ಬೆಂಗಳೂರು: ಮೇಲುಕೋಟೆಯ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಯವರಿಗೆ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹತ್ಯೆ ಬೆದರಿಕೆಯೊಡ್ಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇಲುಕೋಟೆ ಮೂಲದ ಮಠವು ಬೆಂಗಳೂರಿನ ಮಲ್ಲೇಶ್ವರಲ್ಲಿ ಕಚೇರಿ, ಮಠ ಹೊಂದಿದೆ. ರಾಮಾನುಜಾಚಾರ್ಯರ ಸಂದೇಶವನ್ನು ದೇಶದ ವಿವಿಧೆಡೆ ಸಾರುತ್ತ, ರಾಮಾನುಜಾಚಾರ್ಯರ ಪ್ರತಿಮೆಗಳನ್ನು ಸ್ಥಾಪಿಸುವ ಕಾರ್ಯದಲ್ಲೂ ಸ್ವಾಮೀಜಿ ನಿರತರಾಗಿದ್ದಾರೆ.
ಪಿಎಫ್‌ಐ ಬೆದರಿಕೆ ಕುರಿತು ಕೇಂದ್ರ ಗೃಹ ಸಚಿವಾಲಯದ ಸರ್ಕಾರದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ದೊರಕಿದ್ದು, ಸ್ವಾಮೀಜಿಗೆ ವೈ ಕೆಟಗರಿ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಇಂಡಿಯಾ ಟುಡೆ ಹಾಗೂ ಎನ್‌ಡಿಟಿವಿ ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿವೆ.
ಪಿಎಫ್ ಸಂಘಟನೆಯ ಹಿಟ್ ಸ್ಕ್ವಾಡ್ ಈ ಬೆದರಿಕೆ ಒಡ್ಡಿರುವ ಕುರಿತು ಗೃಹ ಸಚಿವಾಲಯ ತಿಳಿಸಿದ್ದು, ಸ್ವಾಮೀಜಿಯವರಿಗೆ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಸಂಚರಿಸುವಾಗ ವೈ ಕೆಟಗರಿ ಭದ್ರತೆ ನೀಡುವಂತೆ ತಿಳಿಸಲಾಗಿದೆ.
ಈ ಕುರಿತು ಮಠದ ಅಧಿಕಾರಿಗಳನ್ನು ವಿಸ್ತಾರ ನ್ಯೂಸ್ ಸಂಪರ್ಕಿಸಿದಾಗ, ಮಠಕ್ಕೆ ಇಲ್ಲಿವರೆಗೆ ಸರ್ಕಾರದಿಂದ ಯಾವುದೇ ಮಾಹಿತಿ ಲಭಿಸಿಲ್ಲ. ನಾವೂ ಸಹ ಸುದ್ದಿವಾಹಿನಿಯಿಂದಲೇ ತಿಳಿಯುತ್ತಿದ್ದೇವೆ. ಪಿಎಫ್‌ಐ ಸಂಘಟನೆಯಿಂದ ಸ್ವಾಮೀಜಿಯವರಿಗೆ ನೇರವಾಗಿ ಬೆದರಿಕೆ ಬಂದಿಲ್ಲ. ಬಹುಶಃ ಗುಪ್ತಚರ ಸಂಸ್ಥೆಗೆ ಇದರ ಮಾಹಿತಿ ದೊರಕಿರಬೇಕು. ಈ ಕುರಿತು ಮಠಕ್ಕೆ ಪೊಲೀಸರಿಂದಲೂ ಯಾವುದೇ ಮಾಹಿತಿ ಇಲ್ಲಿವರೆಗೆ ಲಭಿಸಿಲ್ಲ ಎಂದು ತಿಳಿಸಿದ್ದಾರೆ.