ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ (Mysore News) ನಂಜನಗೂಡು ಕ್ಷೇತ್ರದ ಗ್ರಾಮವೊಂದರಲ್ಲಿ ಮತ ಯಾಚನೆಗೆ ತೆರಳಿದ್ದ ಬಿಜೆಪಿ ಶಾಸಕ ಬಿ. ಹರ್ಷವರ್ಧನ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಶಾಸಕರಾಗಿ ಆಯ್ಕೆಯಾದ 5 ವರ್ಷಗಳ ಬಳಿಕ ನಮ್ಮ ಊರು ನೆನಪಾಯಿತೇ?, ನಿಮ್ಮ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಶಾಸಕರ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಶ್ರೀ ಗುರುಮಲ್ಲೇಶ್ವರ ಮಠಕ್ಕೆ ಸೋಮವಾರ ಭೇಟಿದ ಬಳಿಕ ಮತಯಾಚನೆಗೆ ಶಾಸಕ ತೆರಳಿದ್ದರು. ಈ ವೇಳೆ 100ಕ್ಕೂ ಹೆಚ್ಚು ಗ್ರಾಮಸ್ಥರು ಶಾಸಕರನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡರು. ನಿಮ್ಮ ಅವಧಿಯಲ್ಲಿ ದೇವನೂರು ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಮಠದ ಬೀದಿ ದೀಪ ಸರಿಪಡಿಸಲು ನಿಮ್ಮಿಂದ ಆಗಿಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯ ಕೂಡ ಕಲ್ಪಿಸಿಲ್ಲ. ಶಾಸಕರೇ ನಿಮ್ಮ ಶ್ವೇತಪತ್ರ ಯಾಕೆ ಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Karnataka Congress: ನಮಗೂ ಡಬಲ್ ಇಂಜಿನ್ ಕೊಡಿ ಎಂದ ಡಾ. ಜಿ. ಪರಮೇಶ್ವರ್: ಹೈಕಮಾಂಡ್ ಅಂಗಳಕ್ಕೆ ಚೆಂಡು
ಮನೆ ಮನೆ ಮತಯಾಚನೆಗೆ ತೆರಳಿದ್ದ ವೇಳೆ ಶಾಸಕ ಹರ್ಷವರ್ಧನ್, ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ್, ನಗರಸಭೆ ಅಧ್ಯಕ್ಷ ಮಹದೇವಸ್ವಾಮಿ ಅವರಿಗೂ ಛೀಮಾರಿ ಹಾಕಲಾಗಿದೆ. ಇದರಿಂದ ಬಿಜೆಪಿ ಶಾಸಕ ಪ್ರಚಾರವನ್ನು ಅರ್ಧದಲ್ಲೇ ಕೈಬಿಟ್ಟು ಹಿಂದಿರುಗಿದ್ದಾರೆ.
ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತಂದಿದ್ದಕ್ಕೆ ಎಚ್. ವಿಶ್ವನಾಥ್ ಪಶ್ಚಾತಾಪ ಸತ್ಯಾಗ್ರಹ
ಮೈಸೂರು: ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತಂದಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ಬರಲು ನಾನು ಕಾರಣವಾಗಿದ್ದಕ್ಕೆ ನನಗೆ ಅತೀವ ನೋವಿದೆ. ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂದು ತಿಳಿಸಿರುವ ಎಂಎಲ್‌ಸಿ ಎಚ್. ವಿಶ್ವನಾಥ್, ನ್ಯಾಯಾಲಯದ ಮುಂಭಾಗ ಸೋಮವಾರ ಪಶ್ಚತ್ತಾಪ ಸತ್ಯಾಗ್ರಹ ನಡೆಸಿದರು.
ಡಬಲ್ ಎಂಜಿನ್ ಸರ್ಕಾರ ಇದ್ದರೆ ರಾಜ್ಯಕ್ಕೆ ಒಳಿತೆಂದು ಬಿಜೆಪಿ ಸರ್ಕಾರ ತಂದೆವು. ಆದರೆ, ಬಿಜೆಪಿ ಸರ್ಕಾರ ಪರಮ ಭ್ರಷ್ಟ ಸರ್ಕಾರವಾಗಿದೆ. ಇಂತಹ ಸರ್ಕಾರ ಬರಲು ನಾನು ಕಾರಣವಾಗಿದ್ದಕ್ಕೆ ನನಗೆ ಅತೀವ ನೋವಿದೆ.
ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಪಾಪದ ಹೊರೆ ಇಳಿಸಿಕೊಳ್ಳಲು ಪಶ್ಚಾತಾಪ ಸತ್ಯಾಗ್ರಹ ಮಾಡುತ್ತಿದ್ದೇನೆ. ನಾನು ಬಿಜೆಪಿ ಪಕ್ಷದಿಂದ ವಿಧಾನ ಪರಿಷತ್ತು ಸದಸ್ಯನಾಗಿಲ್ಲ. ಸಾಹಿತ್ಯ ಕೋಟಾದಲ್ಲಿ ಎಂಎಲ್‌ಸಿ ಆಗಿದ್ದೇನೆ. ಈ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಬೆಂಬಲಿಸುತ್ತಿದ್ದೇನೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾತಿಗೆ ಬೆಲೆಕೊಟ್ಜು ನಾನು ಜೆಡಿಎಸ್ ಸೇರ್ಪಡೆಯಾದೆ. ಜೆಡಿಎಸ್ ಶಾಸಕನಾಗಿದ್ದ ನನ್ನನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ರಾಕ್ಷಸ ಸರ್ಕಾರ ನಡೆಯುತ್ತಿದೆ ಎಂದು ಮನವರಿಕೆಯಾಯಿತು. ಅದು ಹೊಂದಾಣಿಕೆ ಇಲ್ಲದ ಮೈತ್ರಿ ಸರ್ಕಾರವಾಗಿತ್ತು. ರಾಜ್ಯಕ್ಕೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಖಾತ್ರಿಯಾದಾಗ ಮತ್ತೊಂದು ಹೆಜ್ಜೆಯನ್ನು ಅನಿವಾರ್ಯವಾಗಿ ಇಡಬೇಕಾಯಿತು. ನನಗೆ ಮಂತ್ರಿಗಿರಿ ಸಿಗದ ಕಾರಣದಿಂದ ನಾನು ಜೆಡಿಎಸ್ ತೊರೆಯಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದುದರಿಂದ, ರಾಜ್ಯದಲ್ಲೂ ಅದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಳಿತು ಎಂದುಕೊಂಡೆ. ಸಮಾನ ಮನಸ್ಕರೊಡನೆ ಸೇರಿ ಚರ್ಚಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಇದನ್ನೂ ಓದಿ | SC ST Reservation: ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಗೊಂದಲ ನಿರ್ಮಿಸಿದೆ: ಸಿದ್ದರಾಮಯ್ಯ
ಡಬಲ್ ಎಂಜಿನ್ ಸರ್ಕಾರದ ಚಿಂತನೆ ನಮ್ಮದಾಗಿತ್ತು. ಅದರಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುವ ಕನಸು ಕಂಡಿದ್ದೆ. ಆದರೆ ಅದೆಲ್ಲವೂ ನುಚ್ಚುನೂರಾದವು. ಇದೊಂದು ಐತಿಹಾಸಿಕ ಪರಮ ಭಷ್ಟ ಸರ್ಕಾರವೆಂಬ ಟೀಕೆಗೆ ಗುರಿಯಾಯಿತು. ಇದರಿಂದ ನನಗೆ ಪಶ್ಚಾತ್ತಾಪ ಕಾಡುತ್ತಿದೆ. ಹೇ ವಿಶ್ವನಾಥ್, ನೀನೇಕೆ ಇಂತಹ ತಪ್ಪು ಮಾಡಿದೆ ಎಂದು ನನ್ನ ಅಂತರಾತ್ಮ ನನ್ನನ್ನು ತಿವಿಯುತ್ತಲೇ ಇದೆ. ಈ ಪಾಪಪ್ರಜ್ಞೆ ನನ್ನನ್ನು ಕೊನೆತನಕವೂ ಕಾಡುತ್ತಲೇ ಇರುತ್ತದೆ.
ಹೀಗಾಗಿ ಈ ಪಾಪದ ಹೊರೆಯನ್ನು ಇಳಿಸಿಕೊಳ್ಳಲೇಬೇಕಾದ ಜರೂರತ್ತು ನನ್ನ ಮುಂದಿದೆ. ಇದೇ ಕಾರಣದಿಂದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರಾಯಶ್ಚಿತ್ತ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದು ತಿಳಿಸಿದರು.