ಬೆಂಗಳೂರು: ಇನ್ನು ೧೫ ದಿನ ಕಾದು ನೋಡಿ ಕಾಂಗ್ರೆಸ್ ನಾಯಕರು ಆ ಪಕ್ಷದ ಬಾಗಿಲು ಮುಚ್ಚಿಕೊಂಡು ಬಿಜೆಪಿಗೆ ಬರುತ್ತಾರೆ. ಕಾಂಗ್ರೆಸ್ ತನ್ನ ಮನೆ ಕಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಹುತೇಕರು ಬಿಜೆಪಿ (Party Join) ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಲ್ಲೇಶ್ವರದಲ್ಲಿರುವ ಬಿಜೆಪಿಯ ಜಗನ್ನಾಥ ಭವನದಲ್ಲಿ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇದೊಂದು ಸ್ಪಷ್ಟ ಸಂದೇಶವಾಗಿದೆ. ಕಾಂಗ್ರೆಸ್‌ನಿಂದ ಅನೇಕ ನಾಯಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯರ ಕಣ್ಣನ್ನು ಸಚಿವ ಅಶ್ವತ್ಥನಾರಾಯಣ ಪರೀಕ್ಷಿಸಲಿ
ಕಲಬುರಗಿಯಲ್ಲಿ ಒಬಿಸಿ ಸಮಾವೇಶವನ್ನು ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಸಾವಿರ ಜನರು ಸೇರಿದ್ದಾರಷ್ಟೇ ಎಂದು ಹೇಳಿಕೆ ನೀಡಿದ್ದರು. ಬಹುಶಃ ಸಿದ್ದರಾಮಯ್ಯ ಅವರಿಗೆ ಕನ್ನಡಕದ ಅವಶ್ಯಕತೆ ಇದೆ. ಸಚಿವ ಅಶ್ವತ್ಥನಾರಾಯಣ ಅವರೇ, ನೀವು ಡಾಕ್ಟರ್ ಇದ್ದೀರಿ. ನೀವೊಮ್ಮೆ ಸಿದ್ದರಾಮಯ್ಯ ಅವರನ್ನು ಪರೀಕ್ಷಿಸಿ ಅವರಿಗೆ ಒಳ್ಳೆಯ ಕನ್ನಡಕ ಬೇಕಾಗಿದೆ ಎಂದು ಕಟೀಲ್ ಹೇಳಿದರು.
ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್: ಸಿದ್ದರಾಮಯ್ಯ
ಸಿದ್ದರಾಮಯ್ಯನವರು ಕಲಬುರಗಿಯಲ್ಲಿ ಬಂದು ನೋಡಬೇಕಾಗಿತ್ತು. 5 ಲಕ್ಷ ಜನರು ಸೇರಿದ್ದರು. ಬಂದವರು ಯಾರಿಗೂ ನಾವು ಹಣ, ಹೆಂಡ ಕೊಟ್ಟಿಲ್ಲ ಎಂದು ಕಟೀಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮಾಡಿದ್ದಾರೆ. ಅವರು ಪಾದಯಾತ್ರೆ ಮೂಲಕ ಚಾಮರಾಜನಗರಕ್ಕೆ ಕಾಲಿಟ್ಟರು. ಇದರಿಂದ ಕೊಳ್ಳೇಗಾಲ ನಗರಸಭೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಯಿತು. ಹೀಗೆ ಅವರು ಹೋದಲೆಲ್ಲ ಬಿಜೆಪಿ ಉತ್ತಮ ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಬಿಜೆಪಿ ನಾಯಕತ್ವ ಒಪ್ಪಿ ಬಂದಿದ್ದಾರೆ
ಮಾಜಿ ಸಂಸದರಾದ ಮುದ್ದಹನುಮೇಗೌಡ, ಶಶಿಕುಮಾರ್ ಅವರು ಪಕ್ಷದ ಮೇಲೆ ವಿಶ್ವಾಸ ಇಡಬೇಕು. ಬಿಜೆಪಿಗೆ ಬಂದವರಿಗೆ ಎಂದಿಗೂ ನಿರಾಸೆ ಮಾಡಿಲ್ಲ. ಬಿಜೆಪಿಗೆ ಬಂದವರೆಲ್ಲ ನಾಯಕರಾಗಿದ್ದಾರೆ. ಪಕ್ಷಕ್ಕೆ ಬಂದವರು ನಿಷ್ಠರಾಗಿರಬೇಕು ಅಷ್ಟೇ ಎಂದು ಕಟೀಲ್ ಕಿವಿಮಾತು ಹೇಳಿದರು.
ಪಕ್ಷ ಸೇರ್ಪಡೆಯಾದ ಪ್ರಮುಖರು
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ (ನ.೩) ಮಾಜಿ ಸಂಸದರಾದ ಮುದ್ದಹನುಮೆಗೌಡ ಹಾಗೂ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್, ರಾಜಕೀಯ ನಾಯಕರಾದ ವೆಂಕಟಾಚಲಯ್ಯ, ಸಂಜೀವ್ ರೆಡ್ಡಿ, ವೆಂಕಟೇಶ್ ಮೂರ್ತಿ ಪಕ್ಷ ಸೇರ್ಪಡೆಯಾದರು. ಬಿಜೆಪಿ ಬಾವುಟ ನೀಡಿ ಇವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.
ಇದನ್ನೂ ಓದಿ | ಸಿದ್ದರಾಮಯ್ಯ ಅವರು ಈ ಸಾರಿ ಗೆಲ್ಲೋದು ಬಿಡಿ, ಟಿಕೆಟ್ ಸಿಗೋದೇ ಡೌಟು ಎಂದ ನಳಿನ್ ಕುಮಾರ್ ಕಟೀಲ್!
ಸಚಿವರಾದ ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಎಸ್.ಟಿ. ಸೋಮಶೇಖರ್, ಶಾಸಕರಾದ ಮಸಾಲೆ ಜಯರಾಂ, ಸಿ.ಪಿ. ಯೋಗಿಶ್ವರ್, ರಾಜ್ಯಸಭಾ ಸದಸ್ಯ ಜಗ್ಗೇಶ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಾಗಿಯಾಗಿದ್ದರು.
ಮುದ್ದಹನುಮೇಗೌಡ ಅವರು ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಯಸಿದ್ದರೆ, ಶಶಿಕುಮಾರ್ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ | Lokayukta | ಅಧಿಕಾರ ದುರ್ಬಳಕೆ, ಲಂಚ ಆರೋಪ; ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು