ಮೈಸೂರು: ನಾಲ್ಕನೇ ತರಗತಿ ಓದುತ್ತಿರುವ ಬಾಲಕಿಗೆ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದ ವ್ಯಕ್ತಿಯ ಬಂಧನವಾಗಿದೆ. ತಿ.ನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ಈ ಘಟನೆ ನಡೆದಿದೆ. ಹೌಸಿಂಗ್ ಬೋರ್ಡ್ ನಿವಾಸಿ ಜಗದೀಶ್ ಬಂಧಿತ ಆರೋಪಿಯಾಗಿದ್ದಾನೆ.
ಜಗದೀಶ್ ತಿ.ನರಸೀಪುರ ನ್ಯಾಯಾಲಯದಲ್ಲಿ ಗುಮಾಸ್ತನಾಗಿ ಕೆಲಸ ನಿರ್ವಹಿಸಿ, ನಿವೃತ್ತಿ ಹೊಂದಿದ್ದ. ಹೌಸಿಂಗ್ ಬೋರ್ಡ್‌ನಲ್ಲಿ ವಾಸವಿದ್ದ ಜಗದೀಶ್ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬಾಲಕಿಯನ್ನು ಕರೆಸಿಕೊಂಡ ಈ ವೃದ್ಧ ಮರ್ಮಾಂಗವನ್ನು ಹಿಡಿದುಕೊಳ್ಳುವಂತೆ ಪೀಡುತ್ತಿದ್ದ. ಜತೆಗೆ ಬಟ್ಟೆಯನ್ನು ಬಿಚ್ಚುವಂತೆ ತಿಳಿಸುತ್ತಿದ್ದ. ಬಾಲಕಿ ಇದನ್ನೂ ನಿರಾಕರಿಸಿದಾಗ ಈ ವಿಚಾರವನ್ನು ಪೋಷಕರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ.
ಇತ್ತ ಬಾಲಕಿಯು ಎಂದಿನಂತೆ ಚಟುವಟಿಕೆಯಲ್ಲಿ ಇಲ್ಲದನ್ನೂ ಗಮನಿಸಿ ಪೋಷಕರು ವಿಚಾರಿಸಿದಾಗ ವಿಷಯವು ಬಹಿರಂಗವಾಗಿದೆ. ಕೂಡಲೇ ಪೋಷಕರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ 2 ದಿನ ಕಳೆದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಈ ವಿಷಯವು ಸ್ಥಳೀಯ ನಿವಾಸಿ ಹಾಗೂ ರೈತ ಸಂಘಕ್ಕೆ ತಿಳಿದು ಆರೋಪಿ ಜಗದೀಶ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಗೆ ಸರಿಯಾದ ಶಿಕ್ಷೆ ಆಗಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಟಿ.ನರಸೀಪುರ ಬಂದ್ ಮಾಡುವುದಾಗಿ ರೈತ ಸಂಘದ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ.
ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ
ವಿಜಯಪುರ ನಗರದ ಝಂಡಾ ಕಟ್ಟಿ ಬಳಿ ಯುವಕನ ಬರ್ಬರ ಹತ್ಯೆ ಆಗಿದೆ. ತಲೆಯ ಮೇಲೆ ಕಲ್ಲು ಎತ್ತು ಹಾಕಿ ಹತ್ಯೆ ಮಾಡಲಾಗಿದೆ. ಸಾಹಿಲ್ ಭಾಂಗಿ (21) ಹತ್ಯೆಯಾದವರು. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident : ಸಾವಿನಲ್ಲೂ ಒಂದಾದ ಪ್ರೇಮಿಗಳು; ರಸ್ತೆ ಅಪಘಾತದಲ್ಲಿ ಮೃತ್ಯು
ಎಣ್ಣೆಗೆ ಕಾಸು ಕೊಡದ ಪತ್ನಿಯನ್ನೇ ಕೊಂದ!
ಮುಂಬೈ: ಮದ್ಯ ಖರೀದಿಗೆ ಪತ್ನಿ ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆಗೈದ ಆಘಾತಕಾರಿ ಘಟನೆ ಮುಂಬೈಯಲ್ಲಿ ನಡೆದಿದೆ. ಘಟನೆ ಸಂಬಂಧ 42 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೊಯಿನುದ್ದೀನ್ ನಸ್ರುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ. ಆತನ ಪತ್ನಿ ಪರ್ವೀನ್ ಮೊಯಿನುದ್ದೀನ್ ಅನ್ಸಾರಿ (36) ಮೃತೆ (Crime News).
ಘಟನೆಯ ವಿವರ
ಈ ದಂಪತಿ ಗೋರೆಗಾಂವ್ ಮತ್ತು ಮಲಾಡ್ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯ ಬದಿಯಲ್ಲಿ ವಾಸಿಸುತ್ತಿದ್ದರು. ಗುರುವಾರ (ಡಿಸೆಂಬರ್ 7) ಮದ್ಯ ಖರೀದಿಸಲು ಮೊಯಿನುದ್ದೀನ್ ನಸ್ರುಲ್ಲಾ ಅನ್ಸಾರಿ ತನ್ನ ಪತ್ನಿಯನ್ನು ಒತ್ತಾಯಿಸಿದ್ದ. ಆದರೆ ಆಕೆ ಹಣ ನೀಡಲು ನಿರಾಕರಿಸಿದ್ದರು. ಇದರಿಂತ ಕುಪಿತನಾದ ಆತ ಆಕೆಯ ಮೇಲೆ ದಾಳಿ ನಡೆಸಿ ಬಿದಿರಿನ ಕೋಲಿನಿಂದ ಮನಸೋಇಚ್ಛೆ ಹೊಡೆದಿದ್ದ. ಇದರಿಂದ ತೀವ್ರ ಅಸ್ವಸ್ಥಗೊಂಡ ಪರ್ವೀನ್ ಮೃತಪಟ್ಟಿದ್ದಾರೆ ಎಂದು ಬೋರಿವಾಲಿ ಸರ್ಕಾರಿ ರೈಲ್ವೆ ಪೊಲೀಸರು (GRP) ತಿಳಿಸಿದ್ದಾರೆ.
ಮಾರಣಾಂತಿಕ ಗಾಯಗಳಾಗಿದ್ದ ಪರ್ವೀನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಬೋರಿವಾಲಿ ಜಿಆರ್‌ಪಿ ಮೊಯಿನುದ್ದೀನ್ ಅನ್ಸಾರಿ ವಿರುದ್ಧ ಕೊಲೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ನಗರದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಮಲಾಡ್‌ನ ಮಾಲ್ವಾನಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಯಿನುದ್ದೀನ್ ಅನ್ಸಾರಿ ಈ ಹಿಂದೆಯೂ ಹಲವು ಬಾರಿ ಹಣಕ್ಕಾಗಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವರಿಬ್ಬರು 2005ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ರಜಪೂತ ನಾಯಕನ ಹತ್ಯೆ ಸಂಚು ನಡೆದಿದ್ದು ಕೆನಡಾದಲ್ಲಿ; ಇದರ ಹಿಂದೆ ಇರೋದು ಯಾರು?
ನವದೆಹಲಿ: ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ (Sukhdev Singh Gogamedi) ಅವರ ಹತ್ಯೆಗೆ ಸಂಬಂಧಿಸಿದ ಒಂದೊಂದೇ ರಹಸ್ಯಗಳು ಬಯಲಾಗುತ್ತಿದೆ. ಸುಖದೇವ್ ಸಿಂಗ್ ಅವರ ಮನೆಯೊಳಗೆ ಹತ್ತಿರದಿಂದಲೇ ಹಲವು ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್‌ಗಳು ಸೇರಿ ಮೂವರನ್ನು ಹರಿಯಾಣದಲ್ಲಿ ಈಗಾಗಲೇ ಬಂಧಿಸಲಾಗಿದೆ. ರೋಹಿತ್ ರಾಥೋಡ್, ನಿತಿನ್ ಫೌಜಿ, ಉಧಮ್ ಸಿಂಗ್ ಬಂಧಿತರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಹತ್ಯೆಯ ಬೇರು ಕೆನಡಾದವರೆಗೂ ಹರಡಿರುವುದು ಕಂಡು ಬಂದಿದೆ. ಹತ್ಯೆಯ ಪಿತೂರಿ ಹೇಗೆ ನಡೆಯಿತು ಎನ್ನುವುದನ್ನು ಅವರು ಹಂತ ಹಂತವಾಗಿ ವಿವರಿಸಿದ್ದಾರೆ.
ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡುವ ಸಂಚಿನ ಮಾಸ್ಟರ್ ಮೈಂಡ್ ರಾಜಸ್ಥಾನದ ದರೋಡೆಕೋರ ರೋಹಿತ್ ಗೋದಾರಾ, ಕೆನಡಾದಲ್ಲಿ ವಾಸಿಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. ಕಳೆದ ವರ್ಷ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಗೆ ಸಂಬಂಧಿಸಿದ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ರೋಹಿತ್ ಗೋದಾರಾ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡುವ ಮತ್ತು ಶೂಟರ್‌ಗಳನ್ನು ನೇಮಿಸುವ ಜವಾಬ್ದಾರಿಯನ್ನು ಗೋದಾರಾ ತನ್ನ ಸಹಚರ ವೀರೇಂದ್ರ ಚರಣ್‌ಗೆ ವಹಿಸಿದ್ದ. ಅತ್ಯಾಚಾರ ಪ್ರಕರಣದಲ್ಲಿ ರಾಜಸ್ಥಾನದ ಅಜ್ಮೀರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಚರಣ್ ಮತ್ತು ಗೋದಾರಾ ಭೇಟಿಯಾಗಿದ್ದರು. ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನುವ ಕಾರಣಕ್ಕೆ ಸುಖದೇವ್ ಸಿಂಗ್ ವಿರುದ್ಧ ಗೋದಾರಾ ದ್ವೇಷ ಕಟ್ಟಿಕೊಂಡಿದ್ದ. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿದ್ದ ಎಂದು ಮೂಲಗಳು ತಿಳಿಸಿವೆ.
ಬಂಧಿತ ನಿತಿನ್ ಫೌಜಿ ವಿದೇಶಕ್ಕೆ ತೆರಳಿ ಅಲ್ಲಿ ನೆಲೆಸಲು ಬಯಸಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡ ಚರಣ್ ಆತನಿಗೆ ಹತ್ಯೆಯ ಜವಾಬ್ದಾರಿ ವಹಿಸಿ, ಕೆಲಸ ಮುಗಿದ ನಂತರ ವಿದೇಶಕ್ಕೆ ತೆರಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಹೀಗೆ ರೋಹಿತ್ ರಾಥೋಡ್, ನಿತಿನ್ ಫೌಜಿ ಅವರಿಗೆ ಹತ್ಯೆ ಮಾಡಲು ಸೂಚಿಸಿದ ಚರಣ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ.
ಗನ್ ಸಂಗ್ರಹ
ಚರಣ್ ತನ್ನ ಪ್ರಭಾವ ಬಳಸಿ ಇಬ್ಬರು ಶೂಟರ್‌ಗಳಿಗೂ ಬಂದೂಕುಗಳನ್ನು ತಲುಪಿಸಿದ್ದ. ಹತ್ಯೆಯ ನಂತರ ಇಬ್ಬರೂ ಬಂದೂಕುಗಳನ್ನು ನಗರದ ಹೋಟೆಲ್ ಬಳಿ ಹೂತು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂದೂಕುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಗೋದಾರಾ ಮತ್ತು ಸುಖದೇವ್ ಸಿಂಗ್ ನಡುವಿನ ಆಸ್ತಿ ವಿವಾದ ಬೆಳಕಿಗೆ ಬಂದಿದೆ. ಅಲ್ಲದೆ ಜಾತಿ ಸಮೀಕರಣದ ವಿಚಾರದಲ್ಲಿಯೂ ತನಿಖೆ ಮಾಡಲಾಗುತ್ತಿದೆ.
ಒಟ್ಟಿಗೆ ಚಹಾ ಸೇವಿಸಿದ್ದ ಕೊಲೆ ಪಾತಕಿಗಳು
ಬಲಪಂಥೀಯ ಸಂಘಟನೆಯಾಗಿರುವ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗಮೇಡಿ ಅವರನ್ನು ಡಿಸೆಂಬರ್ 5ರಂದು ಹತ್ಯೆ ಮಾಡುವ ಮೊದಲು ಜೈಪುರದ ಅವರ ಮನೆಯಲ್ಲಿ ಆರೋಪಿಗಳು ಅವರೊಂದಿಗೆ ಚಹಾ ಸೇವಿಸಿದ್ದರು. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಏಕಾಏಕಿ ಎದ್ದು ಆರೋಪಿಗಳು ಸುಖದೇವ್ ಸಿಂಗ್ ಅವರ ಬೆಂಗಾವಲು ಸಿಬ್ಬಂದಿ ಸೇರಿದಂತೆ ಹಲವರ ಮೇಲೆ ಗುಂಡಿನ ದಾಳಿ ಮಾಡಿದ್ದರು. ಬಳಿಕ ಸುಖ್ದೇವ್ ಅವರ ತಲೆಗೆ ರಿವಾಲ್ವರ್ ಇಟ್ಟು ಗುಂಡು ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ