ಬೆಂಗಳೂರು: ದೆಹಲಿಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾ (Pawan Khera) ಅವರನ್ನು ಬಂಧಿಸಿರುವುದು ಖಂಡನೀಯ. ಇದು ಸಂಪೂರ್ಣವಾಗಿ ಸರ್ವಾಧಿಕಾರಿ ಧೋರಣೆಯಾಗಿದ್ದು, ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದು ಕೆಪಿಸಿಸಿ ವಕ್ತಾರ ಡಾ. ಶಂಕರ್ ಗುಹಾ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನಕ್ಕಾಗಿ ರಾಯಪುರಕ್ಕೆ ತೆರಳುತ್ತಿದ್ದ ಪವನ್ ಖೇರಾ ಅವರನ್ನು ವಿಮಾನದಿಂದ ಕೆಳಗೆ ಇಳಿಸಿದ್ದು, ಬಳಿಕ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿಗಳು ಸರ್ವೇಸಾಮಾನ್ಯ ಹಿಂದೆಯೂ ಕೂಡ ಹಲವಾರು ಕಡೆಗಳಲ್ಲಿ ಆಡಳಿತ ಪಕ್ಷದ ಪ್ರಧಾನಿಗಳನ್ನು ವಿರೋಧ ಪಕ್ಷದವರು ನಾನಾ ರೀತಿಯಲ್ಲಿ ಟೀಕಿಸಿದ್ದಾರೆ. ಆದರೆ ಈಗ ಏಕೆ ಈ ಟೀಕೆಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ? ದೇಶ ಎತ್ತ ಸಾಗುತ್ತಿದೆ? ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸರ್ವಾಧಿಕಾರಿ ವ್ಯವಸ್ಥೆಯತ್ತ ದೇಶ ಸಾಗುತ್ತಿದೆ ಎಂದು ಗುಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು “ಮೌನ ಮೋಹನ ಸಿಂಗ್” ಎಂದು ಹೇಳಿದ್ದರು. ಅದು ಈಗ ನೆನಪಿಲ್ಲವೇ? ಇಂದು ಸತತವಾಗಿ ರಾಹುಲ್ ಗಾಂಧಿಯವರನ್ನು ನಾನಾ ರೀತಿಯಲ್ಲಿ ಹೀಯಾಳಿಸುತ್ತಾ ಬರುತ್ತಿದ್ದಾರೆ. ಅವರ ಇಡೀ ವಂಶವನ್ನೇ ಬಿಜೆಪಿಯವರು ಮಾತಿನ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಪವನ್ ಖೇರಾ ಮಾಡಿದ ಒಂದು ಸಣ್ಣ ಟೀಕೆಯನ್ನು ಸಹಿಸಿಕೊಳ್ಳಲಾಗದೆ ಅವರನ್ನು ಬಂಧಿಸಿದ್ದೀರಿ. ಇದು ಪ್ರಜಾಪ್ರಭುತ್ವದ ಲಕ್ಷಣವೇ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೀಗೆ ಹತ್ತಿಕ್ಕಿದರೆ ವ್ಯವಸ್ಥೆ ಉಳಿಯುವುದಾದರೂ ಹೇಗೆ? ಟೀಕೆಯನ್ನು ಎದುರಿಸುವ ಸಾಮರ್ಥ್ಯ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ಗುಹಾ ಸಲಹೆ ನೀಡಿದ್ದಾರೆ.
ಜಗತ್ತಿನಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ನಮ್ಮದು. 140 ಕೋಟಿ ಜನರನ್ನು ಸಂಭಾಳಿಸಿಕೊಂಡು ಹೋಗಬೇಕಾದಾಗ ಒಬ್ಬರು ಹೇಳಿದ ಮಾತನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದ ಮೇಲೆ ದೇಶವನ್ನು ನಡೆಸುವುದು ಕಷ್ಟಸಾಧ್ಯವಾಗುತ್ತದೆ. ವ್ಯವಸ್ಥೆಯಲ್ಲಿ ತಮಗೊಂದು ನ್ಯಾಯ ಮತ್ತೊಬ್ಬರಿಗೆ ಇನ್ನೊಂದು ನ್ಯಾಯ ಎನ್ನುವುದು ಸರಿಯಲ್ಲ. ಎಂದು ಡಾ. ಶಂಕರ್ ಗುಹಾರ್ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ: Assembly session : ಮಹಿಳಾ ಕಾರ್ಮಿಕರ ಸಹಾಯಧನ 500ರಿಂದ 1000 ರೂ.ಗೆ ಹೆಚ್ಚಳ, ಸ್ಕೂಲ್ ಬಸ್ 1000ದಿಂದ 2000: ಸಿಎಂ
ಪವನ್ ಖೇರಾ ಏನು ಹೇಳಿದ್ದರು?
ಗೌತಮ್ ಅದಾನಿ ಷೇರು ಕುಸಿತಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪವನ್ ಖೇರಾ, ಗೌತಮ್ ಅದಾನಿಯವರನ್ನು ನರೇಂದ್ರ ಮೋದಿಯವರೇ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ನರೇಂದ್ರ ದಾಮೋದರ್ದಾಸ್ ಮೋದಿ ಅಲ್ಲ, ನರೇಂದ್ರ ಗೌತಮ್ದಾಸ್ ಮೋದಿ ಎಂದು ವ್ಯಂಗ್ಯ ಮಾಡಿದ್ದರು.