ಬೆಂಗಳೂರು: ಪೇಸಿಎಂ (Pay CM) ಅಭಿಯಾನಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್‌ನ ಮುಖ್ಯಸ್ಥರು ಸೇರಿದಂತೆ ನಾಲ್ವರು ಆರೋಪಿಗಳಿಗೆ ಸಿಸಿಬಿ ನೋಟಿಸ್ ನೀಡಿದೆ. ಅ.೨೫ಕ್ಕೆ ತಪ್ಪದೇ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಪೇಸಿಎಂ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಸೋಷಿಯಲ್ ಮೀಡಿಯಾಗಳಲ್ಲೂ ಪೋಸ್ಟರ್‌ಗಳನ್ನು ಪೋಸ್ಟ್ ಮಾಡಿದ್ದ ಕಾಳಕಯ್ಯ ಸ್ವಾಮಿ ಅಲಿಯಾಸ್ ಸಂಜಯ್, ಸಿದ್ದಯ್ಯ, ವಿನೋದ್ ಕುಮಾರ್ ಹಾಗೂ ಮದನ್ ಗೋಪಾಲ್‌ಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಆರೋಪಿಗಳಿಗೆ ಈ ಹಿಂದೆ ಅಕ್ಟೋಬರ್ 1 ರಂದು ಹಾಗೂ 10 ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಆರೋಪಿಗಳು ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 25ರಂದು ಬೆಳಗ್ಗೆ 10.30ಕ್ಕೆ ತನಿಖಾಧಿಕಾರಿಗಳ ಮುಂದೆ ತಪ್ಪದೇ ವಿಚಾರಣೆಗೆ ಹಾಜರಾಗಬೇಕು ಎಂದು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪ ಎದುರಿಸುತ್ತಿರುವ ನಾಲ್ವರು ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ | PayCM | ಪೇಸಿಎಂ ಪೋಸ್ಟರ್ ಅಂಟಿಸಿದ ಸಿದ್ದು, ಡಿಕೆಶಿ ವಿರುದ್ದ ಕಾನೂನು ಕ್ರಮ ಖಚಿತ ಎಂದ ಸಿಎಂ ಬೊಮ್ಮಾಯಿ
ಏನಿದು ಪ್ರಕರಣ?
ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ 40% ಕಮಿಷನ್ ಆರೋಪವನ್ನು ಬ್ರ್ಯಾಂಡ್ ಮಾಡುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಬಳಸಿ ಪೋಸ್ಟರ್‌ಗಳನ್ನು ಬೆಂಗಳೂರಿನ ವಿವಿಧೆಡೆ ಅಂಟಿಸಿತ್ತು. ಈ ಪೇಸಿಎಂ ಪೋಸ್ಟರ್‌ನಲ್ಲಿ ಕ್ಯೂಆರ್ ಕೋಡ್ ಸಹಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನೂ ಹಾಕಲಾಗಿತ್ತು. ಪೋಸ್ಟರ್‌ನಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಇತ್ತೀಚೆಗೆ ಕಾಂಗ್ರೆಸ್ ಆರಂಭಿಸಿದ್ದ ವೆಬ್‌ಸೈಟ್ ವಿಳಾಸಕ್ಕೆ ಕರೆದೊಯ್ಯುತ್ತದೆ. ಈ ಮೂಲಕ, ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಪ್ರಚಾರ ಮಾಡುತ್ತಿದೆ. ಇದು ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದಲ್ಲದೆ, ಕಾಂಗ್ರೆಸ್-ಬಿಜೆಪಿ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿತ್ತು.
ಇದಾದ ಬಳಿಕ ಹಲವಾರು ವಿಧಗಳಲ್ಲಿ ಪೋಸ್ಟರ್ ಸಿದ್ಧಗೊಂಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾಂಗ್ರೆಸ್‌ಗೆ ಪ್ರತಿಯಾಗಿ ಬಿಜೆಪಿ ಸಹ ಕೆಸಿಸಿ (KCC)- “ಕಂಗಾಲ ಕಾಂಗ್ರೆಸ್ ಕಂಪನಿ” ಎಂಬ ಪೋಷ್ಟರ್ ಅನ್ನು ಹರಿಬಿಟ್ಟಿತ್ತು. ಈ ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್‌ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಫೋಟೊವನ್ನು ಹಾಕಲಾಗಿತ್ತು. ಅಲ್ಲದೆ, “ಪೇ ಟು ಕಾಂಗ್ರೆಸ್ ಮೇಡಮ್” (PAY2 Congress Madam – KCC) ಎಂದು ಬರೆಯಲಾಗಿತ್ತು. ಇದೇ ರೀತಿ ಹೊಸ ಹೊಸ ಮಾದರಿಯಲ್ಲಿ ಪೋಸ್ಟರ್ ಅಭಿಯಾನಗಳು ಹುಟ್ಟಿಕೊಂಡಿವೆ.
ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿನಲ್ಲಿ ಮೊದಲು ಪ್ರಾರಂಭಗೊಂಡಿದ್ದ ಪೇಸಿಎಂ ಪೋಸ್ಟರ್ ಸಂಬಂಧ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್‌ನ ಕೆಲವರನ್ನು ಬಂಧಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ಆಕ್ರೋಶವನ್ನೂ ವ್ಯಕ್ತಪಡಿಸಿತ್ತು. ಬಳಿಕ ಈ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತಿತ್ತು. ಆದರೆ, ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವುದರಿಂದ ಸಿಸಿಬಿ ಅಧಿಕಾರಿಗಳು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ೨ ಬಾರಿ ನೋಟಿಸ್ ನೀಡಿದ್ದರು. ಅಷ್ಟಾದರೂ ಅವರು ಬಾರದೇ ಇದ್ದರಿಂದ ಅ. ೨೫ಕ್ಕೆ ಹಾಜರಿರಲೇಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ | PFI Plot | ರಾಮಮಂದಿರ ಸ್ಫೋಟಿಸಲು ಪಿಎಫ್‌ಐ ಸಂಚು, ರಾಜ್ಯದಲ್ಲಿ ಸಂಘಟನೆ ಮೇಲೆ ನಿಗಾ ಎಂದ ಬೊಮ್ಮಾಯಿ