Site icon Vistara News

Bike Accident: ಶಿರಸಿಯಲ್ಲಿ ಬೈಕ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Sirsi Accident

ಶಿರಸಿ: ಬೈಕ್‌ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ವಿವೇಕಾನಂದ ನಗರದ ಬಳಿ ನಡೆದಿದೆ. ರಸ್ತೆ ದಾಟುತ್ತಿದ್ದ ವೇಳೆ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿದ್ದರಿಂದ ದುರಂತ ಸಂಭವಿಸಿದೆ.

ಕಸ್ತೂರ ಬಾ ನಗರದ ಕುಬೇರಪ್ಪ ರಾಮಪ್ಪ ಪೂಜಾರ್ (46) ಮೃತ ದುರ್ದೈವಿ. ತಲೆಗೆ ತೀವ್ರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಿರಸಿ‌ ನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case : ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬಂಧನಕ್ಕೆ ಆಗ್ರಹ

ದಾವಣಗೆರೆ: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬಂಧನಕ್ಕೆ ಆಗ್ರಹಿಸಿ ನಗರದ ಎಸ್‌ಪಿ ಕಚೇರಿ ಎದುರು ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಮಹಿಳೆ ಮೇಲೆ ಡಿಸೆಂಬರ್ 2ರಂದು ಅತ್ಯಾಚಾರ ಯತ್ನ ನಡೆದಿತ್ತು.

ಆರೋಪಿ ಉಪ್ಪಿನ ಕಾಯಿ ಕೇಳುವ ನೆಪದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಮಹಿಳೆ ಪ್ರತಿರೋಧ ತೋರಿದ್ದರಿಂದ ಆಕೆಯ ಕೆನ್ನೆಗೆ ಕಚ್ಚಿ ಖದೀಮ ಪರಾರಿಯಾಗಿದ್ದ. ಅತ್ಯಾಚಾರಕ್ಕೆ ಯತ್ನಿಸಿ‌ ತಲೆ ಮರೆಸಿಕೊಂಡ ಆರೋಪಿ ಮಂಜಪ್ಪ ಡಿ.ಎಚ್ (48) ಬಂಧನಕ್ಕೆ ಮಹಿಳೆಯರು ಒತ್ತಾಯಿಸಿದ್ದಾರೆ.

ಆರೋಪಿ ಪೋಟೊ ಹಿಡಿದು ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿ, ಎಸ್ಪಿ ಉಮಾ ಪ್ರಶಾಂತ್‌ಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಎಸ್‌ಪಿ, ಆದಷ್ಟು ಬೇಗ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದೆ.

ಇದನ್ನೂ ಓದಿ | Self Harm: ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಕಾರಣರಾದ ಸಾಕುಮಗಳು, ಪ್ರಿಯಕರ ಬಂಧನ

ನಾದಿನಿ ಜತೆ ಅನೈತಿಕ ಸಂಬಂಧ; ಹೆಂಡ್ತಿಗೆ ಗೊತ್ತಾಗಿದ್ದಕ್ಕೆ ಇಬ್ಬರೂ ನೇಣಿಗೆ ಶರಣು

ಹುಬ್ಬಳ್ಳಿ: ಇತ್ತೀಚೆಗೆ ಅನೈತಿಕ ಸಂಬಂಧಗಳು (Illicit relationship) ಹೆಚ್ಚಾಗುತ್ತಿದೆ. ಕೆಲವೊಮ್ಮೆ ಅನೈತಿಕ ಸಂಬಂಧಕ್ಕೆ ಹತ್ಯೆಗಳು ನಡೆದಿವೆ. ಸದ್ಯ ಅನೈತಿಕ ಸಂಬಂಧವು ಬಹಿರಂಗವಾಗಿದ್ದಕ್ಕೆ ಮನನೊಂದ ಜೋಡಿಯೊಂದು ಆತ್ಮಹತ್ಯೆ (Self harm) ಮಾಡಿದೆ. ಲೋಕೇಶ್ ಮತ್ತು ಶಾಂತಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟವರು.

ನಿನ್ನೆ ಭಾನುವಾರ ಲೋಕೇಶ್‌ ಹಾಗೂ ಶಾಂತಾ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದರು. ಈ ವೇಳೆ ಆಟೋ ಡ್ರೈವರ್‌ ಮಾರುತಿ ಎಂಬುವವರನ್ನು ಪರಿಚಯ ಮಾಡಿಕೊಂಡು, ರಾತ್ರಿ ಅವರ ಮನೆಯಲ್ಲೇ ತಂಗಿದ್ದಾರೆ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ವೇಲಿನಿಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು.

ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೊದಮೊದಲು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯನ್ನು ನೀಡಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಇದೊಂದು ಅನೈತಿಕ ಸಂಬಂಧಕ್ಕೆ ನಡೆದ ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Wild boar attack : ರೈತನ ಬಲಿ ಪಡೆದ ಕಾಡುಹಂದಿಯನ್ನು ಹೊಡೆದು ಕೊಂದ ಜನ!

ಲೋಕೇಶ್ ತನ್ನ ಪತ್ನಿ ಪಾರ್ವತಿ ಅವರ ತಂಗಿ ಶಾಂತಾ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಕದ್ದು ಮುಚ್ಚಿ ಆಗಾಗ ಇವರಿಬ್ಬರು ಒಟ್ಟಾಗಿ ಸೇರುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಅನೈತಿಕ ಸಂಬಂಧವು ಪತ್ನಿ ಪಾರ್ವತಿಗೆ ಗೊತ್ತಾಗಿದೆ. ಇದರಿಂದ ಆತಂಕಗೊಂಡ ಇವರಿಬ್ಬರು ನೇರವಾಗಿ ಹುಬ್ಬಳ್ಳಿಗೆ ಬಂದಿದ್ದಾರೆ. ಅಲ್ಲಿ ಆಟೋ ಡ್ರೈವರ್ ಮಾರುತಿ ಅವರನ್ನು ಪರಿಚಯ ಮಾಡಿಕೊಂಡಿದ್ದಾರೆ. ಪ್ರೇಮಿಗಳಿರಬೇಕೆಂದು ಭಾವಿಸಿ ಒಂದೇ ಭಾಷೆಯಲ್ಲಿ ಮಾತಾನಾಡುತ್ತಿದ್ದ ಕಾರಣಕ್ಕೆ ಮಾರುತಿ ತಮ್ಮ ಮನೆಯಲ್ಲಿ ತಂಗಲು ಅವಕಾಶ ಮಾಡಿಕೊಟ್ಟಿದ್ದಾರೆ.

ಆದರೆ ಆತ್ಮಹತ್ಯೆಗೂ ಮುನ್ನ ಲೋಕೇಶ್‌ ಹಾಗೂ ಶಾಂತಾ ಸೆಲ್ಫೀ ವಿಡಿಯೊ ಮಾಡಿದ್ದಾರೆ. ವಿಡಿಯೋದಲ್ಲಿ ಆಟೋ ಚಾಲಕ ಮಾರುತಿಗೆ ಕ್ಷಮೆ ಕೇಳಿದ್ದಾರೆ. ತಮ್ಮ ಸಾವಿಗೆ ತಾವೇ ಕಾರಣ, ಬೇರ‍್ಯಾರು ಅಲ್ಲ. ನಮ್ಮ ನಂಬಿ ತಂಗಲು ಜಾಗ ಕೊಟ್ಟ ಆಟೋ ಚಾಲಕ ಮಾರುತಿ ಅವರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದೇವೆ. ಇದೀಗ ಅವರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೀವೆ ಎಂದಿದ್ದಾರೆ.

ಹುಬ್ಬಳ್ಳಿಗೆ ಮೃತರ ಸಂಬಂಧಿಗಳು ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಟೋ ಚಾಲಕ ಹಾಗೂ ಲೋಕೇಶ್ ಪತ್ನಿ ಪಾರ್ವತಿಯನ್ನು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಲಿಂಕ್‌ ಕ್ಲಿಕ್‌ ಮಾಡಿ

Exit mobile version