Site icon Vistara News

Poll boycott: ಈಡೇರದ ಸೇತುವೆ ಭರವಸೆ; ಮತ ಹಾಕದೆ ಶ್ರಮದಾನದ ಮೂಲಕ ಕಾಲು ಸಂಕ ಕಟ್ಟಿದ ಗ್ರಾಮಸ್ಥರು

foot bridge

foot bridge

ಸುಬ್ರಹ್ಮಣ್ಯ: ಚುನಾವಣೆಗಳು (Karnataka Election 2023) ಬಂದಾಗ ಜನರು ಬಹುಕಾಲದಿಂದ ಬಾಕಿ ಉಳಿದಿರುವ ತಮ್ಮ ಊರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮತ ಬಹಿಷ್ಕಾರದ ನಿರ್ಧಾರ ತೆಗೆದುಕೊಳ್ಳುವುದು ಕೆಲವೆಡೆ ನಡೆದಿದೆ. ಆದರೆ, ಅಂತಿಮ ಹಂತದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಗಳು ಅವರನ್ನು ಮನವೊಲಿಸಿ ಮತ ಹಾಕಿಸುತ್ತಾರೆ. ಆದರೆ, ಇಲ್ಲಿನ ಒಂದು ಊರಿನ ಜನ ಅಂಥ ಯಾವುದೇ ಆಮಿಷಗಳಿಗೆ ಒಳಗಾಗದೆ, ಮನವಿಗೂ ಜಗ್ಗದೆ ತಮ್ಮ ಬಹಿಷ್ಕಾರ (Poll boycott) ಮುಂದುವರಿಸಿದ್ದಾರೆ. ಜತೆಗೆ ತಮ್ಮ ಊರಿನ ಪ್ರಮುಖ ಬೇಡಿಕೆಯಾದ ಸೇತುವೆ ನಿರ್ಮಾಣದ ಕಾಮಗಾರಿಯಲ್ಲಿ ತೊಡಗಿಸಿಕೊಂಡು ಶ್ರಮದಾನ ಮಾಡಿದರು.

ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರ್ ಎಂಬಲ್ಲಿ ಸೇತುವೆ ನಿರ್ಮಿಸುವಂತೆ ಬಹುವರ್ಷದಿಂದ ಜನ ಕೆಳಿಕೊಳ್ಳುತ್ತಿದ್ದಾರೆ. ಆದರೆ, ಪ್ರತಿ ಬಾರಿಯೂ ಅವರಿಗೆ ಮೋಸವೇ ಆಗುತ್ತಿದೆ. ಹೀಗಾಗಿ ಸಿಟ್ಟುಗೊಂಡ ಅವರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೇ, ಹೊಳೆಗೆ ಮರದ ಸಂಕ ನಿರ್ಮಿಸಲು ಶ್ರಮದಾನ ಮಾಡಿದರು.

ಕಡಬ ತಾಲೂಕಿನ ಕುಜುಂಬಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ಬೇಡಿಕೆ, ಮನವಿ ಸಲ್ಲಿಸಿದ್ದರೂ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಇಲ್ಲಿನ ಜನ ಸೇತುವೆ ನಿರ್ಮಿಸದ ಹಿನ್ನಲೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರದೊಂದಿಗೆ ಬ್ಯಾನರ್ ಅಳವಡಿಸಿದ್ದರು. ಈ ವೇಳೆ ಸ್ಥಳೀಯ ಅಧಿಕಾರಿಗಳು ಆಗಮಿಸಿ ಜನರ ಮನವೊಲಿಸಿದ್ದರು. ಸೇತುವೆ ನಿರ್ಮಿಸದಿದ್ದಲ್ಲಿ ಮತದಾನ ಬಹಿಷ್ಕಾರ ಎಂಬ ನಿರ್ಧಾರಕ್ಕೂ ಅಂದೇ ಬಂದಿದ್ದರು.

ಆದರೂ ಸೇತುವೆ ನಿರ್ಮಿಸುವ ಬಗ್ಗೆ ಯಾವುದೇ ಭರವಸೆ ನೀಡದ ಹಿನ್ನಲೆಯಲ್ಲಿ ಕುಜುಂಬಾರು ಪರಿಸರದ ಸುಮಾರು 30 ಮನೆಗಳ 80ಕ್ಕೂ ಅಧಿಕ ಜನರು ಮತ ಚಲಾಯಿಸಿಲ್ಲ. ಬದಲಿಗೆ, ಹೊಳೆಗೆ ಸಂಪರ್ಕ ಕಲ್ಪಿಸುವ ಪಾಲ ನಿರ್ಮಾಣದಲ್ಲಿ ಶ್ರಮಸೇವೆ ನಡೆಸಿ ಸಂಬಂಧಿಸಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಲವು ವರ್ಷಗಳಿಂದ ಬೇಡಿಕೆ ಇರಿಸಿದ್ದೇವೆ. ಆದರೂ ಸ್ಪಂದಿಸುತ್ತಿಲ್ಲ, ಭರವಸೆ ನೀಡಿ ಕೈತೊಳೆದುಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ. ಇಂದು ವಿಧಾನ ಸಭಾ ಚುನಾವಣೆ ಬಹಿಷ್ಕರಿಸಿದ್ದೇವೆ. ಮುಂದೆಯೂ ಸೇತುವೆ ಆಗದಿದ್ದರೆ ಲೋಕಸಭಾ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಘೋಷಿಸಿದ್ದಾರೆ. ನಿಮ್ಮ ಓಟು ನಮಗೆ ಅಗತ್ಯವಿಲ್ಲ ಎಂಬ ಮಾತನ್ನೂ ನಾವು ಕೇಳಬೇಕಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Election 2023: ಚುನಾವಣೆ ದಿನ ಮತದಾನ ಬಹಿಷ್ಕಾರದ ಕೂಗು; NO Work NO Vote ಎಂದ ಜನ

Exit mobile version