ಬೆಂಗಳೂರು: ಪಿಎಫ್‌ಐ ನಿಷೇಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಪಿಎಫ್‌ಐ ಪ್ರಬಲವಾಗಿರುವ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬ್ಯಾನ್ ಬಳಿಕ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ವಿಚಾರದಲ್ಲಿ ಕೇಂದ್ರ ಸರಕಾರದಿಂದ ಈಗಾಗಲೇ ರಾಜ್ಯ ಸರಕಾರಕ್ಕೆ ಮಾಹಿತಿ ಬಂದಿದ್ದು, ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ʻʻಕೇಂದ್ರ ಸರ್ಕಾರದ ಆದೇಶಗಳು ಬಂದಿದೆ. ರಾಜ್ಯ ಸರ್ಕಾರ ಕೂಡ ಪೂರಕವಾದ ಆದೇಶ ಹೊರಡಿಸುತ್ತದೆ. ಯಾವ್ಯಾವ ರೀತಿ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬುದರ ಬಗೆಗೂ ತೀರ್ಮಾನ ತೆಗೆದುಕೊಳ್ಳುತ್ತೇವೆʼʼ ಎಂದು ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಮಾಡುವಂತೆ ಕಮಿಷನರ್ ಪ್ರತಾಪ್ ರೆಡ್ಡಿ ಅವರು, ಎಲ್ಲಾ ಡಿಸಿಪಿ, ACP, ಇನ್ಸ್ಪೆಕ್ಟರ್ ಗಳಿಗೆ ಸೂಚನೆ ಕೊಟ್ಟಿದ್ದಾರೆ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಯ್ಸಳ ವಾಹನ ಮುಖಾಂತರ ರೌಂಡ್ಸ್ ಮಾಡುವಂತೆ ಸೂಚಿಸಿದ್ದಾರೆ. ಹೆಚ್ಚು ಜನರು ಗುಂಪು ಸೇರದಂತೆ ಅಧಿಕಾರಿಗಳು ನಿಗಾ ಇಡುವಂತೆ ಪ್ರತಾಪ್ ರೆಡ್ಡಿ ಸೂಚಿಸಿದ್ದಾರೆ.
ಪಿಎಫ್‌ಐ ಕಚೇರಿಗೆ ಭದ್ರತೆ
ಎಸ್ ಕೆ ಗಾರ್ಡನ್ ಪ್ರದೇಶದಲ್ಲಿರುವ ಪಿಎಫ್‌ಐ ಪ್ರಧಾನ ಕಚೇರಿ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಜೆ.ಸಿ. ನಗರ ಎಸಿಪಿ ಮನೋಜ್ ಕುಮಾರ್ ಮತ್ತು ತಂಡ ಭದ್ರತೆಯನ್ನು ನೋಡಿಕೊಳ್ಳುತ್ತಿದೆ. ಪಿಎಫ್ ಕಚೇರಿ ರಸ್ತೆಯಲ್ಲಿ ಯಾವುದೇ ವಾಹನಗಳನ್ನು ಬಿಡಲಾಗುತ್ತಿಲ್ಲ. ಯಾರಿಗೂ ಗುಂಪುಗೂಡಲು ಅವಕಾಶ ನೀಡುತ್ತಿಲ್ಲ.
ಮುಸ್ಲಿಮರು ಬಹುಸಂಖ್ಯಾತರಾಗಿರುವ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಬ್ಯಾಟರಾಯನಪುರ, ಪುಲಕೇಶಿ ನಗರ, ಶಿವಾಜಿ ನಗರ, ಜೆಜೆ ನಗರ, ತಲಘಟ್ಟಪುರ ಸೇರಿದಂತೆ ನಗರದ ಸೂಕ್ಷ್ಮ ಪ್ರದೇಶಗಳ ಜಾಗಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.
ಇದನ್ನೂ ಓದಿ | ವಿಸ್ತಾರ Explainer | PFI BANNED | ಪಿಎಫ್‌ಐ ಹುಟ್ಟಿದ್ದು ಏಕೆ ? ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ಹೇಗೆ?