ಶಿವಮೊಗ್ಗ/ಮಡಿಕೇರಿ: PFI ಸಂಘಟನೆ ನಿಷೇಧದ ಹಿನ್ನೆಲೆಯಲ್ಲಿ, ಶಿವಮೊಗ್ಗ ಹಾಗೂ ಮಡಿಕೇರಿಗಳಲ್ಲಿರುವ PFI ಕಚೇರಿಗಳಿಗೆ ಪೊಲೀಸರು ದಾಳಿ ನಡೆಸಿ ಬಂದ್ ಮಾಡಿಸಿದ್ದಾರೆ.
ಶಿವಮೊಗ್ಗದಲ್ಲಿ ಎಸ್‌ಡಿಪಿಐ ಕಚೇರಿ ಹಾಗೂ ಐವರು ಕಾರ್ಯಕರ್ತರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೈಪಾಸ್ ರಸ್ತೆಯಲ್ಲಿರುವ ಎಸ್‌ಡಿಪಿಐ ಕಚೇರಿಗೆ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮೊಬೈಲ್ ಸೇರಿದಂತೆ ಹಲವು ದಾಖಲಾತಿ ವಶಪಡಿಸಿಕೊಳ್ಳಲಾಗಿದೆ. ಕೆಎಎಸ್ ಅಧಿಕಾರಿ ಚಿದಾನಂದ್ ವಟಾರೆ ನೇತೃತ್ವದಲ್ಲಿ ಗಾಂಧಿ ಬಜಾರ್‌ನಲ್ಲಿರುವ ಪಿಎಫ್ಐ ಕಾರ್ಯಕರ್ತ ಉಮರ್ ಫಾರೂಕ್ ಮನೆಗೆ ದಾಳಿ ನಡೆಸಲಾಗಿದೆ. ಮೊಬೈಲ್, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ಮನೆಗೆ ಬೀಗ ಹಾಕಲಾಗಿದೆ.
ಟಿಪ್ಪುನಗರದಲ್ಲಿರುವ ಎಸ್‌ಡಿಪಿಐ ಜಿಲ್ಲಾ ಮಾಜಿ ಅಧ್ಯಕ್ಷ ಸಲೀಂ ಖಾನ್ ಮನೆ, ಗೋಪಾಳ ಪ್ರೆಸ್ ಕಾಲೋನಿಯ ಪಿಎಫ್ಐ ಅಧ್ಯಕ್ಷ ಒಬೆದುಲ್ಲಾ ಮನೆ, ಬೈಪಾಸ್‌ನಲ್ಲಿರುವ ಗುಂಡಿ ಬಡಾವಣೆಯಲ್ಲಿ ಪಿಎಫ್ಐ ಮಾಜಿ ಅಧ್ಯಕ್ಷ ರಿಜ್ವಾನ್ ಮನೆ, ಸುಲ್ತಾನ್ ಮೊಹಲ್ಲಾದ ಎರಡನೇ ಕ್ರಾಸ್‌ನಲ್ಲಿರುವ ಯೂಸುಫ್ ಮನೆಯ ಮೇಲೂ ದಾಳಿ ನಡೆಸಿ ಪರಿಶೀಲಿಸಲಾಗಿದೆ.
ಮಡಿಕೇರಿ: ಕೊಡಗು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಡಿಕೇರಿ ಉಪವಿಭಾಗಧಿಕಾರಿ ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ದಾಳಿ ಹಾಗೂ ತಪಾಸಣೆ ನಡೆದಿದೆ. ಮಡಿಕೇರಿಯ ಮಹದೇವಪೇಟೆಯಲ್ಲಿನ PFI ಕಚೇರಿಗೆ ನಡೆದ ದಾಳಿಯಲ್ಲಿ ಕೊಡಗು ಪೊಲೀಸರು ಹಾಗೂ ಮಡಿಕೇರಿ ತಹಶೀಲ್ದಾರ್ ಭಾಗಿಯಾಗಿದ್ದರು.
ಸಂಘಟನೆ ಬ್ಯಾನ್ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಪೊಲೀಸರಿಂದ ತಪಾಸಣೆ ತೀವ್ರಗೊಂಡಿದೆ. 9.30ರಿಂದ ತಡರಾತ್ರಿ 12.30 ಗಂಟೆಯವರೆಗೆ ತಪಾಸಣೆ ನಡೆದಿದೆ. ತಪಾಸಣೆ ಬಳಿಕ ಕಚೇರಿ ಬಂದ್ ಮಾಡಿ ಸೀಲ್ ಮಾಡಲಾಗಿದೆ. ತಪಾಸಣೆಯಲ್ಲಿ ಯಾವುದೇ ರೀತಿಯ ದಾಖಲೆ ಗಳು ಲಭ್ಯವಾಗಿಲ್ಲ. ಮಡಿಕೇರಿಯಲ್ಲಿ ಕೇವಲ ಒಂದು ಕಚೇರಿಯನ್ನು ಸೀಲ್ ಮಾಡಲಾಗಿದೆ ಎಂದು ಉಪವಿಭಾಗ ಅಧಿಕಾರಿ ಯತೀಶ್ ಉಳ್ಳಾಲ್ ಹೇಳಿಕೆ ನೀಡಿದ್ದಾರೆ.