ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸ್ಥಾಪಕ ಹಾಗೂ ಗಣಿ ದೊರೆ ಜನಾರ್ಧನ ರೆಡ್ಡಿ (Janardhana Reddy) ಕುಟುಂಬದ ಗನ್ ಮ್ಯಾನ್ (Gun man) ಕೈಯಲ್ಲಿದ್ದ ಪಿಸ್ತೂಲ್ ಕಳವಾಗಿದೆ (Pistol theft). ಬಳ್ಳಾರಿ ನಗರದ ಈರನಗೌಡ ಕಾಲೋನಿಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದು ಅಚ್ಚರಿ ಮೂಡಿಸಿದೆ.
ಜನಾರ್ಧನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ (Aruna Lakshmi) ಮತ್ತು ಮಗ ಕಿರೀಟಿಯ (Janardhana Reddy son kireeti) ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಬಾಲಾ ಮುಕುಂದ ಶುಕ್ಲಾ ಅವರಿಗೆ ಸೇರಿದ ಪಿಸ್ತೂಲ್ ಸೆ.28ರಂದು ಕಳವಾಗಿದ್ದು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರತಾ ಸಿಬ್ಬಂದಿ ತಮ್ಮ ರೂಮಿನಲ್ಲಿ ಪಿಸ್ತೂಲ್ ಇಟ್ಟು ಮುಖ್ಯದ್ವಾರ ಲಾಕ್ ಮಾಡಿ, ಪಕ್ಕದ ಬಾಗಿಲು ಲಾಕ್ ಮಾಡದೆ ಮಲಗಿರುವುದೇ ಕಳವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಸಂಶಯಾಸ್ಪದ ವ್ಯಕ್ತಿಯೊಬ್ಬ ಈ ಮನೆಗೆ ಬಂದು ಶುಕ್ಲಾ ಮಲಗಿರುವ ಹೊತ್ತಿನಲ್ಲಿ ಪಿಸ್ತೂಲನ್ನು ಎತ್ತಿಕೊಂಡು ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ವಿಡಿಯೊ ಲಭ್ಯವಾಗಿದ್ದು, ಆರೋಪಿ ಪತ್ತೆಗೆ ಕೌಲ್ ಬಜಾರ್ ಪೊಲೀಸರು ಮುಂದಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ಬಾಲಾ ಮುಕುಂದ ಶುಕ್ಲಾ ಕಳೆದ ಎರಡು ವರ್ಷದಿಂದ ಗನ್ ಮ್ಯಾನಾಗಿ ಕೆಲಸ ಮಾಡುತ್ತಿದ್ದಾನೆ. ಕೆಲ ವರ್ಷಗಳ ಹಿಂದೆಯೂ ಇವರ ಹತ್ತಿರ ಗನ್ ಮ್ಯಾನಾಗಿ ಕೆಲಸ ಮಾಡಿದ್ದಾನೆ.
ಇಬ್ಬರ ರಕ್ಷಣೆಯ ಜವಾಬ್ದಾರಿ
ಜನಾರ್ಧನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ಈಗ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಈಗಲೇ ರಾಜಕೀಯ ಕಾರಣಗಳಿಗಳಿಗಾಗಿಯೂ ಓಡಾಡುತ್ತಾರೆ. ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಅವರ ಉದ್ಯಮವನ್ನೂ ನೋಡಿಕೊಳ್ಳುತ್ತಿದ್ದಾರೆ.
ಪುತ್ರ ಕಿರೀಟಿ ಅವರು ಉದ್ಯಮದ ಜತೆಗೆ ಸಿನಿಮಾ ರಂಗದಲ್ಲೂ ಸಕ್ರಿಯರಾಗಿದ್ದಾರೆ. ಸಾಕಷ್ಟು ಓಡಾಟವನ್ನು ನಡೆಸುತ್ತಾರೆ. ಹೀಗಾಗಿ ಇವರಿಬ್ಬರಿಗೂ ಗನ್ ಮ್ಯಾನ್ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕಾಗಿ ಭದ್ರತಾ ವ್ಯವಸ್ಥೆಯನ್ನು ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Janardhana Reddy: ರಾಜಸ್ತಾನದ ಅಜ್ಮೀರ್ ದರ್ಗಾಕ್ಕೆ ಜನಾರ್ದನ ರೆಡ್ಡಿ ದಂಪತಿ ಭೇಟಿ
ಇದೀಗ ರೈಫಲ್ ಕದ್ದುಕೊಂಡು ಹೋಗಿರುವ ವ್ಯಕ್ತಿಯ ಹಿನ್ನೆಲೆಯೇನು? ಉದ್ದೇಶವೇನು ಎಂದು ಪೊಲೀಸರು ಪತ್ತೆ ಹಚ್ಚಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.