಪರಿವಾರದ ಅಭ್ಯರ್ಥಿಗಳಲ್ಲಿ ಗೆದ್ದವರೆಂದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನ್ಯಾ. ಕೆ.ಎಸ್‌. ಹೆಗ್ಡೆ ಮತ್ತು ಹಾಸನದಿಂದ ಎಸ್‌ ನಂಜೇಗೌಡರು ಮಾತ್ರ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೆ.ಎಸ್‌. ಹೆಗ್ಡೆ ಅವರು ಕಾಂಗ್ರೆಸ್‌ನ ಕೆ. ಹನುಮಂತಯ್ಯ ಅವರನ್ನು 41,165 ಮತಗಳ ಅಂತರದಿಂದ ಸೋಲಿಸಿದರು. ಹಾಸನದಲ್ಲಿ ಎಸ್‌ ನಂಜೇಗೌಡ ಅವರು ಕಾಂಗ್ರೆಸ್‌ನ ಜಿ.ಎಲ್‌. ನಲ್ಲೂರೆಗೌಡ ಅವರ ವಿರುದ್ಧ ಕೇವಲ 1081 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಸೋತ ಘಟಾನುಘಟಿಗಳು ಯಾರು?

ರಾಜ್ಯದಲ್ಲಿ ಅಂದಿನ ಚುನಾವಣೆಯಲ್ಲಿ ಸೋತು ಹೋದ ಜನತಾ ಪರಿವಾರದ ಘಟಾನುಘಟಿ ರಾಜಕಾರಣಿಗಳು ಯಾರ್ಯಾರು ನೋಡಿ:

ಕೆನರಾ (ಈಗಿನ ಉತ್ತರ ಕನ್ನಡ ಕ್ಷೇತ್ರ) ಲೋಕಸಭೆ ಕ್ಷೇತ್ರದಿಂದ ರಾಮಕೃಷ್ಣ ಹೆಗಡೆ, ಧಾರವಾಡ ಉತ್ತರದಿಂದ ಜಗನ್ನಾಥ್‌ ರಾವ್‌ ಜೋಶಿ, ಮಂಗಳೂರಿನಿಂದ ಎ.ಕೆ. ಸುಬ್ಬಯ್ಯ, ಮೈಸೂರಿನಿಂದ ಎಂ.ಎಸ್‌. ಗುರುಪಾದಸ್ವಾಮಿ, ಶಿವಮೊಗ್ಗದಿಂದ ಜೆ.ಎಚ್‌. ಪಟೇಲ್‌, ಉಡುಪಿಯಿಂದ ವಿ.ಎಸ್‌. ಆಚಾರ್ಯ, ಧಾರವಾಡ ದಕ್ಷಿಣದಿಂದ ಸಿ.ಎಂ. ಇಬ್ರಾಹಿಂ, ತುಮಕೂರಿನಿಂದ ಎಸ್‌. ಮಲ್ಲಿಕಾರ್ಜುನಯ್ಯ.

1977ರ ಮಾ.25ರಂದು ಮಧ್ಯಾಹ್ನ 3.30ಕ್ಕೆ 81 ವರ್ಷದ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಇಂದಿರಾ ಆಳ್ವಿಕೆ ಅಂತ್ಯ ಆಯಿತು. ಆದರೆ ಕರ್ನಾಟಕ ಮಾತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿಯೇ ಉಳಿಯಿತು.

ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದಿದ್ದ ಒಡೆಯರ್‌!

ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ (Parliament Flashback) ಗೆಲುವು ಸಾಧಿಸಿದ್ದರು. ಸೋಜಿಗವೆಂದರೆ ಒಡೆಯರ್‌ ನಿರಂತರ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದು ಮೂರನೇ ಬಾರಿ ಬಿಜೆಪಿ ಟಿಕೆಟ್‌ನಿಂದ ಚುನಾವಣೆ ಕಣಕ್ಕಿಳಿದಾಗ ಸೋತು ಹೋದರು! ಮುಂದೆ ಮತ್ತೆರಡು ಬಾರಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು!

1984ರಲ್ಲಿ ಮೊದಲ ಬಾರಿ ಸ್ಪರ್ಧೆ

1984ರಲ್ಲಿ ಒಡೆಯರ್‌ ಮೊದಲ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಲೋಕಸಭೆ ಪ್ರವೇಶಿಸಿದರು. 1989ರಲ್ಲಿ ಮತ್ತೊಮ್ಮೆ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. 1991ರಲ್ಲಿ ಕಾಂಗ್ರೆಸ್‌ ಹೈಕಮಾಂಡ್‌, ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸ್‌ ಅವರ ಪುತ್ರಿ ಚಂದ್ರಪ್ರಭಾ ಅರಸ್‌ ಅವರಿಗೆ ಟಿಕೆಟ್‌ ನೀಡಿತು. ಸಿಟ್ಟಿಗೆದ್ದ ಒಡೆಯರ್‌ ಅವರು ಬಿಜೆಪಿಯಿಂದ ಕಣಕ್ಕಿಳಿದರು. ಆದರೆ ಚಂದ್ರಪ್ರಭಾ ಅರಸ್‌ ಎದುರು ಸೋತು ಹೋದರು.

ಇದನ್ನೂ ಓದಿ | Parliament Flashback: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೇ ಸೋಲಿಸಿದ್ದ ಬ್ಯಾರೇಜ್‌ ಸಿದ್ದು!

ಮತ್ತೊಮ್ಮೆ ಒಡೆಯರ್‌ಗೆ ಟಿಕೆಟ್‌

1996ರಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಒಡೆಯರ್‌ಗೆ ಟಿಕೆಟ್‌ ನೀಡಿತು. ಆ ಚುನಾವಣೆಯಲ್ಲಿ ಒಡೆಯರ್‌ ಜನತಾ ದಳದ ಅಭ್ಯರ್ಥಿ ಜಿ.ಟಿ. ದೇವೇಗೌಡರನ್ನು ಸೋಲಿಸಿದರು. ಆದರೆ 1998ರಲ್ಲಿ ಕಾಂಗ್ರೆಸ್‌ ಚಿಕ್ಕಮಾದು ಅವರಿಗೆ ಟಿಕೆಟ್‌ ನೀಡಿತು. ಬಿಜೆಪಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅವರು ಚಿಕ್ಕಮಾದು ಅವರನ್ನು ಸೋಲಿಸುವ ಮೂಲಕ ಬಿಜೆಪಿ ಮೊದಲ ಬಾರಿ ಮೈಸೂರಿನಲ್ಲಿ ಖಾತೆ ತೆರೆಯಿತು. 2004ರಲ್ಲಿ ಕಾಂಗ್ರೆಸ್‌ ಮತ್ತೆ ಒಡೆಯರ್‌ ಅವರನ್ನು ಕಣಕ್ಕಿಳಿಸಿತು. ಆದರೆ ಬಿಜೆಪಿಯ ವಿಜಯಶಂಕರ್‌ ಅವರು 3,16,442 ಮತಗಳನ್ನು ಪಡೆದು ಎರಡನೇ ಬಾರಿ ಗೆಲುವು ಸಾಧಿಸಿದರು. ಜನತಾ ದಳದಿಂದ ಸ್ಪರ್ಧಿಸಿದ್ದ ಎ.ಎಸ್‌. ಗುರುಸ್ವಾಮಿ 3,06,292 ಮತ ಪಡೆದು ಎರಡನೇ ಸ್ಥಾನ ಪಡೆದರೆ, ಒಡೆಯರ್‌ ಅವರು 2,99,227 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಅಲ್ಲಿಗೆ ಅವರ ಚುನಾವಣಾ ರಾಜಕೀಯ ಅಂತ್ಯವಾಯಿತು.

Exit mobile version