Site icon Vistara News

ಯಾರು ಭಾರತ್ ಜೋಡೊ ಮಾಡಿದ್ದಾರೆ, ಯಾರು ತೋಡೊ ಮಾಡಿದ್ದಾರೆ ಜನರಿಗೆ ತಿಳಿದಿದೆ: ಸಿಎಂ ಬೊಮ್ಮಾಯಿ

CM BOmmai in haveri

ಹಾವೇರಿ: ಯಾರು ಭಾರತ್ ಜೋಡೊ ಮಾಡಿದ್ದಾರೆ, ಯಾರು ತೋಡೊ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಮೈದಾನದ ಹೆಲಿಪ್ಯಾಡ್‍ಗೆ ಬಂದಿಳಿದ ಸಮಯದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ್ ಜೋಡೋ ಫ್ಲೆಕ್ಸ್‌ಗಳನ್ನು ಹರಿದುಹಾಕಿರುವ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ,
ಡಿ.ಕೆ. ಶಿವಕುಮಾರ್ ಏನಾದರೂ ಹೇಳಲಿ. ಯಾರೇ ಫ್ಲೆಕ್ಸ್ ಹಾಕಬೇಕಾದರೂ ಅನುಮತಿ ಪಡೆಯಬೇಕು. ಯಾವುದೇ ರಾಜಕೀಯ ಪಕ್ಷದ ಫ್ಲೆಕ್ಸ್ ಹರಿಯುವ ಅವಶ್ಯಕತೆ ಬಿಜೆಪಿಗೆ ಇಲ್ಲ. ಯಾರು ಭಾರತ್‌ ಜೋಡಿ ಮಾಡಿದರು, ಯಾರು ಭಾರತ್‌ ತೋಡೊ ಮಾಡಿದರು ಎನ್ನುವುದು ಎಲ್ಲ ಜನರಿಗೂ ಗೊತ್ತಿದೆ ಎಂದರು.

ಎಸ್.ಡಿ.ಪಿ.ಐ ಬಗ್ಗೆ ಈಗಲೇ ನಿರ್ಧಾರವಿಲ್ಲ

ಪಿಎಫ್‌ಐ ನಿಷೇಧಿಸಲಾಗಿದೆ. ಎಸ್.ಡಿ.ಪಿ.ಐ ಭಾರತ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಪಕ್ಷ. ಇದರ ನಿಷೇಧದ ಬಗ್ಗೆ ಯಾವುದೇ ನಿರ್ಧಾರ ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ. ಬರುವ ದಿನಗಳ ಬೆಳವಣಿಗೆಯ ಆಧಾರದ ಮೇಲೆ ಕ್ರಮ ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಿಎಂ ಬೊಮ್ಮಾಯಿ ಉತ್ತರಿಸಿದ್ದಾರೆ.

ಪಿಎಫ್‌ಐ ನಿಷೇಧ ರಾಜಕೀಯ ಸ್ಟಂಟ್ ಹಾಗೂ ಚುನಾವಣಾ ಗಿಮಿಕ್ ಎಂದಿರುವ ಬಿ.ಕೆ. ಹರಿಪ್ರಸಾದ್ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, ಅವರಿಗೆ ಬೇರೇನು ವ್ಯಾಖ್ಯಾನ ಮಾಡಲು ಸಾಧ್ಯ. ಇಷ್ಟು ವರ್ಷ ವಿಧ್ವಂಸಕ ಕೃತ್ಯಗಳು ನಮ್ಮೆದುರಿಗೆ ನಡೆದಿದೆ. ಕೊಲೆ, ಭಯೋತ್ಪಾದನೆ ಚಟುವಟಿಗೆ ಬೆಂಬಲ ನೀಡಿದ್ದಾರೆ. ಸಂಘಟನೆಯನ್ನು ನಿಷೇಧಿಸಿ ಎಂದು ಇದೇ ಕಾಂಗ್ರೆಸ್ ಪಕ್ಷದವರು ವಿಧಾನ ಸಭೆ ಒಳಹೊರಗೆ ಹೇಳುತ್ತಿದ್ದವರು, ಈಗ ಗಿಮಿಕ್ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಹರಿಪ್ರಸಾದ್ ಯೋಚಿಸಬೇಕು ಎಂದರು.

ಸಾಹಿತಿಗಳು ಎರಡೂ ಕಡೆ ಇದ್ದಾರೆ
ಭಾರತ್ ಜೋಡೋ ಕಾರ್ಯಕ್ರಮಕ್ಕೆ ಸಾಹಿತಿಗಳ ಬೆಂಬಲ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಸಾಹಿತಿಗಳು ಎರಡೂ ಕಡೆ ಇದ್ದಾರೆ. ಹಾಗಾಗಿ ಕೆಲವರು ಅಲ್ಲಿ, ಕೆಲವರು ಇಲ್ಲಿ ಬೆಂಬಲ ನೀಡುತ್ತಾರೆ ಎಂದರು. ನವೆಂಬರ್‌ನಲ್ಲಿ ನಡೆಯಲಿರುವ ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ಸಿದ್ಧತೆಗಳೂ ನಡೆಯುತ್ತಿವೆ. ಅದ್ದೂರಿಯಾಗಿ ಸಮ್ಮೇಳನ ಮಾಡಿ ತೀರುತ್ತೇವೆ ಎಂದರು.

ಸಚಿವರಾದ ಶಿವರಾಂ ಹೆಬ್ಬಾರ್, ಬಿ.ಸಿ. ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ನೆಹರೂ ಓಲೇಕಾರ್, ಮಾಜಿ ಶಾಸಕ ಮಹಿಮಾ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | Sahitya Sammelana | ಈ ಬಾರಿ ಅದ್ಧೂರಿ ಕನ್ನಡ ಸಾಹಿತ್ಯ ಸಮ್ಮೇಳನ; ಸಿಎಂ ಬೊಮ್ಮಾಯಿ ಘೋಷಣೆ

Exit mobile version