Site icon Vistara News

PFI Banned | ಬ್ಯಾನ್‌ ಕ್ರಮ ಒಪ್ಪಲಾರೆ; ನಿಷೇಧಿಸಿದರೆ ಅಂಡರ್‌ವರ್ಲ್ಡ್‌ ಥರ ಕೆಲಸ ಮಾಡ್ತಾರೆ: ನಟ ಚೇತನ್‌

chethan ahimsa ಪಂಚಮಸಾಲಿ ಮೀಸಲಾತಿ ಒಕ್ಕಲಿಗ ಸಮುದಾಯದ ಮೀಸಲಾತಿ

ಬೆಂಗಳೂರು: ಸಂಸ್ಥೆ-ಸಂಘಟನೆ ಬ್ಯಾನ್ ಮಾಡುವ ಕ್ರಮವನ್ನು ನಾನು ಸಂಪೂರ್ಣವಾಗಿ ಒಪ್ಪಲಾರೆ. ಏಕೆಂದರೆ ಬ್ಯಾನ್ (PFI Banned) ಮಾಡಿದಷ್ಟು, ಅವುಗಳು ಮತ್ತಷ್ಟು ಬೆಳೆದುಕೊಳ್ಳುತ್ತವೆ. ಆರ್‌ಎಸ್‌ಎಸ್‌ ಅನ್ನು ಸಹ ಬ್ಯಾನ್ ಮಾಡಲಾಗಿತ್ತು. ಬ್ಯಾನ್ ಮಾಡಿದ ಸ್ವಲ್ಪ ದಿನ ಭಯ ಇತ್ತು. ಆದರೆ ಈಗ ಆ ಸಂಘಟನೆ ಹೆಚ್ಚೂ ಕಡಿಮೆ ದೇಶವನ್ನು ಆಳುತ್ತಿದೆ. ಹಾಗಂತ ಆರ್‌ಎಸ್‌ಎಸ್‌ ಅನ್ನು ಬ್ಯಾನ್ ಮಾಡುವ ಬಗ್ಗೆ ನನಗೆ ಒಪ್ಪಿಗೆ ಇಲ್ಲ. ಸಂಸ್ಥೆಗಳನ್ನು ಬ್ಯಾನ್ ಮಾಡಿದರೆ ಅವರು ಅಂಡರ್‌ವರ್ಲ್ಡ್ ಥರ ಕೆಲಸ ಮಾಡುವುದಕ್ಕೆ ಶುರು ಮಾಡುತ್ತಾರೆ ಎಂದು ನಟ ಚೇತನ್ ಪ್ರತಿಕ್ರಿಯೆ ನೀಡಿದರು.

ನನಗೆ ಪಿಎಫ್‌ಐ ವಿಷಯದಲ್ಲಿ ಸೈದ್ಧಾಂತಿಕವಾಗಿ ಒಪ್ಪಿಗೆ ಇಲ್ಲ. ನಮ್ಮ ಸಿದ್ಧಾಂತಕ್ಕೂ ಅವರ ಸಿದ್ಧಾಂತಕ್ಕೂ ಭಿನ್ನಾಭಿಪ್ರಾಯ ಇದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದಕ್ಕೂ ನನ್ನ ಸಮ್ಮತಿ ‌ಇಲ್ಲ. ಪಿಎಫ್‌ಐನಲ್ಲಿ ಅಕ್ರಮ ಕಂಡುಬಂದಿದ್ದಲ್ಲಿ ಕ್ರಮ ತೆಗೆದುಕೊಳ್ಳಲೇಬೇಕು. ಆದರೆ, ಪಿಎಫ್‌ಐ ಮಾತ್ರ ಅಲ್ಲ, ಆರ್‌ಎಸ್‌ಎಸ್‌ಗೆ ಎಲ್ಲಿಂದ ಹಣ ಬರುತ್ತದೆ ಎಂಬ ಪ್ರಶ್ನೆಯೂ ಬರಲಿದೆ ಎಂದು ಚೇತನ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ನೀವು ವಿಚಾರದಲ್ಲಿ ಸೋಲಿಸಿ, ಬರವಣಿಗೆ ಮೂಲಕ ಸೋಲಿಸಿ. ಆದರೆ ಬ್ಯಾನ್ ಮಾಡಿ ಯಾಕೆ ಸೋಲಿಸಬೇಕು? ಇದರಿಂದ ಅಪಾಯ ಇಲ್ಲ ಎಂದಾದರೆ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಕಾಂಗ್ರೆಸ್ ಕೂಡ ಪಿಎಫ್‌ಐ ಬ್ಯಾನ್ ಮಾಡಬೇಕು ಅಂತ ಸಪೋರ್ಟ್ ಮಾಡುತ್ತಿದೆ. ಮುಸ್ಲಿಮರ ಮತಗಳನ್ನು ಕ್ರೋಡೀಕರಣ ಮಾಡಿ, ಮತ ಪಡೆಯಲು ಹೀಗೆ ಮಾಡುತ್ತಿದೆ ಎಂದರು.

ಇದು ಜಾತ್ಯತೀತ ದೇಶ. ಧರ್ಮಗಳನ್ನು ನಿಮ್ಮ ಮನೆಗಳಲ್ಲಿ ಇಟ್ಟುಕೊಳ್ಳಿ. ಆದರೆ, ರಸ್ತೆಗೆ ಸಮಾನತೆ ಬೇಕು. ಪಿಎಫ್‌ಐ ಇಸ್ಲಾಮಿಕ್ ರಾಷ್ಟ್ರದ ಬಗ್ಗೆ ಮಾತನಾಡಿದರೆ ನಾವು ಸೈದ್ಧಾಂತಿಕವಾಗಿ ಖಂಡಿಸುತ್ತೇವೆ. ಅದರಂತೆ ಆರ್‌ಎಸ್‌ಎಸ್‌ ವಾದಿಸುವ ಹಿಂದು ರಾಷ್ಟ್ರದ ವಿಚಾರವನ್ನೂ ವಿರೋಧಿಸುತ್ತೇವೆ. ಪಿಎಫ್‌ಐ ಕೆಲಸಗಳನ್ನು ಬಹಳ ವರ್ಷಗಳಿಂದ ನೋಡಿಕೊಂಡು ಬರುತ್ತಿದ್ದೇವೆ. ಆದರೆ, ಅನೇಕರು ಪಿಎಫ್‌ಐ ಏನು ಎಂದು ನನಗೆ ಕರೆ ಮಾಡಿ ಕೇಳುತ್ತಿದ್ದಾರೆ. ನಿಷೇಧ ಮಾಡಿರುವುದರಿಂದ ಈ ಸಂಘಟನೆ ಬಗ್ಗೆ ಜನ ಹೆಚ್ಚಿಗೆ ವಿಚಾರಿಸುತ್ತಿದ್ದಾರೆ ಎಂದು ಚೇತನ್‌ ಹೇಳಿದ್ದಾರೆ.

ಇದನ್ನೂ ಓದಿ | PFI Banned | ಲವ್‌ ಜಿಹಾದ್‌ ಕೇಸ್‌ನಲ್ಲಿ ಕಪಿಲ್‌ ಸಿಬಲ್ ಸೇರಿ ಹಲವರಿಗೆ ಕೋಟಿ ರೂ. ವ್ಯಯಿಸಿದ್ದ ಪಿಎಫ್‌ಐ

Exit mobile version