ಬೆಳಗಾವಿ: ಹಿಂಡಲಗಾ ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ (Union Minister Nitin Gadkari) ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ (Life threat case) ಹೊಸ ಟ್ವಿಸ್ಟ್ ಸಿಕ್ಕಿದೆ. ಅವರ ಬೆದರಿಕೆ ಹಿಂದೆ ಲಷ್ಕರ್ ಇ ತೋಯ್ಬಾ ಸಂಘಟನೆಯ (Lashkar-e-Taiba) ಉಗ್ರನ ಪ್ರಚೋದನೆ ಇದೆಯೇ ಎಂಬ ಸಂಶಯ ಈಗ ಮೂಡಿದೆ. ಈ ನಿಟ್ಟಿನಲ್ಲಿ ತನಿಖೆ ಶುರುವಾಗಿದ್ದು, ಲಷ್ಕರ್ ಇ ತೋಯ್ಬಾ ಸಂಘಟನೆ ಜತೆಗೆ ನಂಟು ಹೊಂದಿದ್ದ ಅಫ್ಸರ್ ಪಾಷ (Afsar Pasha) ಎಂಬಾತನನ್ನು ಎನ್‌ಐಎ (National Investigation Agency) ವಶಕ್ಕೆ ಪಡೆದುಕೊಂಡಿದೆ.
ಹಿಂಡಲಗಾ ಜೈಲಿನಿಂದ ಮುಂಬೈಗೆ ಅಫ್ಸರ್ ಪಾಷನನ್ನು ಎನ್ಐಎ ಅಧಿಕಾರಿಗಳು (NIA Officers) ಕರೆದೊಯ್ದಿದ್ದಾರೆ. ಬೆಳಗಾವಿಯಿಂದ ಮುಂಬೈವರೆಗೆ ರಸ್ತೆ ಮಾರ್ಗವಾಗಿ ಆರೋಪಿಯನ್ನು ಎನ್ಐಎ ಅಧಿಕಾರಿಗಳು ಕರೆದೊಯ್ದರು. ಅಲ್ಲದೆ, ಶನಿವಾರ (ಜುಲೈ 15) ಇಡೀ ದಿನ ಅಫ್ಸರ್ ಪಾಷನನ್ನು ತೀವ್ರ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ: Weather Report : ಕರಾವಳಿಯಲ್ಲಿಂದು ಬಿರುಮಳೆ; ಬೆಂಗಳೂರಿಗೆ ವರುಣನಿಂದ ಅಲ್ಪ ವಿರಾಮ
ಬಳಿಕ ಮಹಾರಾಷ್ಟ್ರದ ನಾಗ್ಪುರ ಪೊಲೀಸರಿಗೆ (Nagpur Police) ಅಫ್ಸರ್ ಪಾಷನನ್ನು ಹಸ್ತಾಂತರಿಸಲಾಗಿದೆ. ವಿಶೇಷ ವಿಮಾನದ ಮೂಲಕ ಅಫ್ಸರ್ ಪಾಷನನ್ನು ಪೊಲೀಸರು ಕರೆದೊಯ್ದರು. ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಜತೆ ನಂಟು ಹೊಂದಿರುವ ಆರೋಪದಡಿ ಅಫ್ಸರ್ ಪಾಷ ಬಂಧಿತನಾಗಿದ್ದು, ಆತನ ತೀವ್ರ ವಿಚಾರಣೆ ನಡೆಯುತ್ತಿದೆ. ಸದ್ಯ ಆತ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ (Belagavi Hindalaga Jail) ಶಿಕ್ಷೆ ಅನುಭವಿಸುತ್ತಿದ್ದಾನೆ.
ಜಯೇಶ್ ಪೂಜಾರಿಗೆ ಪ್ರಚೋದನೆ?
ಹಣಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಹಿಂಡಲಗಾ ಜೈಲಿನಿಂದಲೇ ಅಪರಾಧಿ ಜಯೇಶ್ ಪೂಜಾರಿ (Jayesh Poojari) ಜೀವ ಬೆದರಿಕೆ ಹಾಕಿದ್ದ. ಈತ ಮೂರ್ನಾಲ್ಕು ಬಾರಿ ಹೀಗೆ ಮಾಡಿದ್ದರಿಂದ ಗಂಭೀರವಾಗಿ ಪರಿಗಣಿಸಿದ ನಾಗ್ಪುರ ಪೊಲೀಸರು ಜಯೇಶ್ ಪೂಜಾರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆಗ ಆತ ಅಫ್ಸರ್ ಪಾಷ ಹೆಸರನ್ನು ಬಾಯಿ ಬಿಟ್ಟಿದ್ದ. ಅಲ್ಲದೆ, ಈ ರೀತಿ ಜೀವ ಬೆದರಿಕೆ ಹಾಕುವಂತೆ ಆತನೇ ಪ್ರಚೋದನೆ ನೀಡಿದ್ದಾನೆ ಎಂದು ತಿಳಿಸಿದ್ದ.
ಈ ಅಫ್ಸರ್ ಪಾಷನಿಗೆ ಲಷ್ಕರ್ ಇ ತೋಯ್ಬಾ ಸಂಘಟನೆ ಜತೆಗೆ ನಂಟು ಇದೆ. ಹೀಗಾಗಿ ಜಯೇಶ್ ಪೂಜಾರಿ ನೀಡಿದ ಮಾಹಿತಿ ಆಧರಿಸಿ ಅಫ್ಸರ್ ಪಾಷನನ್ನು ಈಗ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Indira Canteen : ಸಂಬಳ ನೀಡದ್ದಕ್ಕೆ ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದ ಸಿಬ್ಬಂದಿ!
10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಜಯೇಶ್ ಪೂಜಾರಿ!
ಜನವರಿ 14ರಂದು ನಿತಿನ್ ಗಡ್ಕರಿ ಕಚೇರಿಗೆ ಜೀವ ಬೆದರಿಕೆ ಕರೆ ಮಾಡಿದ್ದ ಜಯೇಶ್ ಪೂಜಾರಿ 10 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಮಹಾರಾಷ್ಟ್ರದ ನಾಗ್ಪುರದ ನಿತಿನ್ ಗಡ್ಕರಿ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಜಯೇಶ್ ಹಿಂಡಲಗಾ ಜೈಲಿನಿಂದಲೇ ಕರೆ ಮಾಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ತನಿಖೆ ನಡೆಸಿದ್ದರು. ಈಗ ಇದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.