ಬಳ್ಳಾರಿ: ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ (Petrol Diesel Price Hike) ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ (Karnataka Government) ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ ಸಿದ್ದರಾಮಯ್ಯ ಹೀಗೆ ಜನರಿಂದಲೇ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸ್ಪಷ್ಟನೆ ನೀಡಿದ್ದಾರೆ. “ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 60 ಸಾವಿರ ಕೋಟಿ ರೂ. ಬೇಕು. ಸಂಪನ್ಮೂಲಗಳ ಕ್ರೋಡೀಕರಣವಾಗಬೇಕು” ಎಂದು ಹೇಳಿದ್ದಾರೆ.
ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜ್ಯದ ಅಭಿವೃದ್ಧಿಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆಯನ್ನು 100ರ ಗಡಿ ದಾಟಿಸಿತು. ಆದರೆ, ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದಕ್ಕೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದೀರಿ. ಪ್ರತಿಪಕ್ಷದವರು ಏನಾದರೂ ಹೇಳಿಕೊಳ್ಳಲಿ. ರಾಜ್ಯದ ಅಭಿವೃದ್ಧಿಗಾಗಿ ನಾವು ತೈಲ ಬೆಲೆಯನ್ನು ಏರಿಕೆ ಮಾಡಿದ್ದೇವೆ” ಎಂದು ತಿಳಿಸಿದರು.
“ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಪೆಟ್ರೋಲ್ ಬೆಲೆ ಎಷ್ಟಿತ್ತು? ಮನಮೋಹನ್ ಸಿಂಗ್ ಅವಧಿಯಲ್ಲಿ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆಯು 113 ಡಾಲರ್ ಇತ್ತು. ಆಗಲೂ ಪೆಟ್ರೋಲ್ ಬೆಲೆ 72 ರೂ. ಇತ್ತು. ಆದರೆ, ಮೋದಿ ಪ್ರಧಾನಿಯಾದ ಬಳಿಕ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ 59 ಡಾಲರ್ ಇದ್ದಾಗಲೂ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿತು. ಆಗೆಲ್ಲ ಸುಮ್ಮನಿದ್ದ ಬಿಜೆಪಿಯವರು ಈಗ ಹೋರಾಟ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಒಂದು ವರ್ಷಕ್ಕೆ 60 ಸಾವಿರ ಕೋಟಿ ರೂ. ಕೊಡಬೇಕು. ಸಂಪನ್ಮೂಲಗಳ ಸಂಗ್ರಹದ ಜತೆಗೆ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಇಷ್ಟೆಲ್ಲ ಮಾತನಾಡುವ ಬಿಜೆಪಿಯವರು, ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಿ ಎಂದು ಹೇಳುತ್ತಾರಾ? ಬಿಜೆಪಿಯವರು ಮಾತನಾಡಿದರೆ, ವಸ್ತುಸ್ಥಿತಿ ಮೇಲೆ ಮಾತನಾಡಬೇಕು” ಎಂದರು. ಬಸ್ ಟಿಕೆಟ್ ದರ ಏರಿಕೆ ಕುರಿತ ಪ್ರಶ್ನೆಗೆ, ಈ ಕುರಿತು ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Petrol Diesel Price Hike: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವ್ಯಾಪಕ ಪ್ರತಿಭಟನೆ; ಎತ್ತಿನಗಾಡಿ, ಹೆಣ ಮೆರವಣಿಗೆ