Site icon Vistara News

PFI BANNED | ಪಿಎಫ್‌ಐ ನಿಷೇಧಕ್ಕೆ ಸಿದ್ಧವಾಗುತ್ತಿತ್ತು ಒಂದೊಂದೇ ಡಾಕ್ಯುಮೆಂಟ್‌, ಇವತ್ತು ಕಾಲ ಕೂಡಿಬಂತು!

pfi raid

ನವದೆಹಲಿ: ೨೦೦೬ರಲ್ಲಿ ಸಿಮಿ ಸಂಘಟನೆಯನ್ನು ಕಾನೂನು ಬಾಹಿರ ಎಂದು ಘೋಷಿಸಿ ನಿಷೇಧಿಸಿದ ಬಳಿಕ ಅದರದ್ದೇ ಹೊಸ ರೂಪ ಎಂಬಂತೆ ಜೀವ ತಳೆದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ನಿಷೇಧಕ್ಕೆ ಕಳೆದ ಒಂದು ದಶಕದಿಂದಲೇ ಒತ್ತಡ ಹೇರಲಾಗುತ್ತಿತ್ತು. ಅದರಲ್ಲೂ ಕರ್ನಾಟಕದಲ್ಲಿ ನಡೆದ ಸಾಲು ಸಾಲು ಹಿಂದು ಕಾರ್ಯಕರ್ತರ ಹತ್ಯೆಯ ಸಂದರ್ಭದಲ್ಲಂತೂ ಈ ಬೇಡಿಕೆ ತಾರಕಕ್ಕೇರಿತ್ತು. ಆದರೆ, ಕೇಂದ್ರ ಸರಕಾರ ಈ ಬಗ್ಗೆ ತೀರ್ಮಾನವನ್ನು ಕೈಗೊಂಡಿರಲಿಲ್ಲ. ಆದರೆ, ಯಾವಾಗ ಕಳೆದ ಜುಲೈನಲ್ಲಿ ಬಿಹಾರದ ಪುಲ್ವಾಮಾ ಷರೀಫ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಈ ಸಂಘಟನೆ ಸಂಚು ರೂಪಿಸಿತ್ತು ಎನ್ನುವುದು ಬಯಲಾಯಿತೋ ಅಲ್ಲಿಂದ ಮುಂದೆ ಪ್ರಕ್ರಿಯೆಗಳು ಅತ್ಯಂತ ವೇಗವಾಗಿ ನಡೆದು ಈಗ ಸಂಘಟನೆಯನ್ನು ನಿಷೇಧಿಸಲಾಗಿದೆ.

ನಿಜವೆಂದರೆ, ಯಾವುದೇ ಒಂದು ಸಂಘಟನೆಯನ್ನು ನಿಷೇಧಿಸಲು ಆಗ್ರಹಿಸಿದಷ್ಟು ಸುಲಭವಾಗಿ ನಿಷೇಧ ಮಾಡಲು ಬರುವುದಿಲ್ಲ. ಅದಕ್ಕೆ ಸಾಕಷ್ಟು ಹಿನ್ನೆಲೆಗಳನ್ನು ಗಮನಿಸಬೇಕು, ದಾಖಲೆಗಳನ್ನು ಸಂಗ್ರಹಿಸಬೇಕು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದ ಬಗ್ಗೆ ಸ್ಪಷ್ಟವಾದ ವಿವರಗಳಿರಬೇಕು, ವಿದೇಶಿ ದೇಣಿಗೆ ಪಡೆದ, ಶಸ್ತ್ರಾಸ್ತ್ರ ತರಬೇತಿ ನೀಡಿದ ದಾಖಲೆಗಳು ಇರಬೇಕು. ಈಗ ಹಂತ ಹಂತವಾಗಿ ದಾಖಲೆಗಳನ್ನು ಸಂಗ್ರಹಿಸಿ ಬ್ಯಾನ್‌ ಮಾಡಲಾಗಿದೆ.

ಬ್ಯಾನ್‌ಗೆ ಏನೇನು ಹಿನ್ನೆಲೆ, ದಾಖಲೆ ಬೇಕು?
ಭಾರತದಲ್ಲಿ ಯಾವುದೇ ಸಂಘಟನೆಯನ್ನು ಬ್ಯಾನ್ ಮಾಡಲು ಅದರ ಮೇಲೆ ಈ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ದಾಖಲಾಗಿರಬೇಕು.
* ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‌ 153a, 121, 121a ನಡಿ ಕೇಸು ಇರಬೇಕು.
*UAPA ಕಾಯ್ದೆ ಸೆಕ್ಷನ್ 16 ರಿಂದ 20 ರವರೆಗೂ ಅನ್ವಯವಾಗಬೇಕು.
* ಅಕ್ರಮವಾದ ವಿದೇಶಿ ದೇಣಿಗೆ ಸಂಬಂಧ PMLA ಕಾಯ್ದೆಯಡಿ ಕೇಸು ದಾಖಲಾಗಿಬೇಕು, ದಾಖಲೆಗಳಿರಬೇಕು.
* ಟೆರರ್ ಫಂಡಿಂಗ್ ಹಾಗೂ ಫೈನಾನ್ಸಿಂಗ್‌ ಕೇಸುಗಳು.
* ಶಸ್ತ್ರಾಸ್ತ್ರ ಕಾಯಿದೆ ಮತ್ತು ಸ್ಪೋಟಕ ವಸ್ತು ಕಾಯಿದೆಯಡಿ ಕೇಸು ಆಗಿರಬೇಕು.
* ನಿಷೇಧಿತ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕೇಸ್ ಆಗಿರಬೇಕು.

ರಾಜ್ಯ ಸರಕಾರದಿಂದ ಶಿಫಾರಸು
ಮೇಲಿನ ಕಾಯ್ದೆಗಳಡಿ ಒಂದು ಸಂಘಟನೆಯ ಮೇಲೆ ಕೇಸುಗಳು ದಾಖಲಾಗಿದ್ದರೆ ಯಾವ ರಾಜ್ಯ ಬೇಕಾದರೂ ಆ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಬಹುದು. ಇದನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲನೆ ಮಾಡಿ ಸರ್ಕಾರಕ್ಕೆ ತಿಳಿಸಬೇಕು.
ಒಂದು ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಇಂತಹ ಕಾಯ್ದೆಗಳನ್ನ ಹಾಕಿ ತನಿಖೆ ಮಾಡುತ್ತಿದ್ದರೆ ಆಗಲೂ ಕೇಂದ್ರ ಗೃಹ ಸಚಿವಾಲಯ ಸರ್ಕಾರಕ್ಕೆ ತಿಳಿಸಬೇಕು. ಹೀಗೆ ಕೇಂದ್ರ ಗೃಹ ಇಲಾಖೆ ಸಮರ್ಪಕ ದಾಖಲೆಗಳನ್ನು ಹೊಂದಿದ್ದರೆ ಸರ್ಕಾರ ಒಂದು ಸಂಘಟನೆಯನ್ನು ಬ್ಯಾನ್ ಮಾಡಬಹುದು. ಪ್ರಸಕ್ತ ಪ್ರಕರಣದಲ್ಲಿ ಕರ್ನಾಟಕ ಮತ್ತು ಉತ್ತರ ಪ್ರದೇಶ ಸರಕಾರಗಳು ನಿಷೇಧಕ್ಕೆ ಶಿಫಾರಸು ಮಾಡಿದ್ದವು.

ನ್ಯಾಯಾಂಗ ಸಮಿತಿ ಶಿಫಾರಸು
ಕೇಂದ್ರ ಸರಕಾರ ನಿಷೇಧಕ್ಕೆ ತೀರ್ಮಾನಿಸಿದ ಬಳಿಕ ನ್ಯಾಯಾಂಗ ಸಮಿತಿ ಇದನ್ನು ಪರಿಶೀಲನೆ ಮಾಡುತ್ತದೆ. ಒಮ್ಮೆ ಸಮಿತಿ ನಿಷೇಧಕ್ಕೆ ಒಪ್ಪಿಗೆ ನೀಡಿದರೆ ಮಾತ್ರ ಬ್ಯಾನ್ ಮಾಡಬಹುದು. ಆ ಬಳಿಕವೇ ಕೇಂದ್ರ ಸರ್ಕಾರ ಅಧಿಸೂಚನೆಯನ್ನ ಹೊರಡಿಸುವ ಮೂಲಕ ಸಂಘಟನೆಯನ್ನು ಬ್ಯಾನ್ ಮಾಡುತ್ತದೆ.
ಹೀಗೆ ಬ್ಯಾನ್ ಮಾಡಿದ ಮಾಹಿತಿಯನ್ನ ಆ ಸಂಘಟನೆಯ ಕಚೇರಿ ಇದ್ದರೆ ಆ ಕಚೇರಿಗೆ ಅಧಿಸೂಚನೆಯ ಪ್ರತಿಯನ್ನ ಅಂಟಿಸಬೇಕು ಅಥವಾ ಪತ್ರಿಕಾ ಪ್ರಕಟಣೆ ನೀಡುವ ಮೂಲಕವು ಬ್ಯಾನ್ ಆದ ವಿಚಾರವನ್ನು ತಿಳಿಸಬಹುದು.

ಈಗ ಪಿಎಫ್ ಐ ಬ್ಯಾನ್ ಮಾಡಲು ಇದ್ದ ಕಾರಣಗಳು
* ಪ್ರಧಾನಿ ನರೇಂದ್ರ ಮೋದಿಯ ಮೇಲೆ ಬಿಹಾರದಲ್ಲಿ ದಾಳಿ ಮಾಡಲು ಸಿದ್ಧವಾಗಿದ್ದರು ಎಂಬ ಎನ್‌ಐಎ ಮಾಹಿತಿ ಮತ್ತು ತನಿಖೆ ಆಧರಿತ ಮಾಹಿತಿಗಳು.
* ಈಗಾಗಲೇ ಹಲವು ನಿಷೇಧಿತ ಸಂಘಟನೆಯ ಸದಸ್ಯರು ಪಿಎಫ್ ಐ ನಲ್ಲಿ ಇರುವುದು ಗೊತ್ತಾಗಿದೆ.
* ವಿದೇಶಗಳಿಂದ ಟೆರರ್ ಫಂಡಿಂಗ್ ಆಗುತ್ತಿರುವ ಬಗ್ಗೆ ಇ.ಡಿ ಈಗಾಗಲೇ ಮಾಹಿತಿ ಸಂಗ್ರಹಿಸಿದೆ.
*ಎನ್ ಆರ್ ಸಿ ಹಾಗೂ ಸಿ ಎಎ ವೇಳೆ ಹಲವು ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಿಎಫ್ ಐ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯ ಸಿಕ್ಕಿದೆ.
* ಪ್ರವೀಣ್ ನೆಟ್ಟಾರು ಹತ್ಯೆ ,ಹಿಂದೂ ಕಾರ್ಯಕರ್ತ ರುದ್ರೇಶ್ ಹತ್ಯೆ ಸೇರಿದಂತೆ ರಾಜ್ಯದ ಹಲವು ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್ ಐ ಕೈವಾಡ
* ತೆಲಂಗಾಣದಲ್ಲಿ ಕರಾಟೆ ಕ್ಲಾಸ್ ನೆಪದಲ್ಲಿ ಉಗ್ರ ಚಟುವಟಿಕೆ ತರಬೇತಿ ನೀಡುತ್ತಿದೆ.

ಇದನ್ನೂ ಓದಿ | BANNED | ಪಿಎಫ್‌ಐ, ಸಹಸಂಘಟನೆಗಳಿಗೆ ಐದು ವರ್ಷ ನಿಷೇಧ: ಕೇಂದ್ರ ಸರಕಾರ ಘೋಷಣೆ

Exit mobile version