ಉಡುಪಿ: ಪಿಎಫ್‌ಐ ಸಂಘಟನೆಯನ್ನು (PFI BANNED ) ಸಾಕ್ಷ್ಯಾಧಾರದೊಂದಿಗೆ ನಿಷೇಧ ಮಾಡಲಾಗಿದ್ದು, ಹಿಜಾಬ್ ಗಲಾಟೆಯಲ್ಲಿಯೂ ಸಂಘದ ಪಾತ್ರ ಇರುವುದು ಸಾಬೀತಾಗಿತ್ತು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ಪಿಎಫ್ಐ ಸಂಘಟನೆ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಮಾತನಾಡಿದ ಅವರು, ಈ ಕೆಲಸ ಎಂದೋ ಆಗಬೇಕಿತ್ತು. ಎಲ್ಲ ರಾಜ್ಯಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿದ ನಂತರವೇ ಬ್ಯಾನ್ ಮಾಡಿದ್ದಾರೆ. ವಿದೇಶಿ ಉಗ್ರ ಸಂಘಟನೆಗಳ ಜತೆ ಪಿಎಫ್ಐ ಕೈಜೋಡಿಸಿರುವುದು ಸಾಬೀತಾಗಿದೆ. ಸಮಾಜ ಒಡೆಯುವ ಕೆಲಸದಲ್ಲಿ ಸಂಘಟನೆ ನಿರತವಾಗಿತ್ತು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ಪ್ರಕರಣದಲ್ಲಿ ಪಿಎಫ್ಐ ಪಾತ್ರ ಇರುವುದು ಗೊತ್ತಾಗಿದೆ. ಸಿಎಫ್ಐಗೆ ಸೇರ್ಪಡೆಕೊಂಡ ನಂತರ ವಿದ್ಯಾರ್ಥಿನಿಯರ ವರ್ತನೆ ಬದಲಾಗಿತ್ತು. ವಿದ್ಯಾರ್ಥಿನಿಯರು ಟ್ವಿಟರ್ ಮೂಲಕ ದೇಶ ವಿರೋಧಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು.
ಸಿಎಫ್ಐ ನೇರವಾಗಿ ಪಾತ್ರವಹಿಸಿತ್ತು. ಸಿಎಫ್ಐ ಇರದಿದ್ದರೆ ಹಿಜಾಬ್ ವಿವಾದ ಆಗುತ್ತಿರಲಿಲ್ಲ. ಗುಪ್ತ ಸ್ಥಳದಲ್ಲಿ ಉಡುಪಿಯ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗಿತ್ತು. ಧರ್ಮದ ಅಂದ ಶ್ರದ್ಧೆ ಬೆಳೆಸಲು ತರಬೇತಿ ನೀಡಲಾಗಿತ್ತು. ಈ ಬಗ್ಗೆ ನಾನು ಮೊದಲೇ ಆರೋಪಿಸಿದ್ದೆ, ಈಗ ಎಲ್ಲವೂ ನಿಜವಾಗಿದೆ ಎಂದರು.
ಇನ್ನು ಪಿಎಫ್ಐ ವಿರುದ್ಧದ ಕಾರ್ಯಾಚರಣೆ ಹಿಂದೆ ಆರ್‌ಎಸ್‌ಎಸ್ ಇದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಪಿಎಫ್ಐ ಬಗ್ಗೆ ಯಾರೂ ಹೇಳಬೇಕಾಗಿಲ್ಲ, ಸಮಾಜಕ್ಕೆ ಗೊತ್ತಿದೆ. ಆರ್‌ಎಸ್‌ಎಸ್ ಹೇಳುವುದು ಬೇಡ, ನೈಜ ಮುಸ್ಲಿಮರ ಬಳಿ ಬೇಕಾದರೆ ಕೇಳಿ ಪಿಎಫ್ಐ ಬ್ಯಾನ್ ಮಾಡಬೇಕು ಎಂದು ಹೇಳುತ್ತಾರೆ.
ಇದನ್ನೂ ಓದಿ | ಪಿಎಫ್‌ಐ ಹುಟ್ಟಿದ್ದು ಹೇಗೆ?
ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆಯಾಯಿತು. ಪಾಕಿಸ್ತಾನದಲ್ಲಿ ಅದು ಸುದ್ದಿ ಆಯಿತು. ಪಿಎಫ್ಐ ಮಾಡಿದ ಹೋರಾಟ ಪಾಕಿಸ್ತಾನ ವಾಹಿನಿಗಳಲ್ಲಿ ಹೇಗೆ ಬಂತು? ವಿದೇಶದಿಂದ ಈ ರೀತಿಯ ಕೃತ್ಯಗಳಿಗೆ ಹಣ ಬಂದಿದೆ. ಸರ್ಕಾರ ಈಗ ಪಿಎಫ್ಐ ನಿಷೇಧಿಸಿದೆ. ಅವರು ಇನ್ನೊಂದು ಹೆಸರು ಇಟ್ಟುಕೊಂಡು ಸಂಘಟನೆ ಮಾಡುತ್ತಾರೆ. ಪಿಎಫ್ಐ ಸಂಘಟನೆಯಲ್ಲಿ ಇರುವವರನ್ನು ಸಮಾಜಘಾತಕ ಶಕ್ತಿಗಳಂತೆ ಪರಿಗಣಿಸಿ ಮುಸ್ಲಿಂ ಸಮುದಾಯವೇ ಹೊರಹಾಕಬೇಕು, ಮೌಲ್ವಿಗಳು ಅವರನ್ನು ದೂರವಿಡಬೇಕು. ನಾವು ಮಾಡಿದರೆ ಆರ್‌ಎಸ್‌ಎಸ್ ಮಾಡಿದ್ದು ಎಂದು ಹೇಳುತ್ತಾರೆ. ಮುಸ್ಲಿಮರು ಎಚ್ಚೆತ್ತುಕೊಳ್ಳಲು ಇದು ಸಕಾಲ. ಇಲ್ಲವಾದರೆ ಪಿಎಫ್ಐ, ಸಿಎಫ್ಐ ಜತೆ ಎಲ್ಲ ಮುಸ್ಲಿಮರ ಹೆಸರು ಹಾಳಾಗುತ್ತದೆ ಎಂದು ಎಚ್ಚರಿಸಿದರು.
ಶಾಂತಿಯ ಸಂದೇಶ ಸಾರುವ ಭಾರತಕ್ಕೆ ಸಂದ ಜಯ
ಶಿವಮೊಗ್ಗದ ಶಿಕಾರಿಪುರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರದಿಂದ ಐತಿಹಾಸಿಕ ನಿಲುವು ತಾಳಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ನಿರತ ಪಿಎಫ್ಐ ಸೇರಿದಂತೆ ಐದು ಸಂಘಟನೆಗಳಿಗೆ ಕೇಂದ್ರ ನಿಷೇಧ ಮಾಡಿದೆ. ನಾಡಿನ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮೊನ್ನೆ 15 ರಾಜ್ಯಗಳಲ್ಲಿ ದಾಳಿ ಮಾಡಿ ನೂರಾರು ಜನರನ್ನು ಬಂಧಿಸಲಾಗಿದೆ. ಈ ಸಂಘಟನೆಗಳ ನಿಷೇಧಕ್ಕೆ ತುಂಬಾ ದಿನಗಳ ಬೇಡಿಕೆಯಿತ್ತು. ಇದು ಶಾಂತಿಯ ಸಂದೇಶ ಸಾರುವ ಭಾರತಕ್ಕೆ ಸಂದ ಜಯ ಎಂದರು.
ಮಾತಾಂಧ ಶಕ್ತಿ ದೇಶದಲ್ಲಿ ನಿಷೇಧ; ಯಶ್ ಪಾಲ್ ಸುವರ್ಣ
ಉಡುಪಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ದೇಶಾದ್ಯಂತ ಕಾರ್ಯಾಚರಣೆ ಮಾಡಿದ ಎನ್‌ಐಎಗೆ ಧನ್ಯವಾದ ಸಲ್ಲಿಸಿದ್ದಾರೆ. ಮಾತಾಂಧ ಶಕ್ತಿಗಳನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆ. ನವರಾತ್ರಿ ಸಂದರ್ಭ ದೇಶಕ್ಕೆ ಶುಭಸುದ್ದಿ ಕೊಟ್ಟಿದ್ದಾರೆ. ನವರಾತ್ರಿ ಸಂದರ್ಭ ದೇಶದ್ರೋಹಿಗಳನ್ನು ಮಟ್ಟ ಹಾಕುವ ನಿರ್ಧಾರ ಮಾಡಲಾಗಿದೆ.
ಹಿಜಾಬ್ ಬೆನ್ನೆಲುಬಾಗಿ ನಿಂತಿದ್ದ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ಕರಾವಳಿ ಭಾಗ ಶಾಂತಿಯುತವಾಗಿರಲು ಎನ್ಐಎಗೆ ಬೆಂಬಲಿಸುತ್ತೇವೆ. ಅಮಿತ್ ಶಾ ಸೂಕ್ತ ದಾಖಲೆಗಳನ್ನು ಪಡೆದು ಕ್ರಮ ಕೈಗೊಂಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯನ್ನು ಮಾಡುವ ಸಂಘಟನೆಗೆ ದೇಶದಲ್ಲಿ ಅವಕಾಶ ಇಲ್ಲ. ವಿದೇಶಿ ಹಣ ವರ್ಗಾವಣೆ, ಹಿಂಸೆ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಪಿಎಫ್ಐ ಗೆ ಬೆಂಬಲವಾಗಿ ನಿಂತಿತ್ತು. ದುಷ್ಕೃತ್ಯ ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಕಾರಣ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸರ್ಕಾರ 150 ಜನರ ಮೇಲೆ ಇದ್ದ ಕೇಸು ವಾಪಸ್ ತೆಗೆದಿತ್ತು. ಪಿಎಫ್ಐ ದೇಶದ ಪರ, ಸಮಾಜದ ಉದ್ಧಾರಕ್ಕೆ ಎಂದೂ ಕೆಲಸ ಮಾಡಿಲ್ಲ. ಗಲಭೆ ಸೃಷ್ಟಿಸುವುದೇ ಪಿಎಫ್ಐ ಕೆಲಸವಾಗಿತ್ತು ಎಂದರು.
ಇದನ್ನೂ ಓದಿ | PFI BANNED | ಪಿಎಫ್‌ಐ ರಾಜ್ಯ ಪ್ರಧಾನ ಕಚೇರಿಗೆ ಬಿಗಿ ಭದ್ರತೆ, ಧಾರ್ಮಿಕ ಮುಖಂಡರ ಜತೆ ಚರ್ಚೆ, ರಾಜ್ಯಾದ್ಯಂತ ಕಟ್ಟೆಚ್ಚರ
ಮುಸ್ಲಿಂ ರಾಷ್ಟ್ರ ಮಾಡುವ ಸಂಕಲ್ಪ; ಸಂಸದ ಸಂಗಣ್ಣ ಕರಡಿ
ಕೇಂದ್ರ ಸರ್ಕಾರದಿಂದ ಪಿಎಫ್ಐ ಸಂಘಟನೆ ನಿಷೇಧ ಮಾಡಿರುವ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ ಎಂದು ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರದಲ್ಲಿ ದುಷ್ಕೃತ್ಯ ಮಾಡುವ ಸಂಸ್ಥೆ ಇದಾಗಿದ್ದು, ಬಿಹಾರದಲ್ಲಿ ಒಂದು ತರಬೇತಿ ಸಂಸ್ಥೆ ನಡೆಸುತ್ತಿದ್ದರು. ಈ ಸಂಘಟನೆಯಲ್ಲಿ 15 ಸಾವಿರ ಯವಕರು ತೊಡಗಿದ್ದಾರೆ. 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಸಂಕಲ್ಪ ಮಾಡಿದ್ದರು. ಈ ದೇಶದ ನೀರು, ಅನ್ನ ಸೇವಿಸಿ ಈ ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದರು. ಇದರಿಂದ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಮಾಡಿದೆ.
ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆಯಲ್ಲಿ ಪಿಎಫ್ಐ ನಿಷೇಧ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಚುನಾವಣೆ ದೃಷ್ಟಿ ಇಟ್ಟುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಈ ದೇಶ ಉಳಿಯಬೇಕಾಗಿದೆ. ಒಮ್ಮೆ ಬಿಜೆಪಿ ಗೆಲ್ಲಬಹುದು, ಒಮ್ಮೆ ಕಾಂಗ್ರೆಸ್ ಗೆಲ್ಲಬಹುದು. ಈ ರೀತಿ ಆರೋಪ ಮಾಡಿ ಆ ಜನಾಂಗದ ಮತಗಳನ್ನು ಗಳಿಸುವುದು ಕಾಂಗ್ರೆಸ್ ಪಿತೂರಿಯಾಗಿದೆ. ಈ ಹಿಂದೆ ಪಿಎಫ್ಐ ಸಂಘಟನೆ ಮುಖಂಡರ ಮೇಲಿನ ಕೇಸ್‌ಗಳನ್ನು ಕಾಂಗ್ರೆಸ್ ಹಿಂದಕ್ಕೆ ಪಡೆಯಿತು. ಪರೋಕ್ಷವಾಗಿ ಸಿದ್ದರಾಮಯ್ಯ ಬೆಂಬಲ ನೀಡಿದ್ದರು. ರಾಷ್ಟ್ರದ್ರೋಹಿ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧ ಮಾಡಬೇಕು. ಪಕ್ಷ ಯಾವುದೇ ಬರಬಹುದು, ನಮ್ಮ ದೇಶ, ಜನರನ್ನು ಉಳಿಸಿಕೊಳ್ಳಬೇಕು. ತರಬೇತಿ ನೀಡಿ ಹಿಂದುಗಳ ಮೇಲೆ ಅಟ್ಯಾಕ್ ಮಾಡಿದರೆ ಹೇಗೆ? ನಮಗೇನು ಸ್ವಾಭಿಮಾನ ಇಲ್ವಾ? ನಾವೂ ಬದುಕಬೇಕು ಅಲ್ವಾ? ಎಂದು ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದರು.
ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಿಎಫ್‌ಐ
ಪಿಎಫ್‌ಐ ನಿಷೇಧ ವಿಚಾರವನ್ನು ಬಸನಗೌಡ ಪಾಟೀಲ್ ಯತ್ನಾಳ್ ಸ್ವಾಗತಿಸಿದ್ದು, ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಿಎಫ್‌ಐ ಬ್ಯಾನ್ ಮಾಡಲು ಆಗ್ರಹ ಇತ್ತು. ನಮ್ಮ ಜನ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಯತ್ನಾಳ್ ಹೇಳಿದರು.
ನಮಗೆ ದೇಶ ಮೊದಲು- ಶಾಸಕ ಪರಣ್ಣ ಮುನವಳ್ಳಿ
ಕೇಂದ್ರ ಗೃಹ ಸಚಿವರು ಹಾಗೂ ಗೃಹ ಸಚಿವಾಲಯ ಒಳ್ಳೆಯ ನಿರ್ಧಾರ ಕೈಗೊಂಡಿದೆ. ದೇಶದ್ರೋಹಿ ಕೆಲಸ ಮಾಡಿದ ಸಂಘಟನೆ ಬ್ಯಾನ್ ಆಗಿರುವುದು ಖುಷಿಯ ವಿಚಾರ. ದೇಶಪ್ರೇಮ ಇಲ್ಲದ, ದೇಶದಲ್ಲಿ ಸಾಮರಸ್ಯ ಹಾಳುಮಾಡುವ ಸಂಘಟನೆಗಳ ಯಾವುದೇ ಆಗಿರಲಿ ಬ್ಯಾನ್ ಮಾಡಬೇಕು. ಎಲ್ಲ ಮಾಹಿತಿ ಪಡೆದೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದು ತುಂಬಾ ಒಳ್ಳೆಯ ನಿರ್ಧಾರ. ನಮಗೆ ದೇಶ ಮೊದಲು, ಅದಕ್ಕಾಗಿ ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಇದು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಬ್ಯಾನ್ ಮಾಡಿರುವುದಲ್ಲ . ದೇಶದ್ರೋಹಿಗಳನ್ನು ಮಟ್ಟ ಹಾಕಿರುವುದು. ಸ್ವತಃ ಮುಸ್ಲಿಂ ಸಮುದಾಯವೇ ಇದನ್ನು ಸ್ವಾಗತಿಸಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ | PFI Banned | ಪಿಎಫ್‌ಐ ನಿಷೇಧದಿಂದ ಬಿಜೆಪಿಗಿಂತಲೂ ಕಾಂಗ್ರೆಸ್‌ಗೇ ಖುಷಿ: ಕಾರಣವೇನು? ಪರಿಣಾಮವೆಷ್ಟು?