ಬೆಂಗಳೂರು: ʻʻಅಮಿತ್ ಶಾ ಅವರು ಇಂದು ಬೆನ್ನು ತಟ್ಟಿ ಮಾತನಾಡಿಸಿದ್ದು ನನಗೆ ಆನೆ ಬಲ ಬಂದಂತಾಗಿದೆʼʼ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ. ಶುಕ್ರವಾರ ಮುಂಜಾನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಉಪಾಹಾರ ಸೇವನೆಗೆ ಬಂದ ಸಂದರ್ಭದಲ್ಲಿ ಅಮಿತ್ ಶಾ (Amit Shah visit) ಅವರು ವಿಜಯೇಂದ್ರ ಅವರ ಕೈಯಿಂದ ಹೂಗುಚ್ಛ ಸ್ವೀಕರಿಸಲು ಬಯಸಿದ್ದು ಮತ್ತು ಹೆಗಲಿಗೆ ಕೈ ಇಟ್ಟು ಬೆನ್ನು ತಟ್ಟಿದ್ದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಸ್ವತಃ ವಿಜಯೇಂದ್ರ ಅವರೇ ಈ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದರು.
ಅಮಿತ್ ಶಾ ಅವರು ಕಾವೇರಿ ನಿವಾಸಕ್ಕೆ ಬಂದು ಉಪಾಹಾರ ಸೇವಿಸಿ ಮರಳಿದ ಬಳಿಕ ಮಾಧ್ಯಮಗಳೊಂದಿಗೆ ಖುಷಿಯಿಂದ ಮಾತನಾಡಿದ ಅವರು, ʻʻಅಮಿತ್ ಶಾ ಅವರು ನಮ್ಮ ಮನೆಗೆ ಉಪಹಾರಕ್ಕೆ ಬಂದಿರುವುದು ಖುಷಿಯಾಗಿದೆ. ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡುಕೊಂಡು ಬಂದಿದ್ದರು. ಅವರು ನನ್ನ ಬೆನ್ನು ತಟ್ಟಿ ಮಾತನಾಡಿಸಿದ್ದು ಆನೆಬಲ ಬಂದಂತಾಗಿದೆ. ಅಮಿತ್ ಶಾ ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸಿದರು.ʼʼ ಎಂದು ಹೇಳಿದರು.
ಇದು ರಾಜಕೀಯ ಸಂದೇಶವೇ ಎಂದು ಪತ್ರಕರ್ತರು ಕೇಳಿದಾಗ ʻʻಇದು ಸಹಜ, ಇದು ರಾಜಕೀಯದಲ್ಲಿ ಸಹಜʼʼ ಎಂದು ಹೇಳಿದರು. ʻʻಆನೆ ಬಲ ಬಂದಂತಾಗಿದೆʼʼ ಎನ್ನುವ ಮೂಲಕ ಸ್ವಪಕ್ಷದಲ್ಲೇ ಇರುವ ವಿರೋಧಿಗಳಿಗೆ ಇದೊಂದು ಸಂದೇಶ ಎಂದು ಪರೋಕ್ಷವಾಗಿ ಹೇಳಿದರು.
ಸೈಡ್ ಲೈನ್ ವಿಷಯ ಸುಳ್ಳು ಎನ್ನುವುದು ಸ್ಪಷ್ಟವಾಯಿತು
ಅಮಿತ್ ಶಾ ಅವರು ನಮ್ಮ ಮನೆಗೆ ಬಂದಿರುವುದು, ಅವರು ತೋರಿಸಿರುವ ಆತ್ಮೀಯತೆ, ಮಾತನಾಡಿರುವ ರೀತಿ ರಾಜಕೀಯವಾಗಿ ಹಲವು ಸಂದೇಶಗಳನ್ನು ನೀಡಿದೆ ಎಂದು ವಿಜಯೇಂದ್ರ ಒಪ್ಪಿಕೊಂಡರು. ಅದರಲ್ಲೂ ಮುಖ್ಯವಾಗಿ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬುದು ಸುಳ್ಳು ಎನ್ನುವುದು ಸಾಬೀತಾಯಿತು ಎಂದರು.
ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ಅಮಾನವೀಯತವಾಗಿ ಹುದ್ದೆಯಿಂದ ಇಳಿಸಲಾಯಿತು ಎಂದೆಲ್ಲ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇದೆಲ್ಲ ಸುಳ್ಳು, ಸತ್ಯಕ್ಕೆ ದೂರ ಎನ್ನುವುದನ್ನು ಅಮಿತ್ ಶಾ ಭೇಟಿ ಸಾಬೀತು ಮಾಡಿದೆ. ಯಡಿಯೂರಪ್ಪ ಅವರಿಗೆ ಪಕ್ಷ ಎಲ್ಲವನ್ನೂ ನೀಡಿದೆ. ಅವರು ಸ್ವಇಚ್ಛೆಯಿಂದ ಮುಖ್ಯಮಂತ್ರಿ ಹುದ್ದೆಯಿಂದ ಇಳಿದಿದ್ದಾರೆ. ಜತೆಗೆ ಈಗಲೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಓಡಾಡುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ʻʻಪಕ್ಷದಲ್ಲಿ ನನ್ನನ್ನು ಕಡೆಗಣಿಸಿಲ್ಲ ಎಂದು ಬಿಎಸ್‌ವೈ ಅವರು ಹಲವಾರು ಬಾರಿ ಬಹಿರಂಗವಾಗಿ ಹೇಳಿದ್ದಾರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಷಯದಲ್ಲೂ ಕೂಡ ಒತ್ತಡ ಇರಲಿಲ್ಲ ಎಂದಿದ್ದರು. ಈಗಲೂ ಅವರು ಹಿಂದಿನ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆʼʼ ಎಂದರು.
ಬಿಎಸ್‌ವೈ-ಶಾ ನಡುವೆ ರಾಜಕೀಯ ಬಿಟ್ಟು ಬೇರೇನು ಚರ್ಚೆ ಆಗುತ್ತೆ ಹೇಳಿ?
ʻʻಬಿಎಸ್‌ವೈ ಮತ್ತು ಅಮಿತ್ ನಡುವೆ ರಾಜಕಾರಣ ಬಿಟ್ಟು ಬೇರೇನು ಚರ್ಚೆ ಆಗಿಲ್ಲ. ಆಗಲು ಸಾಧ್ಯವೂ ಇಲ್ಲ,
ಚುನಾವಣಾ ವಿಷಯವಾಗಿ ಚರ್ಚೆ ಆಯಿತು. ರಾಜ್ಯದಲ್ಲಿ ಚನಾವಣೆ ಎದುರಿಸಬೇಕಿದೆ, ಅದಕ್ಕಾಗಿ ಎಲ್ಲ ನಾಯಕರೂ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಬಾರಿಯ ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ಸೃಷ್ಟಗೆ ಬಿಡುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ಯೊಜನೆ ಮನೆ ಮನೆಗೆ ತಲುಪಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಚರ್ಚೆ ನಡೆಸಲಾಯಿತು..ʼʼ ಎಂದು ವಿಜಯೇಂದ್ರ ಹೇಳಿದರು.
ಕೆಲವರು ಪಕ್ಷ ತೊರೆಯುವ ಊಹಾಪೋಹದ ಚರ್ಚೆ ನಡೆಯುತ್ತಿದೆ. ಇದೆಲ್ಲದಕ್ಕೂ ಇತಿಶ್ರೀ ಹಾಡುವ ಕೆಲಸ ಮಾಡಲಾಗುತ್ತದೆ ಎಂದರು ವಿಜಯೇಂದ್ರ.
ವರುಣಾದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಬಗ್ಗೆ ಕೇಳಿದಾಗ, ʻʻಶಿಕಾರಿಪುರ ಕ್ಷೇತ್ರದ ಜನತೆ, ಮತದಾರರ ಅಭಿಪ್ರಾಯ ಮೇರೆಗೆ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೂ ಕೇಂದ್ರದ ನಿರ್ಧಾರಕ್ಕೆ ಈ ವಿಚಾರವನ್ನು ಬಿಡಲಾಗಿದೆʼʼ ಎಂದು ವಿಜಯೇಂದ್ರ ಹೇಳಿದರು.
ಸಚಿವ ವಿ. ಸೋಮಣ್ಣ ಅವರಿಗೆ ಚಾಮರಾಜನಗರದ ಚುನಾವಣಾ ಉಸ್ತುವಾರಿ ನೀಡಿರುವುದು, ಅಲ್ಲಿನ ಬಿಜೆಪಿ ನಾಯಕರು ವಿಜಯೇಂದ್ರ ಅವರೇ ಉಸ್ತುವಾರಿಯಾಗಿ ಬರಬೇಕು ಎಂದು ಆಗ್ರಹಿಸುತ್ತಿರುವ ಬಗ್ಗೆ ಗಮನ ಸೆಳೆದಾಗ, ʻʻಸೋಮಣ್ಣ ಅವರು ಹಿರಿಯರಿದ್ದಾರೆ, ಚಾಮರಾಜನಗರ ಉಸ್ತುವಾರಿಯೂ ಇದ್ದಾರೆ. ಅವರಿಗೆ ಅಲ್ಲಿಗೆ ಹೋಗಲು ಅಮಿತ್ ಶಾ ಹೇಳಿದ್ದರೆ ಅದಕ್ಕೆ ಕಾರಣ ಇರಲಿದೆʼʼ ಎಂದಿದ್ದಾರೆ ಬಿ.ವೈ ವಿಜಯೇಂದ್ರ.
ಇದನ್ನೂ ಓದಿ : Amit Shah Visit : ವಿಜಯೇಂದ್ರ ಹೆಗಲ ಮೇಲೆ ಕೈ, ಅವರಿಂದಲೇ ಹೂಗುಚ್ಛ ಸ್ವೀಕಾರ; ದೊಡ್ಡ ಸಂದೇಶ ರವಾನಿಸಿದ ಅಮಿತ್ ಶಾ