Site icon Vistara News

Shivamogga News: ಪೆಟ್ರೋಲ್ ಟ್ಯಾಂಕರ್ ಪಲ್ಟಿ; 29 ಸಾವಿರ ಲೀಟರ್ ಪೆಟ್ರೋಲ್ ಮಣ್ಣುಪಾಲು

Petrol tanker overturns in shivamogga

Petrol tanker overturns in shivamogga

ರಿಪ್ಪನ್ ಪೇಟೆ (ಶಿವಮೊಗ್ಗ): ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸುಮಾರು 29 ಸಾವಿರ ಲೀಟರ್ ಪೆಟ್ರೋಲ್ ಸೋರಿಕೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರು ಪಟ್ಟಣದ ಬಳಿ ನಡೆದಿದೆ. ಅದೃಷ್ಟವಶಾತ್‌ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನಿಂದ ಶಿವಮೊಗ್ಗದತ್ತ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್‌ ಬಿದನೂರು ಪಟ್ಟಣದ ಶಾಂತಿಕೆರೆ ಸರ್ಕಲ್‌ನ ತಿರುವಿನಲ್ಲಿ ಪಲ್ಟಿಯಾಗಿದೆ. ಇದರಿಂದ ಒಂದೂವರೆ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಬಳಿಕ ಪೊಲೀಸರು, ಅಗ್ನಿಶಾಮಕದಳದ ಸಿಬ್ಭಂದಿ ಧಾವಿಸಿ ಮುನ್ನೆಚ್ಚರಿಕಾ ಕ್ರಮ ವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ | Murder Case: ಅಡ್ಡಾದಿಡ್ಡಿ ಇಂಡಿಕೇಟರ್‌ ಹಾಕಿಕೊಂಡು ಸಾಗುತ್ತಿದ್ದ ಕಾರು; ಪ್ರಶ್ನಿಸಿದ ಯುವಕನ ಮರ್ಡರ್‌

ಅಪಘಾತದಲ್ಲಿ ಟ್ಯಾಂಕರ್ ಚಾಲಕನ ಕೈಗೆ ಪೆಟ್ಟಾಗಿದ್ದು, ಆತನಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕ್ಲಿನರ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಭದ್ರಾ ಡ್ಯಾಂ ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಮೂವರ ಪೈಕಿ ಇಬ್ಬರ ಮೃತದೇಹ ಪತ್ತೆ

ಶಿವಮೊಗ್ಗ: ಜಿಲ್ಲೆಯ ಗಡಿಭಾಗದ ಭದ್ರಾ ಡ್ಯಾಂ ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಮೂವರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ, ಮತ್ತೊಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಶಿವಮೊಗ್ಗ-ಚಿಕ್ಕಮಗಳೂರು ಗಡಿಯಲ್ಲಿನ ಭದ್ರಾ ಡ್ಯಾಂ ಕಾಲುವೆಯಲ್ಲಿ ಭಾನುವಾರ ಆಟವಾಡುತ್ತಿದ್ದ ವೇಳೆ ಅನನ್ಯಾ (19), ಶಾಮವೇಣಿ (ಐಶಾ) (17) ಹಾಗೂ ರವಿ (28) ಎಂಬುವವರು ಆಯತಪ್ಪಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. ಈ ಪೈಕಿ ಅನನ್ಯ ಹಾಗೂ ರವಿಯ ಮೃತ ದೇಹ ಪತ್ತೆಯಾಗಿದೆ. ಆದರೆ, ಶಾಮವೇಣಿ ಮೃತದೇಹಕ್ಕಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ | Bangalore Rain: ಕುಟುಂಬಸ್ಥರಿಗೆ ಭಾನುರೇಖಾ ಮೃತದೇಹ ಹಸ್ತಾಂತರ; ವಿಜಯವಾಡಕ್ಕೆ ರವಾನೆ

ಅಂದಹಾಗೆ ಲಕ್ಕವಳ್ಳಿಯ ನಿವಾಸಿ ರವಿ ಎಂಬುವವರ ಮನೆಗೆ ನಂಜನಗೂಡಿನಿಂದ ಈ ಮೂವರು ಬೇಸಿಗೆ ರಜೆಗೆಂದು ಆಗಮಿಸಿದ್ದರು. ಇವರೆಲ್ಲಾ ಅಣೆಕಟ್ಟು ನೋಡಲು ತೆರಳಿದ್ದರು. ಮೊದಲಿಗೆ ಕಾಲುವೆಯಲ್ಲಿ ಆಟವಾಡುವಾಗ ಅನನ್ಯಾ ಆಯತಪ್ಪಿ ಬಿದ್ದಿದ್ದಾಳೆ. ಈ ವೇಳೆ ಆಕೆಯನ್ನು ರಕ್ಷಿಸಲು ಶಾಮವೇಣಿ ಮುಂದಾಗಿದ್ದಳು. ಆದರೆ, ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗುತ್ತಿದ್ದರು. ಇವರನ್ನು ರಕ್ಷಿಸುವ ಸಲುವಾಗಿ ರವಿ ಮುಂದಾಗಿದ್ದು, ಈತ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದ. ಘಟನೆಯಲ್ಲಿ ಮೂವರೂ ಮುಳುಗಿ ನಾಪತ್ತೆಯಾಗಿದ್ದರು. ಇವರಲ್ಲಿ ಭಾನುವಾರ ರಾತ್ರಿಯೇ ಅನನ್ಯಾ (19) ಶವ ಪತ್ತೆಯಾಗಿತ್ತು, ಸೋಮವಾರ ರವಿ ಮೃತದೇಹ ಪತ್ತೆಯಾಗಿದೆ. ಶಾಮ ವೇಣಿ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Exit mobile version