ಬಳ್ಳಾರಿ: ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ತಮ್ಮನ್ನು ಪೆದ್ದ ಎಂದು ಗೇಲಿ ಮಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಸಾರಿಗೆ ಸಚಿವ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಾಚಾಮಗೋಚರವಾಗಿ ಬೈದಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿ ಕಾಂಗ್ರೆಸ್ ಸಮಾವೇಶ ಒಂದು ಸರ್ಕಸ್ ಕಂಪನಿ ರೀತಿಯಲ್ಲಿ ನಡೆಯಿತು. ಅದರಲ್ಲಿ ಸಿದ್ದರಾಮಯ್ಯ ಜೋಕರ್‌ನಂತೆ ಕಂಡರು, ಉತ್ತರ ಕುಮಾರನಂತೆ ಮಾತನಾಡಿದರು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಡಿದ ಅಭಿವೃದ್ಧಿ ವಿಚಾರಗಳನ್ನೆಲ್ಲ ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿದರು. ಇದು ಅವರ ಕೊನೆಯ ಚುನಾವಣೆ ಅವರೇ ಹೇಳಿದ್ದರು, ಅವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಮುಂದಿನ ಚುನಾವಣೆ ಅವರನ್ನು ಶಾಶ್ವತವಾಗಿ ಮನೆಗೆ ಕಳಿಸುವ ಚುನಾವಣೆಯಾಗಲಿದೆ ಎಂದರು ರಾಮುಲು.
ʻʻರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಶಕುನಿ ಇದ್ದಂತೆ. ಜೆಡಿಎಸ್ ನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಈಗ ಕಾಂಗ್ರೆಸ್‌ಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಮತ್ತು ದೇವೇಗೌಡರಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆʼʼ ಎಂದು ವಾಗ್ದಾಳಿ ನಡೆಸಿದರು ರಾಮುಲು.
ʻʻರಾಹುಲ್ ಗಾಂಧಿ ತರಹ ನಾನು ಪೆದ್ದನಲ್ಲ, ಸಿದ್ದರಾಮಯ್ಯ ಪೆದ್ದʼʼ ಎಂದು ಹೀಗಳೆದ ರಾಹುಲ್ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರನ್ನು ಜನರು ಸೋಲಿಸಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದವರು ಎಂದು ನೆನಪಿಸಿದರು.
ʻʻಸಿದ್ದರಾಮಯ್ಯ ಸಂಡೇ ಮಂಡೆ ವಕೀಲಿಗಿರಿ ಮಾಡಿದವರು. ಹೃದಯವಂತಿಕೆ ಮತ್ತು ಮನುಷ್ಯತ್ವದಲ್ಲಿ ರಾಮುಲುಗಿಂತ ಸಿದ್ದು ದೊಡ್ಡವರೇನಲ್ಲʼʼ ಎಂದು ಹೇಳಿದ ರಾಮುಲು, ʻಸಿದ್ದರಾಮಯ್ಯ ಅವರು ರಾಕ್ಷಸ ಥರ. ರಾಕ್ಷಸನಿಗೆ ಏನು ಬುದ್ಧಿ ಇದ್ದರೆ ಏನು ಪ್ರಯೋಜನ? ಅವರೊಬ್ಬ ಅವಕಾಶವಾದಿ, ಸ್ವಾರ್ಥಿ, ದುಷ್ಟ ರಾಜಕಾರಣಿʼʼ ಎಂದು ಅಬ್ಬರಿಸಿದರು.
ʻʻಸಿದ್ದರಾಮಯ್ಯವರೇ ನೀವೇನಾದರು ದೇಶಕ್ಕಾ ಹೋರಾಟ ಮಾಡಿದ್ದೀರಾ? ಅವರು ಮಾಡಿಲ್ಲ, ಇವರು ಮಾಡಿಲ್ಲ ಅಂತೀರಲ್ಲಾ.. ನೀವೇನು ಮಾಡಿದ್ದೀರಾ? ಜಾತಿಗಳ ಮಧ್ಯ ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಿ. ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಳಿದು ಪರಮೇಶ್ವರರನ್ನು ಸೋಲಿಸಿದರು. ಈಗ ಡಿಕೆಶಿ ಅವರ ರಾಜಕಾರಣ ಮುಗಿಸುವ ಕೆಲಸ ಮಾಡುತ್ತಿದ್ದಾರೆ, ಇದುವೇ ಶಕುನಿ ರಾಜಕಾರಣ ಅಲ್ವಾ?ʼʼ ಎಂದು ರಾಮುಲು ಪ್ರಶ್ನಿಸಿದರು.
ʻʻನಾನು ಅನ್ನ ಕೊಟ್ಟ ಮನೆಗೆ ಎರಡು ಬಗೆದಿಲ್ಲ, ನಾನು ನಿಯತ್ತಿನ ಮನುಷ್ಯ, ರಾಮುಲುನನ್ನು ಇಲ್ಲಿನ ಜನರು ಈವರೆಗೆ ಬಿಟ್ಟು ಕೊಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲʼʼ ಎಂದು ಹೇಳಿಕೊಂಡರು ರಾಮುಲು.
ʻʻಕಾಂಗ್ರೆಸ್‌ನವರಿಗೆ ನಿಯತ್ತಿಲ್ಲ. ಸೋನಿಯಾ ಗಾಂಧಿ ಗೆದ್ದ ಮೇಲೆ ಇಲ್ಲಿಗೆ ಬರಲಿಲ್ಲ. ಸುಷ್ಮಾ ಸ್ವರಾಜ್ ಸೋತರೂ ಟ್ರಾಮಾ ಕೇರ್ ಸೆಂಟರ್, ರೇಡಿಯೋ ಸ್ಟೇಷನ್ ಕೊಟ್ಟಿದ್ದಾರೆʼʼ ಎಂದು ನೆನಪಿಸಿದರು ರಾಮುಲು.
ʻʻSC ST ಮೀಸಲಾತಿ ಕೊಡುವಾಗ ಫೈಲ್ ಮುಚ್ಚಿಡುವ ಕೆಲಸ ಮಾಡಿದ್ದೀರಿ, ಇದನ್ನು ನಿಮ್ಮ ಆತ್ಮಸಾಕ್ಷಿಯಿಂದ ಒಪ್ಪಿಕೊಳ್ಳಿ. ನಾನು ನಿಮ್ಮಂತೆ ಬೋಗಸ್ ಪ್ಯಾಕೇಜ್ ಕೊಡುವ ವ್ಯಕ್ತಿಯಲ್ಲ. ನಾನು ಸಚಿವನಾಗಿ ಬಳ್ಳಾರಿಯಲ್ಲಿ ಕೆಲಸ ಮಾಡಿದ ದಾಖಲೆ ಇವೆʼʼ ಎಂದು ಹೇಳಿದರು.
ಚರ್ಚೆಗೆ ಯಾವಾಗಲೂ ರೆಡಿ
ʻʻಬಹಿರಂಗ ಚರ್ಚೆಗೆ ನಾನು ಯಾವಾಗಲೂ ಸಿದ್ಧ. ಸಮಯ ಮತ್ತು ದಿನಾಂಕವನ್ನು ನೀವೇ ಫಿಕ್ಸ್ ಮಾಡಿʼʼ ಎಂದು ರಾಮುಲು ಸವಾಲು ಹಾಕಿದರು. ʻʻಬಹಿರಂಗ ಸವಾಲಿಗೆ ಒಪ್ಪಿಕೊಳ್ಳುತ್ತೇನೆ, ಬಹಿರಂಗ ಸವಾಲಿಗೆ ಉಗ್ರಪ್ಪ ಅವರನ್ನು ಕಳಿಸುತ್ತೀರಾ, ಉಗ್ರಪ್ಪ ಅವರನ್ನು ಬಳ್ಳಾರಿ ಜನರು ಸೋಲಿಸಿ ಕಳಿಸಿದ್ದಾರೆʼʼ ಎಂದು ನೆನಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಮಾರುತಿ, ನಿಗಮ ಮಂಡಳಿ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಿಗೌಡ, ಮಾಜಿ ಸಂಸದೆ ಶಾಂತಾ, ಬಿಜೆಪಿ ಮುಖಂಡರಾದ ಗುರುಲಿಂಗನಗೌಡ, ಹನುಮಂತಪ್ಪ, ಪಾಲಣ್ಣ, ಓಬಳೇಶಿ, ಕೋನಂಕಿ ತಿಲಕ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ | Bharat Jodo | ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ; ಮೋದಿ, ಷಾ ಯಾವ ತ್ಯಾಗ ಮಾಡಿದ್ದಾರೆ: ಸಿದ್ದರಾಮಯ್ಯ ಪ್ರಶ್ನೆ