ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಬಿ-ರಿಪೋರ್ಟ್‌ನ್ನು ಮರುಪರಿಶೀಲನೆ ನಡೆಸುವಂತೆ ಜನಪ್ರತಿನಿಧಿ ನ್ಯಾಯಾಲಯ ಆದೇಶ ನೀಡುವುದರೊಂದಿಗೆ ಈ ಪ್ರಕರಣ ಮರು ಜೀವ ಪಡೆದುಕೊಂಡಿದೆ. ಇದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಅವರಿಗೆ ಸಂಕಷ್ಟ ತರುವ ಸಾಧ್ಯತೆ ಕಂಡುಬಂದಿದೆ.
ಗುತ್ತಿಗೆದಾರರಾಗಿದ್ದ ಸಂತೋಷ್ ಪಾಟೀಲ್ ಅವರು ಕೆ.ಎಸ್. ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರಸ್ತೆ ಕಾಮಗಾರಿ ನಡೆಸಿದ್ದರ ಬಿಲ್ ಪಾವತಿ ಮಾಡಿಲ್ಲ, ಬಿಲ್ ಪಾವತಿಗೆ ಕಮಿಷನ್ ಕೊಡಬೇಕು ಎಂದು ಸಚಿವ ಆಪ್ತರು ಒತ್ತಾಯಿಸಿದರು. ಹಣ ಕೊಡಲಾಗದೆ, ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂತೋಷ್ ಪಾಟೀಲ್ ವಾಟ್ಸ್ ಆಪ್ ಮೂಲಕ ಗೆಳೆಯರಿಗೆ ಸಂದೇಶ ರವಾನಿಸಿದ್ದರು. ಇದನ್ನೇ ಆತ್ಮಹತ್ಯಾ ಟಿಪ್ಪಣಿ ಎಂದು ಪರಿಗಣಿಸಿ ಪೊಲೀಸರು ತನಿಖೆ ನಡೆಸಿದ್ದರು.
ಮೊದಲು ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದ್ದರಿಂದ ಅವರು ತಮ್ಮ ಸಚಿವ ಹುದ್ದೆಗೆ ರಾಜೀನಾಮೆ ಕೂಡಾ ನೀಡಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಬಿ-ರಿಪೋರ್ಟ್ ಸಲ್ಲಿಸಿದ್ದರು. ಆಗ ಕೆ.ಎಸ್. ಈಶ್ವರಪ್ಪ ಅವರು ಸಂಭ್ರಮಾಚರಣೆ ಮಾಡಿದ್ದರು ಮತ್ತು ಆ ಬಳಿಕ ಕ್ಲೀನ್ ಚಿಟ್ ಸಿಕ್ಕಿರುವ ಪ್ರಯುಕ್ತ ತಮ್ಮನ್ನು ಸಚಿವ ಸಂಪುಟಕ್ಕೆ ಮರಳಿ ತೆಗೆದುಕೊಳ್ಳಬೇಕು ಎಂದು ದೊಡ್ಡ ಹೋರಾಟವನ್ನೇ ನಡೆಸಿದರು. ವಿಧಾನಸಭಾ ಅಧಿವೇಶನಕ್ಕೂ ಬಾರದೆ ಅಸಹಕಾರವನ್ನು ತೋರಿದ್ದರು.
ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದ ವೇಳೆ ಇದೇ ಕಾರಣಕ್ಕಾಗಿ ತಾನು ಸದನಕ್ಕೆ ಬರುತ್ತಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿ ಸರಕಾರದ ಮೇಲೆ ಒತ್ತಡ ಹೇರಿದ್ದರು. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರನ್ನು ಕರೆಸಿಕೊಂಡು ಮಂತ್ರಿ ಮಾಡುವ ಭರವಸೆಯನ್ನು ನೀಡಿದ್ದರು.
ಈ ನಡುವೆ ಪ್ರಕರಣ ಮತ್ತೆ ಎದ್ದು ನಿಂತಿದೆ. ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್ ಪ್ರಶ್ನಿಸಿ ಸಂತೋಷ್ ಪಾಟೀಲ್ ಪತ್ನಿ ಕೋರ್ಟ್ ಮೊರೆ ಹೊಕ್ಕಿದ್ದರು. ಈಗ ಕೋರ್ಟ್ ವರದಿಯನ್ನು ಮತ್ತೆ ಮರು ಪರಿಶೀಲನೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಜತೆಗೆ ಪೊಲೀಸ್ ತನಿಖೆ ವೇಳೆ ಮಾಡಿದ ವಿಡಿಯೋ ಕೋರ್ಟ್ ಗೆ ಸಲ್ಲಿಸುವಂತೆ ಸೂಚನೆ ನೀಡಿದೆ. ಈ ವಿದ್ಯಮಾನ ಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿದ್ದ ಈಶ್ವರಪ್ಪ ಅವರಿಗೆ ಶಾಕ್ ನೀಡಿದೆ.
ಯಾರಿಗೆಲ್ಲ ಕಮಿಷನ್: ವಾಟ್ಸ್ ಆಪ್ ಸಂದೇಶ!
ಈ ನಡುವೆ ಕಾಮಗಾರಿಯ ಬಿಲ್ ಪಾವತಿಗೆ ಸಂಬಂಧಿಸಿ ಸಂತೋಷ್ ಪಾಟೀಲ್ ಅವರು ಯಾರಿಗೆಲ್ಲ ಕಮಿಷನ್ ನೀಡಿದ್ದರು ಎಂಬ ಬಗ್ಗೆ ಅವರು ವಾಟ್ಸ್ ಆಪ್‌ನಲ್ಲಿ ಕಳುಹಿಸಿದ್ದ ಸಂದೇಶವೂ ಭಾರಿ ಚರ್ಚೆಗೆ ಕಾರಣವಾಗಿದೆ.
ಸಿವಿಲ್ ವರ್ಕ್ ಮಾಡಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನೋಲ್ಕರ್ ಜೊತೆ ನಡೆಸಿದ ಚಾಟ್‌ನಲ್ಲಿ ಈ ಉಲ್ಲೇಖಗಳನ್ನು ಮಾಡಲಾಗಿದೆ. ಪೊಲೀಸರು ಕೋರ್ಟ್‌ಗೆ ಕೊಟ್ಟ ಬಿ ರಿಪೋರ್ಟ್‌ನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಜೊತೆಗಿನ ಚಾಟ್ ಉಲ್ಲೇಖವಿದೆ ಎನ್ನಲಾಗಿದೆ.
ಸಚಿವ ಈಶ್ವರಪ್ಪ ಅವರ ಪಿಎಗೆ 25 ಸಾವಿರ, ಬಿಲ್ ಕಮಿಷನ್ ಅಂತ 4.15 ಲಕ್ಷ ರೂ ಕೊಟ್ಟಿರುವುದಾಗಿ ಚಾಟ್‌ನಲ್ಲಿ ಹೇಳಲಾಗಿದೆ. ಮಹಾಂತೇಶ ಶಾಸ್ತ್ರೀ ಎಂಬುವವರು ಈ ಚಾಟ್ ಬಗ್ಗೆ ವಿವರ ನೀಡಿದ್ದನ್ನು ಬಿ ರಿಪೋರ್ಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಮಂತ್ರಿ ಸ್ಥಾನ ತಪ್ಪಿಸಲು ಇದೆಲ್ಲ ಪ್ರಯತ್ನ ಎಂದ ಈಶ್ವರಪ್ಪ
ಜನಪ್ರತಿನಿಧಿ ನ್ಯಾಯಾಲಯದಲ್ಲಿ ಸಾಕ್ಷ್ಯಧಾರ ಕೇಳಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಈಶ್ವರಪ್ಪ ಅವರು, ಯಾರೋ ಏನೋ 25 ಸಾವಿರ ಕೊಟ್ಟೆ, ಇವರಿಗೆ ಕೊಟ್ಟೆ ಅನ್ನೋದಕ್ಕೆ ನಾನು ಪ್ರತಿಕ್ರಿಯಿಸಲ್ಲ. ತನಿಖೆ ವೇಳೆ ಏನೇನು ಕೊಡಬೇಕಾಗಿತ್ತೋ ಅವೆಲ್ಲಾ ಕೊಡಬಹುದಿತ್ತು ಎಂದಿದ್ದಾರೆ.
ʻʻಇದರಲ್ಲೂ ರಾಜಕಾರಣ ಮಾಡಲಾಗುತ್ತಿದೆ. ಯಾರೋ ಈ ಬಗ್ಗೆ ಪ್ರೇರಣೆ ಕೊಡ್ತಿದ್ದಾರೆ. ಈ ರೀತಿ ಮಾಡಿದರೆ, ಬಿಜೆಪಿ, ಈಶ್ವರಪ್ಪಗೆ ಕೆಟ್ಟ ಹೆಸರು ಬರುತ್ತೆ ಅಂಥ ಯಾರೋ ಈ ರೀತಿ ಆಟವಾಡಿಸುತ್ತಿದ್ದಾರೆ. ಇಂತಹ ಆಟಗಳಿಗೆ ನಾನೆಂದೂ ಬಗ್ಗಲ್ಲ. ಕ್ಲೀನ್ ಚಿಟ್ ಕೊಟ್ಟಾಗಿದೆʼʼ ಎಂದು ಹೇಳಿದ್ದಾರೆ. ಮಂತ್ರಿ ಸ್ಥಾನ ಸಿಗುವುದನ್ನು ತಪ್ಪಿಸಲು ಇದೆಲ್ಲ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.