Site icon Vistara News

Prajwal Revanna Case: ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ; ತೀರ್ಪು ಕಾಯ್ದಿರಿಸಿದ ಕೋರ್ಟ್, ಕೆಲವೇ ಕ್ಷಣಗಳಲ್ಲಿ ಆದೇಶ

HD Revanna

Prajwal Revanna Case: HD Revanna Arrested, What Will Happen Next?

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ಲೈಂಗಿಕ ಹಗರಣದಲ್ಲಿ (Physical Abuse) ಮೊದಲನೇ ಆರೋಪಿಯಾಗಿರುವ (A 1) ಜೆಡಿಎಸ್‌ ನಾಯಕ ಎಚ್‌.ಡಿ ರೇವಣ್ಣ (HD Revanna) ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಕೆಲ ಕಾಲ ಮುಂದೂಡಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರಬೀಳಲಿದೆ.

ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಕೆ.ಆರ್.‌ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆ ನಡೆಸಿತು, ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತು.

ಎಚ್.ಡಿ.ರೇವಣ್ಣ ಪರವಾಗಿ ವಾದ ಮಂಡಿಸಿದ ವಕೀಲ ಮೂರ್ತಿ ಡಿ. ನಾಯಕ್, “ಪ್ರಕರಣವನ್ನು ಎಸ್‌ಐಟಿ ಅನಗತ್ಯವಾಗಿ ವಿಜೃಂಭಿಸುತ್ತಿದೆ. ಸಿಆರ್‌ಪಿಸಿ 41 ಎ ಅಡಿಯಲ್ಲಿ ನೋಟಿಸ್‌ ನೀಡಿದ್ದು, ಶನಿವಾರ (ಏಪ್ರಿಲ್‌ 4) ಸಂಜೆಯೇ ಎಚ್‌.ಡಿ.ರೇವಣ್ಣ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ. ಹಾಗಾಗಿ, ಎಚ್‌.ಡಿ.ರೇವಣ್ಣ ಅವರಿಗೆ ಜಾಮೀನು ನೀಡಬೇಕು” ಎಂದು ಕೋರ್ಟ್‌ಗೆ ಮನವಿ ಮಾಡಿದರು. ‌

ಎಸ್‌ಐಟಿ ಪರ ಎಸ್‌ಪಿಪಿ ಬಿ.ಎನ್‌. ಜಗದೀಶ್‌ ವಾದ ಮಂಡಿಸಿದರು. “ಎಚ್‌.ಡಿ.ರೇವಣ್ಣ ಅವರು ಪ್ರಭಾವಿಯಾಗಿದ್ದು, ಅವರಿಗೆ ಜಾಮೀನು ಸಿಕ್ಕರೆ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ, ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಅವರಿಗೆ ಜಾಮೀನು ನೀಡಬಾರದು” ಎಂದರು. ಇನ್ನು. ವಿಶೇಷ ತನಿಖಾ ತಂಡ ಹಾಗೂ ಪೊಲೀಸರ ಯಾವ ನೋಟಕ್ಕೂ ಸಿಗದೇ ಗುಪ್ತ ಸ್ಥಳಕ್ಕೆ ತೆರಳಿದ್ದು, ಎರಡು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ‌

“ಸಂತ್ರಸ್ತೆಯ ರಕ್ಷಣೆಯು ನಮ್ಮ ಮೊದಲ ಆದ್ಯತೆಯಾಗಿದೆ. ಅವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಇದೇ ಕಾರಣದಿಂದಾಗಿ ಕ್ಯಾಮೆರಾ ಎದುರಿನಲ್ಲಿಯೇ ವಿಚಾರಣೆ ನಡಸಬೇಕು ಎಂದು ಮನವಿ ಮಾಡಿದ್ದೇವೆ. ಸಂತ್ರಸ್ತೆಯ ವಿಡಿಯೊಗಳು ಹರಿದಾಡಿವೆ. ಸಂತ್ರಸ್ತೆಗೆ ಏನಾಗಿದೆ ಎಂಬುದರ ಕುರಿತು ಆತಂಕ ಎದುರಾಗಿದೆ. ಸುಮಾರು 2 ಸಾವಿರಕ್ಕೂ ಅಧಿಕ ವಿಡಿಯೊ ಇವೆ ಎನ್ನಲಾಗುತ್ತಿದೆ. ಒಬ್ಬ ಮಹಿಳೆಯ ಕಿಡ್ನ್ಯಾಪ್‌ ಆಗಿದೆ. ಆಕೆಯ ಸುರಕ್ಷತೆಯು ಪ್ರಮುಖವಾಗಿದೆ. ಸಂತ್ರಸ್ತ ಮಹಿಳೆಯು ದೂರು ನೀಡದಂತೆ ತಡೆಯಲು ಅಪಹರಣ ಮಾಡಿರುವ ಸಾಧ್ಯತೆ ಇದೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ” ಎಂದು ತಿಳಿಸಿದರು.

ಅಜ್ಞಾತ ಸ್ಥಳದಲ್ಲಿ ರೇವಣ್ಣ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ರೇವಣ್ಣಗೆ ಎಸ್ಐಟಿ ಮೂರು ನೋಟಿಸ್ ಹಾಗೂ ಕೊನೆಗೆ ಲುಕೌಟ್ ನೋಟಿಸ್ ಜಾರಿ ಮಾಡಿದ್ದು, ರೇವಣ್ಣ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ರೇವಣ್ಣ ಅವರು ವಿದೇಶಕ್ಕೆ ಹಾರಬಹುದು ಎಂಬ ಮುಂದಾಲೋಚನೆಯಿಂದ ಲುಕೌಟ್‌ ನೋಟೀಸ್‌ ಜಾರಿ ಮಾಡಲಾಗಿದ್ದು, ಈಗ ಅವರು ಯಾವುದೇ ಏರ್‌ಪೋರ್ಟ್‌ ಮೂಲಕ ಹಾದು ಹೋಗಲು ಸಾಧ್ಯವಿಲ್ಲದಾಗಿದೆ.

ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇನ್ನೊಂದೆಡೆ ಭವಾನಿ ರೇವಣ್ಣ ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್‌ ನೀಡಿದೆ. ಸದ್ಯ ರೇವಣ್ಣ ವಿರುದ್ಧ ತನಿಖೆಗೆ ಒಳಗಾಗಬೇಕಾದ ಗಂಭೀರ ಆರೋಪವಿದೆ. ಮೈಸೂರಿನಲ್ಲಿ ಸಂತ್ರಸ್ತೆಯ ಪುತ್ರ ರೇವಣ್ಣ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದಾರೆ. ಹೀಗಾಗಿ ರೇವಣ್ಣಗೆ ಎಸ್ಐಟಿ ಮುಂದೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರು ಅತ್ತ ಎಚ್.ಡಿ ದೇವೇಗೌಡರ ನಿವಾಸದಲ್ಲಿಯಾಗಲೀ, ಈತ್ತ ಬಸವನಗುಡಿಯ ತಮ್ಮ ನಿವಾಸದಲ್ಲಿಯಾಗಲೀ, ಹಾಸನದ ಎರಡು ನಿವಾಸಗಳಲ್ಲಾಗಲೀ ಇಲ್ಲ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

Exit mobile version