ಬೆಂಗಳೂರು: ಅಪಾಯಕಾರಿ ಮತ್ತು ಆಕ್ರಮಣಕಾರಿ ಎಂದೇ ಹೇಳಲಾದ ಅಮೇರಿಕನ್ ಪಿಟ್ ಬುಲ್ (American pitbull dog attack) ಜಾತಿಗೆ ಸೇರಿದ ಸಾಕು ನಾಯಿಯೊಂದು ನಾಲ್ಕು ವರ್ಷದ ಬಾಲಕಿ ಮೇಲೆ ದಾಳಿ (Dog attacks on 4 year old girl) ಮಾಡಿದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ.
ಕಳೆದ ಜನವರಿ 13ರಂದು ಬೆಂಗಳೂರಿನ ಸಂಜಯ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡರೂ ಅಪಾಯದಿಂದ ಪಾರಾಗಿದ್ದಾಳೆ.
ವ್ಯಕ್ತಿಯೊಬ್ಬರು ಆಕ್ರಮಣಕಾರಿ ಪ್ರವೃತ್ತಿ ಹೊಂದಿರುವ ಪಿಟ್ ಬುಲ್ ತಳಿಯ ನಾಯಿಯನ್ನು ಸಾಕಿದ್ದರು. ಆ ಮನೆಗೆ ನೇಪಾಳ ಮೂಲದ ಸುನಿಲ್ ಎಂಬಾತ ಕೆಲಸಕ್ಕೆ ಹೋಗುತ್ತಿದ್ದ. ಅದೊಂದು ದಿನ ಆತ ತನ್ನ ನಾಲ್ಕು ವರ್ಷದ ಮಗಳು ಸಾನಿಯಾಳನ್ನು ಕೂಡಾ ಜತೆಗೆ ಕರೆದುಕೊಂಡು ಹೋಗಿದ್ದ.
ಹಾಗೆ ಮನೆಗೆ ಹೋಗಿದ್ದ ವೇಳೆ ಡೇಂಜರಸ್ ಪಿಟ್‌ಬುಲ್ ಆ ಪುಟ್ಟ ಬಾಲಕಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಸುಮ್ಮನೆ ಇದ್ದ ಮಗುವಿನ ಮೇಲೆ ಎರಗಿದ ಆಕೆಯ ದೇಹದಲ್ಲಿ ಹಲವು ಕಡೆ ಈ ನಾಯಿ ಗಾಯ ಮಾಡಿದೆ.
ಸುನಿಲ್ ಮತ್ತು ಮನೆಯವರು ಸೇರಿ ಕೂಡಲೇ ಸಾನಿಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರಾದರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ. ವಿಚಾರ ತಿಳಿದ ಪೊಲೀಸರು ಬಾಲಕಿ ತಂದೆ ಸುನೀಲ್ ಬಳಿ ಮಾಹಿತಿ
ಕಲೆಹಾಕಿದ್ದಾರೆ, ಆದರೂ ದೂರು ನೀಡಲು ಬಾಲಕಿ ತಂದೆ ನಿರಾಕರಿಸಿದ್ದಾರೆ.
ಇದನ್ನೂ ಓದಿ: Dangerous Dog Breeds: 10 Most Dangerous Dog Breeds In World
ಮಾಲೀಕರೇ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಒಂದು ವೇಳೆ ನಾನು ದೂರು ನೀಡಿದರೆ ಅವರು ಚಿಕಿತ್ಸೆ ಕೊಡಿಸುವುದಿಲ್ಲ. ನನಗೆ ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲ. ಹೀಗಾಗಿ ದೂರು ನೀಡುವುದಿಲ್ಲ. ನನಗೆ ನನ್ನ ಮಗಳು ಬದುಕಿ ಬಂದರೆ ಸಾಕು ಎಂದು ತಂದೆ ಹೇಳಿದ್ದಾರೆ ಎನ್ನಲಾಗಿದೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Dog bite | ಬೆಳಗಾವಿಯಲ್ಲಿ 6 ತಿಂಗಳಲ್ಲಿ 14 ಸಾವಿರ ನಾಯಿ ಕಡಿತ ಪ್ರಕರಣ!
29ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ 12 ವರ್ಷದ ಬಾಲಕಿ
ಬೆಂಗಳೂರು: ಈ ಭೀಕರ ಘಟನೆಯನ್ನು ಊಹಿಸಿಕೊಂಡರೇ ಮೈ ಜುಮ್ಮೆನ್ನುತ್ತದೆ. ಇನ್ನೂ 12 ವರ್ಷದ ಬಾಲಕಿ (12 year old Girl) ಅವಳು. ಅಪ್ಪ ಸಾಫ್ಟ್‌ವೇರ್ ಎಂಜಿನಿಯರ್, ಅಮ್ಮ ಗೃಹಿಣಿ. ಹೊರಗಿನಿಂದ ನೋಡುವಾಗ ಯಾವ ತೊಂದರೆಯೂ ಇಲ್ಲದ ನೆಮ್ಮದಿಯ ಬದುಕು. ಆದರೆ, ಇದ್ಯಾವುದೂ ಬೇಡ ಎಂದು ಆ ಬಾಲಕಿ 29ನೇ ಮಹಡಿಯಿಂದ (Girl Ends life by jumping from 12th floor of apartment) ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ಛಿದ್ರ ಛಿದ್ರವಾಗಿರುವ ಆಕೆಯ ಮೃತದೇಹವನ್ನು ನೋಡಿ ಆ ತಾಯಿ-ತಂದೆಯ ಪರಿಸ್ಥಿತಿ ಹೇಗಿರಬೇಡ?
ಇಂಥಹುದೊಂದು ಭಯಾನಕ ಘಟನೆ ನಡೆದಿರುವುದು ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಬೇಗೂರು ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ತಂದೆ-ತಾಯಿ ಜೊತೆ ವಾಸವಿದ್ದ 29ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.
ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಈ ಕೃತ್ಯ ಮಾಡಿಕೊಂಡಿದ್ದಾಳೆ. ಆಕೆಯ ತಂದೆ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ತಾಯಿ ಮನೆ ವಾರ್ತೆ ಮಾಡುತ್ತಾ ಮಗಳನ್ನು ಚೆನ್ನಾಗಿ ನೋಡಿಕೊಂಡಿದ್ದರು. ಬೃಹತ್ ಅಪಾರ್ಟ್‌ಮೆಂಟ್‌ನ 29ನೇ ಮಹಡಿಯಲ್ಲಿ ವಾಸವಾಗಿದ್ದಾರೆ ಎಂದರೆ ಅವರ ಆರ್ಥಿಕ ಸ್ಥಿತಿಯನ್ನು ಅಂದಾಜಿಸಬಹುದು.
ಮಗಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಮಂಗಳವಾರ ರಾತ್ರಿ ಎಂದಿನಂತೆ ಮಗಳು ಮಲಗಿದ್ದಳು. ಬೆಳಗ್ಗೆ 4.30ರ ಹೊತ್ತಿಗೆ ಆಕೆ ಎದ್ದು ಹಾಲ್‌ಗೆ ಬಂದಿದ್ದಳು. ಆಗ ಅಮ್ಮನಿಗೂ ಎಚ್ಚರವಾಗಿ ಆಕೆ ಏನಾಯ್ತು ಅಂತ ಕೇಳಿದ್ದರು. ಆದರೆ ಆಕೆ ಸರಿಯಾಗಿ ಉತ್ತರ ಕೊಡದೆ ಮತ್ತೆ ತನ್ನ ಕೋಣೆಗೆ ಹೋಗಿ ಮಲಗಿದ್ದಳು.
ಆದರೆ, ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಆಗಬಾರದ ಘಟನೆ ನಡೆದೇ ಹೋಗಿತ್ತು. ಬಾಲಕಿ ಮತ್ತೆ ಎದ್ದು ಬಂದು ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ್ದಳು. ಮೇಲಿನಿಂದ ಏನೋ ಬಿದ್ದ ಸದ್ದು ಕೇಳಿ ಅಲ್ಲಿನ ಸೆಕ್ಯುರಿಟಿ ಓಡಿ ಬಂದಿದ್ದ. ಬಂದು ನೋಡಿದರೆ ಬಾಲಕಿಯ ದೇಹ ಛಿದ್ರವಾಗಿತ್ತು. ಕೂಡಲೇ ಆತ ಪೋಷಕರಿಗೆ, ಅಪಾರ್ಟ್ಮೆಂಟ್ ಅಸೋಸಿಯೇಷನ್ ಗೆ ಮಾಹಿತಿ ನೀಡಿದ್ದ.
ಬಾಲಕಿಯ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ತನಿಖೆ ಮುಂದುವರಿಸಿದ್ದಾರೆ.