ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಕಾಮಕೇಳಿಯ ವಿಡಿಯೊಗಳು ಬಹಿರಂಗವಾದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಪೆನ್‌ಡ್ರೈವ್ ಪ್ರಕರಣವು (Pen Drive Case) ಕರ್ನಾಟಕದಲ್ಲಿ (Karnataka) ಜೆಡಿಎಸ್ ಹಾಗೂ ಬಿಜೆಪಿಗೆ ಮುಜುಗರ ತಂದರೆ, ಕಾಂಗ್ರೆಸ್‌ಗೆ ಅಸ್ತ್ರವಾಗಿದೆ. ಇದರ ಬೆನ್ನಲ್ಲೇ, ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿ ಅಜ್ಞಾತವಾಸ ಅನುಭವಿಸುತ್ತಿದ್ದರೆ, ವಿಡಿಯೊ, ಫೋಟೊಗಳು ಎಲ್ಲೆಡೆ ಹರಡಲು ಕಾರಣರಾದ ಮಾಜಿ ಚಾಲಕ ಕಾರ್ತಿಕ್ ಮಲೇಷ್ಯಾದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಅಜ್ಞಾತಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿ, ಕೆಲ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲ್ಲೇ, “ಕಾರ್ತಿಕ್‌ನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು” ಎಂಬುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದರೊಂದಿಗೆ ಕಾರ್ತಿಕ್ ಮಲೇಷ್ಯಾಗೆ ತೆರಳಿದ್ದು ದೃಢಪಟ್ಟಿದ್ದು, ಕಾರು ಚಾಲಕನೊಬ್ಬ ಮಲೇಷ್ಯಾದಲ್ಲಿ ಕಾಲ ಕಳೆಯುವುದು, ಅಲ್ಲಿಯೇ ಹಾಲಿಡೇಸ್ ಎಂಜಾಯ್ ಮಾಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಮೂಡಿವೆ.
ಪ್ರಜ್ವಲ್ ರೇವಣ್ಣ ಲೈಂಗಿಕ ಶೋಷಣೆ ಮಾಡಿರುವ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಇನ್ನು ಸಾವಿರಾರು ಅಶ್ಲೀಲ ವಿಡಿಯೊಗಳಿರುವ ಪೆನ್‌ಡ್ರೈವ್ ಎಲ್ಲೆಂದರಲ್ಲಿ ಸಿಕ್ಕಿರುವುದು ಹಲವು ಅನುಮಾನ ಮೂಡಿಸಿವೆ. ಇದರ ಮಧ್ಯೆಯೇ, ಜರ್ಮನಿಗೆ ತೆರಳಿರುವ ಪ್ರಜ್ವಲ್ ರೇವಣ್ಣ, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗದೆ, ಭಾರತಕ್ಕೆ ವಾಪಸಾಗದೆ ಅಲ್ಲಿಯೇ ಅವರು ತಲೆಮರೆಸಿಕೊಂಡಿದ್ದರೆ, ಅವರ ಕಾರು ಓಡಿಸಿಕೊಂಡಿದ್ದ ಕಾರ್ತಿಕ್ ಮಲೇಷ್ಯಾದಲ್ಲಿ ಮಜಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಈಗ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಕಾರ್ತಿಕ್ ಬಗ್ಗೆ ಎಚ್‌ಡಿಕೆ ಸಿಡಿಮಿಡಿ
ಬೆಂಗಳೂರಿನ ಪದ್ಮನಾಭನಗರದ ನಿವಾಸದ ಗೇಟ್ ಮುಂಭಾಗದಲ್ಲಿ ಪ್ರಕರಣದ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗರಂ ಆದರು. ಪದೇಪದೇ ಏನು ಕೇಳುತ್ತೀರಿ, ನಿಮಗೆ ಏನು ಕೆಲಸ, ಇಲ್ಲಿ ಯಾಕೆ ಬಂದಿದ್ದೀರಾ? ಸುದ್ದಿ ಬಿಡುವವರ ಜತೆ ಹೋಗಿ ಎಂದು ಕಿಡಿಕಾರಿದರು. ನಿನ್ನೆ ಡ್ರೈವರ್ ಒಬ್ಬ ವಿಡಿಯೋ ಮಾಡಿ ಹೇಳಿದನಲ್ಲಾ? ಯಾರು ಆ ವಿಡಿಯೊ ಮಾಡಿದ್ದು? ಇಲ್ಲಿ ಚಿಲ್ಲರೆ ಅಣ್ಣ ತಮ್ಮ ಇದ್ದಾರಲ್ಲವೇ? ಅವರು ಏನ್ ಹೇಳಿದರು? ಕುಮಾರಸ್ವಾಮಿ ಬಿಟ್ಟಿದ್ದು ಎನ್ನುತ್ತಾರೆ. ಡ್ರೈವರ್ ಕಾರ್ತಿಕ್ ಎಲ್ಲಿದ್ದಾನೆ ಈಗ? ಮಲೇಷ್ಯಾದಲ್ಲಿ ಇದಾನೆ, ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದರು.
ಆ ಡ್ರೈವರ್ ಕಾರ್ತಿಕ್ ಏನು ಹೇಳಿಕೆ ಕೊಟ್ಟಾ? ದೇವರಾಜೇಗೌಡ ಕೈಯಲ್ಲಿ ಪೆನ್ ಡ್ರೈವ್ ಕೊಟ್ಟಿದ್ದೆ ಅಂತ ಹೇಳಿದ್ದ. ಇಂದು ಬೆಳಗ್ಗೆ ಈ ಚಿಲ್ಲರೆ ಅಣ್ಣ ತಮ್ಮ ಇದಾರಲ್ವಾ (ಡಿಕೆಶಿ ಹಾಗೂ ಡಿ.ಕೆ ಸುರೇಶ್), ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿಯನ್ನು ಈ ಮೊದಲು ದೇವರಾಜೇಗೌಡ ಭೇಟಿಯಾಗಿದ್ದ ಎಂದು ಈ 420ಗಳು ಹೇಳಿದ್ದಾರೆ. ಹಾಗಾದರೆ ಎಲ್ಲಿದ್ದಾನೆ ಈ ಕಾರ್ತಿಕ್? ಯಾರು ಕಳುಹಿಸಿದರು? ಎಲ್ಲಿಂದ ವಿಡಿಯೋ ಮಾಡಿ ಬಿಟ್ಟದ್ದಾನೆ, ಅದನ್ನು ಮೊದಲು ತಿಳಿದುಕೊಳ್ಳಿ. ನನ್ನ ಕೆಣಕಿದ್ದಾರೆ, ಸುಮ್ಮನೆ ಬಿಡಲ್ಲ ನಾನು ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್ ರೇವಣ್ಣ ಕೇಸ್ ಸದ್ದು!