Site icon Vistara News

Best Places to Visit in Hassan: ಹಾಸನ ಪ್ರವಾಸದಲ್ಲಿ ಈ ಸ್ಥಳಗಳನ್ನು ಮಿಸ್‌ ಮಾಡಬೇಡಿ

places to visit in hassan

ಮಳೆಗಾಲ ಶುರುವಾಗಿದ್ದೇ ತಡ, ಎಲ್ಲರಿಗೂ ಪ್ರವಾಸದ ಗುಂಗು ಹತ್ತಿದಂತಾಗಿದೆ. ಯಾವುದೇ ಸ್ಥಳಗಳಿಗೆ ಹೋದರೂ ಅಲ್ಲಿ ಪ್ರವಾಸಿಗರದ್ದೇ ದಂಡು. ಹಾಗೆಯೇ ಕರ್ನಾಟಕದ ಸುಂದರ ಜಿಲ್ಲೆಗಳಲ್ಲಿ ಒಂದಾದ ಹಾಸನಕ್ಕೂ ಪ್ರವಾಸಿಗರು ಪ್ರಯಾಣ ಬೆಳೆಸಲಾರಂಭಿಸಿದ್ದಾರೆ. ಹಾಸನ ಜಿಲ್ಲೆಗೆ ಹೋದಾಗ ಒಂದಿಷ್ಟು ಪ್ರವಾಸಿ ತಾಣಗಳನ್ನು ಮಿಸ್‌ ಮಾಡದೆಯೆ ನೋಡಲೇಬೇಕು. ಅಂತಹ ಅದ್ಭುತ ಸ್ಥಳಗಳ ಕುರಿತಾಗಿ ಇಲ್ಲಿದೆ ಸಂಪೂರ್ಣ (Best Places to Visit in Hassan) ವಿವರ.

ಹಾಸನಕ್ಕೆ ರಸ್ತೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಿಂದ ರಸ್ತೆ ಮಾರ್ಗ ಅಥವಾ ರೈಲ್ವೆ ಮಾರ್ಗದಲ್ಲಿ ಸಂಚರಿಸಬಹುದು. ಕಾರವಾರ ಎಕ್ಸ್‌ಪ್ರೆಸ್, ಕಣ್ಣೂರು ಎಕ್ಸ್‌ಪ್ರೆಸ್, ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಹಾಸನ ನಗರ ರೈಲು ನಿಲ್ದಾಣವನ್ನು ಬೆಂಗಳೂರು ಮತ್ತು ಮೈಸೂರಿನೊಂದಿಗೆ ಸಂಪರ್ಕಿಸುತ್ತವೆ. ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹಾಸನಕ್ಕೆ ಬಸ್ಸಿನ ಸಂಪರ್ಕವೂ ಚೆನ್ನಾಗಿದ್ದು, ನಾಲ್ಕು ತಾಸುಗಳಲ್ಲಿ ಹಾಸನ ತಲುಪಿಕೊಳ್ಳಬಹುದಾಗಿದೆ.

ಶೆಟ್ಟಿಹಳ್ಳಿ ಚರ್ಚ್‌


ಗೊರೂರು ಅಣೆಕಟ್ಟಿನ ಹಿನ್ನೀರಲ್ಲಿ ನೀವು ಶೆಟ್ಟಿಹಳ್ಳಿ ಚರ್ಚನ್ನು ಕಾಣಬಹುದು. 1860ರಲ್ಲಿ ಫ್ರೆಂಚ್‌ ಮಿಷನರಿ ಶ್ರೀಮಂತ ಮಾಲೀಕರು ನಿರ್ಮಿಸಿದ ಈ ಚರ್ಚ್‌ 1960ರಲ್ಲಿ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿತು. ಈಗ ಚರ್ಚಿನ ಬಹುತೇಕ ಭಾಗ ಉರುಳಿದ್ದು, ಅಳಿದುಳಿದ ಭಾಗವನ್ನು ನೀವು ನೋಡಬಹುದು. ಇದನ್ನು ತೇಲುವ ಚರ್ಚ್‌ ಎಂದೂ ಕರೆಯಲಾಗುತ್ತದೆ. ನವೆಂಬರ್‌ನಿಂದ ಮೇ ತಿಂಗಳವರೆಗೆ ಈ ಚರ್ಚ್‌ ಕಾಣಿಸಿಕೊಳ್ಳುತ್ತಿದೆ. ಜುಲೈನಿಂದ ಅಕ್ಟೋಬರ್‌ವರೆಗೆ ಇದು ಭಾಗಶಃ ಮುಳುಗಿರುತ್ತದೆ.

ಹಾಸನಾಂಬ ದೇವಾಲಯ


ಹಾಸನಾಂಬ ದೇವಾಲಯವು ಹಾಸನದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುತ್ತದೆ. 9 ದಿನಗಳ ನಂತರ ಮತ್ತೆ ಬಾಗಿಲು ಮುಚ್ಚಲಾಗುತ್ತದೆ. ದೇಗುಲದಲ್ಲಿ ದೇವರಿಗೆ ಮುಡಿಸಿದ ಹೂವು ಮತ್ತೆ ದೇವಸ್ಥಾನದ ಬಾಗಿಲು ತೆಗೆಯುವವರೆಗೂ ಬಾಡುವುದಿಲ್ಲ. ಹಾಗೆಯೇ ದೇವರಿಗೆ ಹಚ್ಚಿದ ದೀಪವೂ ಆರುವುದಿಲ್ಲ ಮತ್ತು ನೈವೇದ್ಯ ಮಾಡಿದ ಅನ್ನ ಪ್ರಸಾದ ಕೂಡ ಹಳಸಿರುವುದಿಲ್ಲ ಎಂದು ನಂಬಲಾಗುತ್ತದೆ. ಇದು ಹಾಸನದ ನಗರದೊಳಗೇ ಇರುವ ದೇಗುಲವಾಗಿರುವುದರಿಂದ ಅರಾಮವಾಗಿ ಇಲ್ಲಿಗೆ ನೀವು ತಲುಪಬಹುದು.

ಲಕ್ಷ್ಮಿ ದೇವಿ ದೇವಸ್ಥಾನ


ಹಾಸನದಿಂದ 20 ಕಿ.ಮೀ ದೂರದಲ್ಲಿರುವ ದೊಡ್ಡಗದ್ದವಳ್ಳಿ ಹಳ್ಳಿಯಲ್ಲಿ ಲಕ್ಷ್ಮಿ ದೇವಿ ದೇವಸ್ಥಾನವಿದೆ. ಇದನ್ನು 12ನೇ ಶತಮಾನದಲ್ಲಿ ಹೊಯ್ಸಳ ರಾಜವಂಶದ ಕಾಲದಲ್ಲಿ ನಿರ್ಮಿಸಲಾಯಿತು. ವಿಷ್ಣುವರ್ಧನನ ಆಳ್ವಿಕೆಯಲ್ಲಿ ಶ್ರೀಮಂತ ವ್ಯಾಪಾರಿ ಕುಲ್ಲಹನ ರಾಹುತ ಮತ್ತು ಅವನ ಹೆಂಡತಿ ಸಹಜ ದೇವಿ ಅವರು ಈ ದೇಗುಲವನ್ನು ನಿರ್ಮಿಸಿದರು. ಈ ದೇವಸ್ಥಾನವು ಹಳೇಬೀಡಿನಿಂದ 16 ಕಿ.ಮೀ ಮತ್ತು ಬೇಲೂರಿನಿಂದ 25 ಕಿ.ಮೀ ದೂರದಲ್ಲಿದೆ.

ಮಹಾರಾಜ ಪಾರ್ಕ್


ಹಾಸನ ನಗರದ ಅತ್ಯಂತ ದೊಡ್ಡ ಉದ್ಯಾನವನವೆಂದರೆ ಅದು ಮಹಾರಾಜ ಪಾರ್ಕ್‌. ಹಸಿರು ಹುಲ್ಲು ಮತ್ತು ದೊಡ್ಡ ದೊಡ್ಡ ಮರಗಳಿಂದ ಸುತ್ತುವರಿದಿರುವ ಈ ಪಾರ್ಕ್‌ನಲ್ಲಿ ಜನರು ನಿಸರ್ಗ ಸೌಂದರ್ಯ ಸವಿಯುತ್ತ ಓಡಾಡಲೆಂದು ಕಾಲುದಾರಿಗಳನ್ನು ಮಾಡಲಾಗಿದೆ. ನಗರದೊಳಗೇ ಸಣ್ಣ ಪಿಕ್ನಿಕ್‌ ಮಾಡಬೇಕು ಎನ್ನುವವರಿಗೆ ಇದು ಸೂಕ್ತ ಸ್ಥಳ. ಇಲ್ಲಿ ಈಜುಕೊಳದಿಂದ ಹಿಡಿದು ಮಕ್ಕಳಿಗೆ ಆಟವಾಡುವುದಕ್ಕೆಂದೇ ಹಲವಾರು ಆಟದ ಸಾಮಾಗ್ರಿಗಳನ್ನು ಇರಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಇಲ್ಲಿಗೆ ಭೇಟಿ ನೀಡಬಹುದು.

ಗೊರೂರು ಅಣೆಕಟ್ಟು


ಕಾವೇರಿ ನದಿಯ ಉಪನದಿಯಾದ ಹೇಮಾವತಿ ನದಿಗೆ ಕಟ್ಟಲಾದ ಗೊರೂರು ಅಣೆಕಟ್ಟು ಹಾಸನದಿಂದ ಕೇವಲ 9 ಕಿ.ಮೀ. ದೂರದಲ್ಲಿದೆ. ಈ ಅಣೆಕಟ್ಟನ್ನು 1979ರಲ್ಲಿ ನಿರ್ಮಿಸಲಾಗಿದೆ. ಆಣೆಕಟ್ಟು 4692 ಮೀಟರ್‌ ಉದ್ದ ಮತ್ತು 58 ಮೀಟರ್‌ ಎತ್ತರವಿದೆ. ಇಲ್ಲಿಂದ ನೀರನ್ನು ಹೊರಗೆ ಬಿಡಲು ಆರು ಗೇಟುಗಳಿವೆ. ಈ ಸ್ಥಳಕ್ಕೆ ನೀವು ಹಾಸನ ನಗರದಿಂದ ಬಸ್‌, ಟ್ಯಾಕ್ಸಿ ಅಥವಾ ಆಟೋ ಮೂಲಕ ಹೋಗಬಹುದು. ಸುಂದರ ದೃಶ್ಯ ಸವಿಯುತ್ತ ವಿಶ್ರಾಂತಿ ಪಡೆಯಲು ಬಯಸುವವರಿಗೆ ಇದು ಸೂಕ್ತ ಸ್ಥಳವಾಗಿದೆ.

ಈಶ್ವರ ದೇವಾಲಯ


13ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾದ ದೇವಸ್ಥಾನ ಈಶ್ವರ ದೇವಸ್ಥಾನ. ಇದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿದೆ. ಈ ದೇಗುಲ ವಿಶೇಷವಾಗಿ ವೃತ್ತಾಕಾರದಲ್ಲಿದ್ದು, 16 ಬಿಂದುಗಳ ನಕ್ಷತ್ರಾಕಾರದ ಗುಮ್ಮಟ ಮಂಟಪವೂ ಇದೆ. ಇಲ್ಲಿ ಶೈವ, ವೈಷ್ಣವ, ಶಕ್ತಿ ಮತ್ತು ವೈದಿಕ ದಂತಕಥೆಗಳನ್ನು ಚಿತ್ರಿಸುವಂತಹ ಕಲಾಕೃತಿಗಳಿವೆ. ಇದು ಕೂಡ ಹೊಯ್ಸಳ ವಾಸ್ತುಶಿಲ್ಪವಿರುವ ದೇವಸ್ಥಾನವಾಗಿದೆ. ಇಲ್ಲಿನ ಹಲವು ಭಾಗವು 14ನೇ ಶತಮಾನದಲ್ಲಿ ವಿರೂಪಗೊಂಡಿವೆ. ಈ ಈಶ್ವರ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ರಕ್ಷಿಸಿದೆ. ಈ ದೇವಸ್ಥಾನ ಹಾಸನದಿಂದ ಸುಮಾರು 41 ಕಿ.ಮೀ. ದೂರದಲ್ಲಿದೆ.

ಶ್ರವಣಬೆಳಗೊಳ


ಶ್ರವಣಬೆಳಗೊಳದಲ್ಲಿ ಚಂದ್ರಗಿರಿ ಮತ್ತು ವಿಂದ್ಯಗಿರಿ ಎಂಬ ಎರಡು ಬೆಟ್ಟಗಳಿವೆ. ಆಚಾರ್ಯ ಭದ್ರಬಾಹು ಮತ್ತು ಅವರ ಶಿಷ್ಯ ಚಂದ್ರಗುಪ್ತ ಮೌರ್ಯರು ಅಲ್ಲಿ ಧ್ಯಾನ ಮಾಡಿದರು ಎಂದು ನಂಬಲಾಗಿದೆ. ವಿಂದ್ಯಗಿರಿಯಲ್ಲಿ 58 ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರನ ಪ್ರತಿಮೆಯಿದೆ. ಇದು ವಿಶ್ವದ ಅತಿ ದೊಡ್ಡ ಏಕಶಿಲೆ ಪ್ರತಿಮೆಯಾಗಿದೆ. ಪ್ರತಿಮೆಯ ತಳದಲ್ಲಿ ಪ್ರಾಕೃತದ ಶಾಸನಗಳಿವೆ. ಶಾಸನಲ್ಲಿ ಪ್ರತಿಮೆ ನಿರ್ಮಾಣಕ್ಕೆ ಧನಸಹಾಯ ನೀಡಿದ ರಾಜ ಚಾವುಂಡರಾಯನನ್ನು ಪ್ರಶಂಶಿಸಲಾಗಿದೆ. ಇದು ಕ್ರಿ.ಶ.981ರ ಕಾಲದ ಪ್ರತಿಮೆಯಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕ ಮಾಡಲಾಗುತ್ತದೆ. ಅದಕ್ಕೆಂದು ಸಾವಿರಾರು ಭಕ್ತರು ಸೇರುತ್ತಾರೆ. ಶ್ರವಣಬೆಳಗೊಳವು ಹಾಸನದಿಂದ 51ಕಿ.ಮೀ. ದೂರದಲ್ಲಿದೆ.

ಹಳೇಬೀಡು


ಹಾಸನದಿಂದ 30 ಕಿ.ಮೀ ದೂರದಲ್ಲಿ ಹಳೇಬೀಡಿದ್ದು, ಅಲ್ಲಿ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಕೇದಾರೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವನ್ನು 1121ರ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ಸರೋವರದಿಂದ ಸುತ್ತುವರೆದಿರುವ ದೇವಾಲಯದ ಸಂಕೀರ್ಣವು ಪುರಾತತ್ತ್ವ ಶಾಸ್ತ್ರದ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಹೊಯ್ಸಳೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿಯೇ ಸಂತಾಲೇಶ್ವರ, ಹೊಯ್ಸಳೇಶ್ವರ ಮತ್ತು ವಿಷ್ಣುವರ್ಧನನ ಮಂತ್ರಿ ಕೇತುಮಲ್ಲನಿಗೆ ಸಮರ್ಪಿತವಾದ ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಕೆತ್ತನೆಯನ್ನು ನೋಡುವುದರಲ್ಲಿ ನೀವು ಮೈ ಮರೆತುಬಿಡುತ್ತೀರಿ.

ಬೂಸೇಶ್ವರ ದೇವಾಲಯ


ಹಾಸನದಿಂದ 12 ಕಿ.ಮೀ ದೂರದಲ್ಲಿರುವ ಕೊರವಂಗಲದಲ್ಲಿ ಬೂಸೇಶ್ವರ ದೇವಸ್ಥಾನವಿದೆ. ಇದೂ ಕೂಡ 12ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯವಾಗಿದೆ. ಹೊಯ್ಸಳ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯವನ್ನು ರಾಜ ಬಲ್ಲಾಳನ ಆಳ್ವಿಕೆಯಲ್ಲಿ ಬುಚಿ ಹೆಸರಿನ ಶ್ರೀಮಂತ ಕಟ್ಟಿಸಿದನು ಎಂದು ನಂಬಲಾಗಿದೆ. ಇದು ಅವಳಿ ದೇವಾಲಯವಾಗಿದ್ದು, ಎರಡು ಗರ್ಭಗುಡಿಗಳು ಪರಸ್ಪರ ಎದುರು ಬದುರು ಇವೆ. ಇಲ್ಲಿ ರಾಮಾಯಣ, ಮಹಾಭಾರತ, ಭಾಗವತ ಪುರಾಣದ ದೃಶ್ಯಗಳನ್ನು ಚಿತ್ರಿಸುವ ಶಿಲ್ಪಕಲೆಯೊಂದಿಗೆ ಶೈವ, ವೈಷ್ಣವ, ಶಕ್ತಿ ಮತ್ತು ವೈದಿಕ ದೇವತೆಗಳ ಕಲಾಕೃತಿಗಳನ್ನು ಕಾಣಬಹುದು. ಈ ದೇವಾಲಯವನ್ನು ಕೂಡ ಭಾರತೀಯ ಪುರಾತತ್ವ ಇಲಾಖೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ರಕ್ಷಿಸಿದೆ.

ಅಲ್ಲಾಳನಾಥ ದೇಗುಲ


ಹಾಸನದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು ಅಲ್ಲಾಳನಾಥ ದೇಗುಲ. ಈ ದೇವಸ್ಥಾನವು ಬೆಟ್ಟದ ಮೇಲಿರುವ ದೇವಸ್ಥಾನವಾಗಿದೆ. ಬೆಟ್ಟದ ಮೇಲೆ ಹತ್ತಿ ಸುತ್ತಲಿನ ಪರಿಸರವನ್ನು ನೀವು ಕಾಣಬಹುದು. ಇಲ್ಲಿ ಐತಿಹಾಸಿಕ ಕಲಾಕೃತಿಗಳನ್ನೂ ಕಾಣಬಹುದಾಗಿದೆ. ಹಾಸನ ಪಟ್ಟಣದಿಂದ ಕಾಲ್ನಡಿಗೆ ಮೂಲಕ ಅಥವಾ ಬಸ್ಸಿನ ಮೂಲಕ ಈ ದೇವಸ್ಥಾನಕ್ಕೆ ತಲುಪಬಹುದು. ಈ ದೇಗುಲದ ಮಾರನಾಥ ಚರ್ಚ್‌ ಬಳಿಯೇ ಇದೆ.

ಹುಲ್ಲೆಕೆರೆ ಪುಷ್ಕರಣಿ


ಹುಲ್ಲೆಕೆರೆ ಪುಷ್ಕರಣಿಯು ಹಾಸನದಿಂದ 30ಕಿ.ಮೀ. ದೂರದಲ್ಲಿ ಬೇಲೂರು ತಾಲೂಕಿನಲ್ಲಿದೆ. ಹೊಯ್ಸಳ ರಾಜರು ನಿರ್ಮಿಸಿರುವ ಈ ಪುಷ್ಕರಣಿಯು ವಾಸ್ತುಶಿಲ್ಪದ ಅದ್ಭುತ ಮಾದರಿಯಾಗಿದೆ. ಸುಂದರ ಹಸಿರು ಪರಿಸರ, ನೀರಿನವರೆಗೂ ಇಳಿದು ಹೋಗಲು ಸಾಧ್ಯವಾಗುವಂತೆ ನಿರ್ಮಿಸಿಲಿರುವ ಕಲ್ಲಿನ ಸುಂದರ ಮೆಟ್ಟಿಲುಗಳು ಆಕರ್ಷಕವಾಗಿವೆ. ಇಲ್ಲಿ ಅತ್ಯದ್ಭುತವಾದ ಕೆತ್ತನೆಯ ಗುಡಿ ಸೌಧಗಳನ್ನು ನೀವು ಕಾಣಬಹುದು. ಫೋಟೋಶೂಟ್‌ಗೆ ಈ ಜಾಗ ಹೇಳಿ ಮಾಡಿಸಿದಂತಿದೆ.

ಪಾರ್ವತಮ್ಮ ಬೆಟ್ಟ


ಈ ಬೆಟ್ಟವು ಹಾಸನ ಜಿಲ್ಲೆಯ ಆಲೂರಿನಿಂದ 12 ಕಿ.ಮೀ ಮತ್ತು ಹಾಸನ ಜಿಲ್ಲಾ ಕೇಂದ್ರದಿಂದ 36 ಕಿ.ಮೀ ದೂರದಲ್ಲಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3200 ಅಡಿ ಎತ್ತರದಲ್ಲಿದೆ. ಈ ಬೆಟ್ಟದ ಮೇಲೆ ಪಾರ್ವತಮ್ಮ ದೇವಾಲಯವಿದ್ದು, ಚಾರಣ ಮಾಡುವ ಮನಸ್ಸಿರುವವರಿಗೆ ಸುಲಭವಾಗಿ ಹತ್ತಲು ಸಾಧ್ಯವಾಗುವಂತಹ ಬೆಟ್ಟ ಇದಾಗಿದೆ. ಬೆಟ್ಟದ ಮೇಲಿನಿಂದ ಸುಂದರ ದೃಶ್ಯವನ್ನು ನೀವು ಕಾಣಬಹುದು. ಮಳೆಗಾಲದ ಸಮಯದಲ್ಲಿ ಮಂಜಿನಿಂದ ತುಂಬಿರುವ ಬೆಟ್ಟವು ಚಾರಣಿಗರಿಗೆ ಸ್ವರ್ಗದಂತೆ ಕಾಣುತ್ತದೆ. ವರ್ಷಕ್ಕೊಂದು ಬಾರಿ ಈ ದೇವಾಲಯದಲ್ಲಿ ಪಾರ್ವತಮ್ಮ ಜಾತ್ರಾ ಮಹೋತ್ಸವವನ್ನೂ ನಡೆಸಲಾಗುತ್ತದೆ.

ಬೇಲೂರು


ಹಾಸನದಿಂದ 38 ಕಿ.ಮೀ ದೂರದಲ್ಲಿ ನೀವು ಬೇಲೂರು ದೇಗುಲವನ್ನು ಕಾಣಬಹುದು. ಇದನ್ನು ದಕ್ಷಿಣ ವಾರಾಣಸಿ ಎಂದೂ ಕರೆಯಲಾಗುತ್ತದೆ. ಭಗವಾನ್‌ ವಿಷ್ಣುವಿನ ಅವತಾರವಾದ ಚೆನ್ನಕೇಶವನ ದೇಗುಲ ಇದಾಗಿದೆ. ಯಗಚಿ ನದಿ ದಡದಲ್ಲಿರುವ ಈ ದೇಗುಲ ಹೊಯ್ಸಳ ವಾಸ್ತು ಶೈಲಿಯಲ್ಲಿದೆ. ಚೆನ್ನಕೇಶವ ದೇವಾಲಯವನ್ನು 1117ರ ಸಮಯದಲ್ಲಿ ನಿರ್ಮಿಸಲಾಯಿತು. ನಕ್ಷತ್ರಾಕಾರದ ವೇದಿಕೆಯ ಮೇಲೆ ದ್ರಾವಿಡ, ರಾಜಗೋಪುರ ಸೇರಿಸಂತೆ ಒಟ್ಟು ಮೂರು ಪ್ರವೇಶದ್ವಾರಗಳಿವೆ. ಇಲ್ಲಿ ಪುಷ್ಕರಣಿ, ಚೆನ್ನಕೇಶವನ ಪತ್ನಿ ರಾಗನಾಯಕಿ ಮತ್ತು ಸೌಮ್ಯನಾಯಕಿಯ ಎರಡು ದೇವಾಲಯಗಳನ್ನು ಕಾಣಬಹುದು.

ಭೋಗ ನರಸಿಂಹ ಸ್ವಾಮಿ ದೇವಾಲಯ


ಭೋಗ ನರಸಿಂಹ ದೇವಾಲಯವು ಹಾಸನದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ದೇವಸ್ಥಾನಕ್ಕೆ ಲಕ್ಷ್ಮಿ ವರದ ಯೋಗ ನರಸಿಂಹ ಸ್ವಾಮಿ ದೇವಾಲಯ ಎಂದೂ ಕರೆಯಲಾಗುತ್ತದೆ. ವಿಷ್ಣು ದೇವರಿಗೆ ಸಮರ್ಪಿತವಾಗಿರುವ ಈ ದೇವಸ್ಥಾನದಲ್ಲಿ ಅತ್ಯಂಯ ಹಳೆಯ ಕಾಲದ ವಾಸ್ತುಶಿಲ್ಪವನ್ನು ಕಾಣಬಹುದು. ಪುರಾತನ ಗ್ರಂಥಗಳ ಕಥೆಗಳನ್ನು ವಿವರಿಸುವಂತ ಕೆತ್ತನೆಗಳನ್ನು ಇಲ್ಲಿನ ಗೋಡೆಗಳ ಮೇಲೆ ಕಾಣಬಹುದು. ಹಾಸನದಿಂದ ಸುಮಾರು 13 ಕಿ.ಮೀ. ದೂರದಲ್ಲಿರುವ ಶಾಂತಿಗ್ರಾಮದಲ್ಲಿ ಈ ದೇವಾಲಯವಿದೆ.

Exit mobile version